ಬೆಂಗಳೂರು : ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್‌) ಮಂಗಳವಾರದಿಂದ ಆರಂಭವಾಗಲಿದ್ದು, ಬೂತ್‌ ಮಟ್ಟದ ಅಧಿಕಾರಿಗಳು(ಬಿಎಲ್‌ಒ) ಇಂದಿನಿಂದ ಜು.29ರವರೆಗೆ ರಾಜ್ಯಾದ್ಯಂತ ಮನೆ-ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿಯಲ್ಲಿ ಹೆಸರಿರುವ ಮತದಾರರಿಗೆ ಎಸ್‌ಐಆರ್‌ ಎನುಮೆರೇಶನ್‌ ಫಾರ್ಮ್‌ (ಗಣತಿ ನಮೂನೆ) ನೀಡಲಿದ್ದಾರೆ.

ಮತದಾರರು ಈ ಗಣತಿ ನಮೂನೆ ಭರ್ತಿ ಮಾಡಿ ಬಳಿಕ ಸಹಿ ಮಾಡಿ ಬಿಎಲ್‌ಒಗಳಿಗೆ ವಾಪಸ್‌ ನೀಡಬೇಕು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ತಿಳಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಎಸ್‌ಐಆರ್‌ ಯಶಸ್ವಿಯಾಗಿ ನಡೆಸಲು ಪೂರ್ವ ಸಿದ್ಧತೆಗಳು ಪೂರ್ಣಗೊಂಡಿವೆ. ರಾಜ್ಯಾದ್ಯಂತ ಒಟ್ಟು 59,050 ಬಿಎಲ್‌ಒಗಳಿಗೆ ತರಬೇತಿ ನೀಡಲಾಗಿದೆ. 31 ಜಿಲ್ಲಾ ಚುನಾವಣಾಧಿಕಾರಿಗಳು(ಡಿಇಒ), 4 ಅಪರ ಜಿಲ್ಲಾ ಚುನಾವಣಾಧಿಕಾರಿಗಳು(ಎಡಿಇಒ), 224 ಮತದಾರರ ನೋಂದಣಾಧಿಕಾರಿಗಳು(ಇಆರ್‌ಒ), 336 ಸಹಾಯಕ ಮತದಾರರ ನೋಂದಣಾಧಿಕಾರಿಗಳು(ಎಇಆರ್‌ಒ), 7,556 ಬಿಎಲ್‌ಒ ಮೇಲ್ವಿಚಾರಕರು ಹಾಗೂ ಪರಿಷ್ಕರಣಾ ಪ್ರಕ್ರಿಯೆಯಲ್ಲಿ ತೊಡಗಿರುವ ಇತರೆ ಎಲ್ಲಾ ಅಧಿಕಾರಿಗಳಿಗೆ ಸಮಗ್ರ ತರಬೇತಿ ನೀಡಲಾಗಿದೆ ಎಂದು ಹೇಳಿದರು.


5.54 ಕೋಟಿ ಮತದಾರರು ಎಸ್‌ಐಆರ್‌ ವ್ಯಾಪ್ತಿಗೆ:

ರಾಜಕೀಯ ಪಕ್ಷಗಳಿಂದ 1,15,112 ಬೂತ್‌ ಮಟ್ಟದ ಏಜೆಂಟರನ್ನು(ಬಿಎಲ್‌ಎ) ನೇಮಿಸಲಾಗಿದೆ. ಈ ಪೈಕಿ ಬಹುಪಾಲು ಏಜೆಂಟರಿಗೆ ಡಿಇಒಗಳು ತರಬೇತಿ ನೀಡಿದ್ದಾರೆ. ಎಸ್‌ಐಆರ್‌ ಹಿನ್ನೆಲೆಯಲ್ಲಿ 11 ಕೋಟಿ ಎನುಮೆರೇಶನ್‌ ಫಾರ್ಮ್‌ ಮುದ್ರಿಸಲಾಗಿದೆ. ಈಗಾಗಲೇ ಎಲ್ಲಾ ಜಿಲ್ಲಾ ಚುನಾವಣಾಧಿಕಾರಿಗಳಿಗೆ ವಿತರಿಸಲಾಗಿದೆ. ಅವರು ಕ್ಷೇತ್ರದ ಮಟ್ಟದ ಅನುಷ್ಠಾನಕ್ಕಾಗಿ ಆಯಾಯ ಮತದಾರರ ನೋಂದಣಾಧಿಕಾರಿಗಳು ಮತ್ತು ಬೂತ್ ಮಟ್ಟದ ಅಧಿಕಾರಿಗಳಿಗೆ ವಿತರಿಸಿದ್ದಾರೆ. ಕರ್ನಾಟಕದಲ್ಲಿ ಪ್ರಸ್ತುತ 5,54,32,314 ಮತದಾರರು ಇದ್ದು, ಈ ವಿಶೇಷ ಸಮಗ್ರ ಪರಿಷ್ಕರಣೆ ವ್ಯಾಪ್ತಿಗೆ ಒಳಡಲಿದ್ದಾರೆ ಎಂದು ಅವರು ತಿಳಿಸಿದರು.

