ಬಿಡದಿ ಟೌನ್ ಶಿಪ್‌ ಡಿನೋಟಿಫಿಕೇಶನ್‌ ಅಸಾಧ್ಯ: ಡಿಕೆಶಿ

KannadaprabhaNewsNetwork |  
Published : May 18, 2026, 01:15 AM IST
17ಕೆಆರ್ ಎಂಎನ್ 3.ಜೆಪಿಜಿಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ರೈತ ಮುಖಂಡರೊಂದಿಗೆ ಚರ್ಚೆ ನಡೆಸಿದರು. | Kannada Prabha

ಸಾರಾಂಶ

ರಾಮನಗರ: ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ ವಿರೋಧಿಸಿ 428 ದಿನಗಳಿಂದ ಹೋರಾಟ ನಡೆಸುತ್ತಿರುವ ರೈತ ಮುಖಂಡರೊಂದಿಗೆ ಭಾನುವಾರ ಸಮಾಲೋಚನೆ ನಡೆಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಬಂಧಪಟ್ಟ ಅಧಿಕಾರಿಗಳಿಗೆ ಕಾನೂನು ಚೌಕಟ್ಟಿನೊಳಗೆ ಸೂಕ್ತ ನಿರ್ದೇಶನ ನೀಡುವುದಾಗಿ ಭರವಸೆ ನೀಡಿದರು

ರಾಮನಗರ: ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ ವಿರೋಧಿಸಿ 428 ದಿನಗಳಿಂದ ಹೋರಾಟ ನಡೆಸುತ್ತಿರುವ ರೈತ ಮುಖಂಡರೊಂದಿಗೆ ಭಾನುವಾರ ಸಮಾಲೋಚನೆ ನಡೆಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಬಂಧಪಟ್ಟ ಅಧಿಕಾರಿಗಳಿಗೆ ಕಾನೂನು ಚೌಕಟ್ಟಿನೊಳಗೆ ಸೂಕ್ತ ನಿರ್ದೇಶನ ನೀಡುವುದಾಗಿ ಭರವಸೆ ನೀಡಿದರು.

ಬೆಂಗಳೂರಿನ ಖಾಸಗಿ ಕಚೇರಿಯಲ್ಲಿ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ರೈತರ ಭೂ ಹಿತರಕ್ಷಣಾ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಂದ ಅಹವಾಲು ಆಲಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸುಮಾರು 1 ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು.

ಈ ವೇಳೆ ರೈತ ಮುಖಂಡರು ಮಾತನಾಡಿ, ಕರ್ನಾಟಕ ನಗರಾಭಿವೃದ್ಧಿ ಕಾಯ್ದೆ 1987ರ ಅಡಿಯಲ್ಲಿ ಬಿಡದಿ ಟೌನ್ ಶಿಪ್ ಯೋಜನೆಗಾಗಿ ಹೊರಡಿಸಿರುವ ಪ್ರಾಥಮಿಕ ಅಧಿಸೂಚನೆಯನ್ನು ರದ್ದು ಪಡಿಸಬೇಕು ಹಾಗೂ ಅಂತಿಮ ಅಧಿಸೂಚನೆಗಾಗಿ ನಡೆಸುತ್ತಿರುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕೆಂದು ಮನವಿ ಮಾಡಿದರು.

ಈ ಯೋಜನೆಗೆ ಗುರುತಿಸಿರುವ ಬೈರಮಂಗಲ ಗ್ರಾಮ ಪಂಚಾಯಿತಿಯ 10 ಹಾಗೂ ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಯ 16 ಗ್ರಾಮಗಳು ಸಂಪೂರ್ಣ ನೀರಾವರಿಯಿಂದ ಕೂಡಿದ ಫಲವತ್ತಾದ ಕೃಷಿ ಭೂಮಿಯಾಗಿದೆ. ಇಲ್ಲಿ ಬಹು ವಾರ್ಷಿಕ ಬೆಳೆಗಳು ಸೇರಿದಂತೆ ಆಹಾರಧಾನ್ಯ, ಹಾಲು ವಿವಿಧ ರೀತಿಯ ತರಕಾರಿ , ಹಣ್ಣುಗಳನ್ನು ಬೆಳೆಯಲಾಗುತ್ತಿದೆ.

