‘ರಾಜಕೀಯದಲ್ಲಿ ಒಬ್ಬರನ್ನು ಹಿಂದಿಕ್ಕಿಯೇ ಮತ್ತೊಬ್ಬರು ಮುಂದೆ ಬರುತ್ತಾರೆ. ಇದು ಸ್ಪೀಡಾಗಿರುವ ಕಾಲ, ನಾವೂ ಅದೇ ವೇಗಕ್ಕೆ ಸರಿಯಾಗಿ ಓಡಬೇಕು. ಇಲ್ಲದಿದ್ದರೆ ಜನ ಹೊಸ ನಾಯಕನನನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.’

 ಬೆಂಗಳೂರು : ‘ರಾಜಕೀಯದಲ್ಲಿ ಒಬ್ಬರನ್ನು ಹಿಂದಿಕ್ಕಿಯೇ ಮತ್ತೊಬ್ಬರು ಮುಂದೆ ಬರುತ್ತಾರೆ. ಇದು ಸ್ಪೀಡಾಗಿರುವ ಕಾಲ, ನಾವೂ ಅದೇ ವೇಗಕ್ಕೆ ಸರಿಯಾಗಿ ಓಡಬೇಕು. ಇಲ್ಲದಿದ್ದರೆ ಜನ ಹೊಸ ನಾಯಕನನನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.’

ಇದು ಒಂದು ಕಾಲದಲ್ಲಿ ಸಿದ್ದರಾಮಯ್ಯ ಅವರ ಆಪ್ತ ಎಂದು ಭಾವಿಸಲಾಗಿದ್ದ ಸಚಿವ ಸತೀಶ್‌ ಜಾರಕಿಹೊಳಿ ಅವರು ಸಿದ್ದರಾಮಯ್ಯ ಅವರ ಕಡಗಣನೆ ಕುರಿತ ಪ್ರಶ್ನೆಗೆ ಉತ್ತರಿಸಿದ ಪರಿ.

ಕೆಂಪೇಗೌಡ ದಿನಾಚರಣೆ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫೋಟೋ ಹಾಕದೆ ಕಡೆಗಣಿಸಿರುವ ಕುರಿತ ಸುದ್ದಿಗಾರರ ಪ್ರಶ್ನೆಗೆ ಮಾತನಾಡಿ, ‘ಸರ್ಕಾರಿ ಕಾರ್ಯಕ್ರಮದಲ್ಲಿ ಫೋಟೋ ಹಾಕಬೇಕು ಎಂಬ ಅಧಿಕೃತ ನಿಯಮವಿಲ್ಲ. ಈ ಬಗ್ಗೆ ಬಿಡಿಎನೇ ಸ್ಪಷ್ಟನೆ ಕೊಡಬೇಕು. ಸೈಡ್‌ಲೈನ್‌ ಮಾಡುವುದು ಎಲ್ಲಾ ಪಕ್ಷದಲ್ಲೂ ಇರುತ್ತದೆ. ಅದು ರಾಜಕೀಯ ಸಿದ್ಧಾಂತ. ಒಬ್ಬರನ್ನು ಹಿಂದೆ ಹಾಕಿಯೇ ಇನ್ನೊಬ್ಬರು ಮುಂದೆ ಬರುತ್ತಾರೆ. ಹೀಗಾಗಿ ನಾವು ಕೂಡ ಅಷ್ಟೇ ವೇಗದಲ್ಲಿ ಓಡಬೇಕು’ ಎಂದರು.

20 ವರ್ಷದ ಹಿಂದಿನ ನಾಯಕರ್‍ಯಾರೂ ಇಲ್ಲ:

ಇದು ವೇಗದ ಕಾಲದಲ್ಲಿ ನಾವು ಓಡದಿದ್ದರೆ ರೈಲು ತಪ್ಪಿ ಹೋಗುತ್ತದೆ. ಒಂದು ವೇಳೆ ತಪ್ಪಿ ಹೋದರೆ ತುಮಕೂರು, ಅರಸೀಕೆರೆಗೆ ಹೋಗಿ ಆದರೂ ರೈಲು ಹಿಡಿಯಬೇಕು. ಇಲ್ಲದಿದ್ದರೆ ಜನರೇ ಮರೆತು ಬಿಡುತ್ತಾರೆ. 20 ವರ್ಷದ ಹಿಂದೆ ನೋಡಿರುವ ನಾಯಕರು ಈಗ ಯಾರೂ ಇಲ್ಲ’ ಎಂದು ಸತೀಶ್ ಹೇಳಿದರು.

ಮೊದಲ ಸಾಲಲ್ಲಿ ನಿಲ್ಲಲಿಲ್ಲ ಎಂದರೆ ಜನ ಹೊಸ ನಾಯಕನ ಆಯ್ಕೆ ಮಾಡಿಕೊಳ್ಳುತ್ತಾರೆ

ರಾಜಕೀಯದಲ್ಲಿ ನಾವು ಮೊದಲ ಸಾಲಲ್ಲಿ ನಿಲ್ಲಲಿಲ್ಲ ಎಂದರೆ ಜನ ಹೊಸ ನಾಯಕನ ಆಯ್ಕೆ ಮಾಡಿಕೊಳ್ಳುತ್ತಾರೆ. ಸಿದ್ದರಾಮಯ್ಯ ಅವರು 20 ವರ್ಷದಿಂದ ಪಕ್ಷದಲ್ಲಿದ್ದಾರೆ. ಅವರಿಗೂ ಜವಾಬ್ದಾರಿ ಇದೆ, ಅವರದ್ದೇ ಆದ ಶಕ್ತಿ ಹಾಗೂ ಅಭಿಮಾನಿಗಳಿದ್ದಾರೆ. ಅವರು ಓಡದೇ ಮಾಡುತ್ತೇನೆ, ಮೈಸೂರಿನಲ್ಲಿ ಕುಳಿತೇ ಎಲ್ಲ ಮಾಡುತ್ತೇನೆ ಎಂದರೂ ಮಾಡಬಹುದು. ರಾಜಕಾರಣದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಶೈಲಿ ಇರುತ್ತದೆ ಎಂದೂ ಗೊಂದಲಮಯ ಹೇಳಿಕೆ ನೀಡಿದರು.