ನಮೂನೆ ವಿತರಣೆ ವೇಳೆ ಎರಡು ಬಣ್ಣದ ಸ್ಟಿಕ್ಕರ್‌:

ಮನೆ-ಮನೆಗೆ ಭೇಟಿ ನೀಡುವ ಬಿಎಲ್‌ಒಗಳು ತಮಗೆ ನಿಯೋಜಿಸಲಾದ ಮತಗಟ್ಟೆ ವ್ಯಾಪ್ತಿಯಲ್ಲಿನ ಪ್ರತಿ ಮನೆಗೂ ಖುದ್ದು ಭೇಟಿ ನೀಡಿ 2026ರ ಜೂ.16ರಂತೆ ಮತದಾರರ ಪಟ್ಟಿಯಲ್ಲಿ ಹೆಸರಿರುವ ಎಲ್ಲಾ ಮತದಾರರಿಗೂ ಗಣತಿ ನಮೂನೆ ವಿತರಿಸಲಿದ್ದಾರೆ. ಈ ವೇಳೆ ಎರಡು ಬಣ್ಣದ ಸ್ಟಿಕ್ಕರ್‌ಗಳನ್ನು ಅಂಟಿಸಲಾಗುತ್ತದೆ. ರಾಜ್ಯದ 1.80 ಕೋಟಿ ಮನೆಗಳಿಗೆ ಸ್ಟಿಕ್ಕರ್‌ ಅಂಟಿಸಲಾಗುವುದು. ಗಣತಿ ನಮೂನೆಯನ್ನು ಮನೆಗೆ ವಿತರಿಸಲಾಗಿದೆ ಎಂಬುದಕ್ಕೆ ನೇರಳೆ ಬಣ್ಣದ ಚೌಕಾಕಾರದ ಸ್ಟಿಕ್ಕರ್‌ ಅಂಟಿಸಲಾಗುತ್ತದೆ.

ಬಿಎಲ್‌ಒ ಭೇಟಿಯ ಸಮಯದಲ್ಲಿ ಮನೆಗೆ ಬೀಗ ಹಾಕಿದ್ದಲ್ಲಿ ಅಥವಾ ಮುಚ್ಚಿದ್ದಲ್ಲಿ ಕೆಂಪು ಬಣ್ಣದ ವೃತ್ತಾಕಾರದ ಸ್ಟಿಕ್ಕರ್‌ ಅಂಟಿಸಲಾಗುತ್ತದೆ. ಇದರಲ್ಲಿ ಬಿಎಲ್‌ಒಗಳು ಮತ್ತೆ ಯಾವಾಗ ಬರುತ್ತಾರೆ ಎಂದು ಮೂರು ದಿನಾಂಕ ಹಾಕಲಾಗುತ್ತದೆ. ಈ ದಿನಗಳಂದು ಮನೆಯಲ್ಲೇ ಇರಿ ಎಂದು ಮತದಾರರಿಗೆ ಸೂಚಿಸಲಾಗುತ್ತದೆ. ಮತದಾರರು ಈ ಗಣತಿ ನಮೂನೆಗಳನ್ನು ಭರ್ತಿ ಮಾಡಿ ಸಹಿ ಮಾಡಿದ ನಂತರ ಅವುಗಳನ್ನು ಬಿಎಲ್‌ಒಗಳು ಸಂಗ್ರಹಿಸುತ್ತಾರೆ. ನಮೂನೆಗಳನ್ನು ಸಂಗ್ರಹಿಸಲು ಕನಿಷ್ಠ ಮೂರು ಬಾರಿ ಭೇಟಿ ನೀಡುತ್ತಾರೆ ಎಂದು ಹೇಳಿದರು.