ಪ್ರಾಥಮಿಕ ಅಧಿಸೂಚನೆ ಮಾಹಿತಿ ತಿಳಿದ ದಿನದಿಂದಲೇ ರೈತರು ವಿರೋಧ ವ್ಯಕ್ತಪಡಿಸಿ ಬೈರಮಂಗಲ ವೃತ್ತದಲ್ಲಿ 428 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಾ ಬಂದಿದ್ದಾರೆ. ಅಲ್ಲದೆ ಪ್ರಾಥಮಿಕ ಅಧಿಸೂಚನೆಗೆ ಸುಮಾರು 3500ಕ್ಕೂ ಹೆಚ್ಚು ರೈತ ಕುಟುಂಬಗಳು ಆಕ್ಷೇಪಣೆಯನ್ನು ಲಿಖಿತವಾಗಿ ಸಲ್ಲಿಸಿವೆ. ನಮ್ಮ ಚಳವಳಿಗೆ ಅನೇಕ ಸಂಘಟನೆಗಳು ಬೆಂಬಲ ನೀಡಿದ್ದು, ಹಲವಾರು ಬಗೆಯ ಹೋರಾಟಗಳು ನಡೆದಿವೆ ಎಂದು ರೈತ ಮುಖಂಡರು, ಡಿ.ಕೆ.ಶಿವಕುಮಾರ್ ಅವರಿಗೆ ಮನವರಿಕೆ ಮಾಡಿಕೊಟ್ಟರು.

ಕಳೆದ 428 ದಿನಗಳಿಂದಲೂ ಶಾಂತಿಯುತವಾಗಿ ನಡೆಯುತ್ತಿರುವ ಪ್ರತಿಭಟನೆಯನ್ನು ಕಡೆಗಣಿಸಿ ಇದುವರೆಗೂ ಗ್ರಾಮಗಳ ಪ್ರತಿಭಟನಾ ನಿರತ ರೈತರ ಜೊತೆ ಒಂದೇ ಒಂದು ಸಮಾಲೋಚನೆ ಅಥವಾ ಅಹವಾಲು ಕೇಳುವ ಸಭೆ ನಡೆಸಿಲ್ಲ. ಏಕ ಪಕ್ಷೀಯವಾಗಿ ಸರ್ವಾಧಿಕಾರಿ ಕ್ರಮಗಳ ಮೂಲಕ ಅಂತಿಮ ಅಧಿಸೂಚನೆಗಾಗಿ ಎಲ್ಲಾ ರೀತಿಯ ತಯಾರಿ ನಡೆಸುತ್ತಿರುವುದು ಆತಂಕ ಉಂಟು ಮಾಡಿದೆ. ಈ ಕೂಡಲೇ ಬಿಡದಿ ಟೌನ್ ಶಿಪ್ ಯೋಜನೆಗಾಗಿ ಭೂ ಸ್ವಾಧೀನದ ಅಂತಿಮ ಅಧಿಸೂಚನೆಯನ್ನು ಕೈಬಿಡಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು.

ರೈತರ ಅಹವಾಲು ಆಲಿಸಿದ ಡಿ.ಕೆ.ಶಿವಕುಮಾರ್ ಬಿಡದಿ ಟೌನ್ ಶಿಪ್ ಗಾಗಿ ನೋಟಿಫಿಕೇಷನ್ ಮಾಡಿರುವುದನ್ನು ಡಿ ನೋಟಿಫಿಕೇಷನ್ ಮಾಡಲು ಸಾಧ್ಯವಿಲ್ಲ. ಅದರಿಂದಾಗುವ ಕಾನೂನು ತೊಡಕುಗಳನ್ನು ವಿವರಿಸಿದರು. ಅಲ್ಲದೆ, ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ ಅನುಷ್ಠಾನದಿಂದಾಗ ಅನುಕೂಲ, ಭೂ ಮಾಲೀಕರಿಗೆ ಸಿಗುವ ನ್ಯಾಯಯುತ ಪರಿಹಾರದ ಬಗ್ಗೆ ಮನವರಿಕೆ ಮಾಡಿಕೊಟ್ಟರು ಎನ್ನಲಾಗಿದೆ.

ಈ ಸಂದರ್ಭದಲ್ಲಿ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ರೈತರ ಭೂ ಹಿತರಕ್ಷಣಾ ಸಂಘದ ಕಾರ್ಯದರ್ಶಿ ಬಿ.ಎಂ.ಶ್ರೀನಿವಾಸ ರೆಡ್ಡಿ, ಪ್ರಕಾಶ್ , ಅಶ್ವತ್ಥ್ , ಮಂಜುನಾಥ್ , ಹನುಮಂತಯ್ಯ, ರಾಮಚಂದ್ರು, ಪುಟ್ಟಸ್ವಾಮಿ, ನಾಗರಾಜು, ಸುಮಾ, ಗೀತಾ ಮತ್ತಿತರರು ಹಾಜರಿದ್ದರು.

ಕೋಟ್ ...

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಸುಧೀರ್ಘವಾಗಿ ಸಮಾಲೋಚನೆ ನಡೆಸಿ ವಸ್ತುಸ್ಥಿತಿಯನ್ನು ತಾಳ್ಮೆಯಿಂದ ಆಲಿಸಿದರು. ನಾನೇ ಸ್ಥಳಕ್ಕೆ ಭೇಟಿ ನೀಡುತ್ತೇನೆ. ಉತ್ತಮ ಐಎಎಸ್ ಅಧಿಕಾರಿಗಳನ್ನು ಕಳುಹಿಸಿ ವಸ್ತುಸ್ಥಿತಿ ವರದಿ ಪಡೆದುಕೊಳ್ಳುತ್ತೇನೆ. ಆನಂತರ ಮತ್ತೆ ರೈತರೊಂದಿಗೆ ಚರ್ಚೆ ನಡೆಸುವುದಾಗಿ ಡಿ.ಕೆ.ಶಿವಕುಮಾರ್ ರವರು ಭರವಸೆ ನೀಡಿದ್ದಾರೆ. ನಮ್ಮ ಮನವಿ ಪರಿಗಣಿಸಿ ಭೂಮಿ ಉಳಿಸಿಕೊಡುವುದಾಗಿ ಮಾತು ಕೊಟ್ಟಿರುವುದು ರೈತರಲ್ಲಿ ಭರವಸೆ ಮೂಡಿಸಿದೆ.

-ಪ್ರಕಾಶ , ಮಾಜಿ ಸದಸ್ಯರು, ತಾಪಂ

ಬಾಕ್ಸ್‌............

ರೈತರ ಬೇಡಿಕೆಗಳು

1.ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಗಾಗಿ ರಾಜ್ಯ ಸಚಿವ ಸಂಪುಟ ನೀಡಿರುವ ಅನುಮೋದನೆ ಹಿಂಪಡೆಯಬೇಕು.

2. ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಪೂರ್ಣ ನೀರಾವರಿಯಿಂದ ಕೂಡಿದ ಫಲವತ್ತಾದ ಬಹುವಾರ್ಷಿಕ ಕೃಷಿ ಭೂಮಿಯ ಭೂ ಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದು ಪಡಿಸಬೇಕು.

3.ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ನಗರಾಭಿವೃದ್ಧಿ ಸಚಿವರ ಅಧ್ಯಕ್ಷತೆಯಲ್ಲಿ ಕೂಡಲೇ ಸಭೆ ನಿಗದಿ ಪಡಿಸಿ ರೈತರ ಅಹವಾಲು ಆಲಿಸಬೇಕು.

17ಕೆಆರ್ ಎಂಎನ್ 3.ಜೆಪಿಜಿ

ಬೆಂಗಳೂರಿನ ಖಾಸಗಿ ಕಚೇರಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ರೈತರ ಭೂ ಹಿತರಕ್ಷಣಾ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಂದ ಅಹವಾಲು ಆಲಿಸಿ ಚರ್ಚಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿರುಗಾಳಿ, ಆಲಿಕಲ್ಲು ಮಳೆಗೆ ಸಾವಿರಾರು ಎಕರೆ ಬೆಳೆ ನಾಶ
ಎಲ್ಲ ಸಮುದಾಯಗಳ ಹಿತ ಕಾಯುವ ಹೊಣೆ ನನ್ನ ಮೇಲಿದೆ