ಈ ಹಂತದಲ್ಲಿ ದಾಖಲೆ ಸಂಗ್ರಹ ಮಾಡಲ್ಲ:

ನಿಗದಿತ ಅವಧಿಯೊಳಗೆ ಭರ್ತಿ ಮಾಡಿದ ಗಣತಿ ನಮೂನೆಯನ್ನು ಸಲ್ಲಿಸುವ ಎಲ್ಲ ಮತದಾರರನ್ನು ಕರಡುಮತದಾರರ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಗಣತಿ ನಮೂನೆ ಸ್ವೀಕೃತವಾಗದ್ದಿದ್ದಲ್ಲಿ ಆ ಮತದಾರರ ಹೆಸರು ಕರಡು ಮತದಾರರ ಪಟ್ಟಿಗೆ ಸೇರುವುದಿಲ್ಲ. ಮನೆ-ಮನೆ ಭೇಟಿ ವೇಳೆ ಮತದಾರರಿಂದ ಬಿಎಲ್‌ಒಗಳು ಯಾವುದೇ ದಾಖಲೆ ಸಂಗ್ರಹಿಸುವುದಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್‌ ತಿಳಿಸಿದರು.

ರಾಜ್ಯದಲ್ಲಿ ಶೇ.91.61ರಷ್ಟು ಮ್ಯಾಪಿಂಗ್‌

ಎಸ್‌ಐಆರ್‌ ಹಿನ್ನೆಲೆಯಲ್ಲಿ 2002ರ ಮತದಾರರ ಪಟ್ಟಿಯನ್ನು 2025ರ ಪಟ್ಟಿಯೊಂದಿಗೆ ಮ್ಯಾಪಿಂಗ್‌ ಮಾಡುವ ಕಾರ್ಯ ಮುಂದುವರೆದಿದೆ. ರಾಜ್ಯದಲ್ಲಿ ಒಟ್ಟು 5,54,32,314 ಮತದಾರರ ಪೈಕಿ 5,07,79,810 (ಶೇ.91.61) ಮತದಾರರ ಮ್ಯಾಪಿಂಗ್‌ ಪೂರ್ಣಗೊಂಡಿದೆ. 46,52,504 ಮತದಾರರ ಮ್ಯಾಪಿಂಗ್ ಬಾಕಿ ಇದ್ದು, ಜು.28ರವರೆಗೂ ಈ ಮ್ಯಾಪಿಂಗ್‌ ಮುಂದುವರೆಯಲಿದೆ.

1.15 ಲಕ್ಷ ಬಿಎಲ್‌ಎಗಳ ನೇಮಕ

ಎಸ್‌ಐಆರ್‌ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಜಕೀಯ ಪಕ್ಷಗಳ 1,15,112 ಬೂತ್‌ ಮಟ್ಟದ ಏಜೆಂಟರನ್ನು(ಬಿಎಲ್‌ಎ) ನೇಮಿಸಲಾಗಿದೆ. ಈ ಪೈಕಿ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್‌ನಿಂದ 52,419, ಬಿಜೆಪಿಯಿಂದ 48,614, ಜೆಡಿಎಸ್‌ನಿಂದ 14,020 ಬಿಎಲ್‌ಎ ನೇಮಿಸಲಾಗಿದೆ.

ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ ಭರ್ತಿ

ಮತದಾರರಿಗೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿರುವ ಎರಡು ಪುಟಗಳ ಗಣತಿ ನಮೂನೆ ನೀಡಲಾಗುತ್ತದೆ. ಮತದಾರರು ಈ ನಮೂನೆಯಲ್ಲಿ ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ ಮಾಹಿತಿ ಭರ್ತಿ ಮಾಡಬೇಕು. ನಮೂನೆಗೆ ಸಹಿ ಹಾಕಲು ಮತದಾರರ ಲಭ್ಯವಿಲ್ಲದಿದ್ದಲ್ಲಿ ಅಥವಾ ಮತದಾರನಿಗೆ ಸಹಿ ಹಾಕಲು ಆಗದಿದ್ದಲ್ಲಿ ಆ ಕುಟುಂಬದ ವಯಸ್ಕ ಸದಸ್ಯರೊಬ್ಬರು ಅವರ ಪರವಾಗಿ ಸಹಿ ಮಾಡಲು ಅವಕಾಶ ನೀಡಲಾಗಿದೆ.

ಹೊಸ ಮತದಾರರ ಸೇರ್ಪಡೆ

ಎಸ್‌ಐಆರ್‌ ನಡುವೆಯೂ 2026ರ ಅಕ್ಟೋಬರ್‌ 7ರೊಳಗೆ 18 ವರ್ಷ ತುಂಬುವ ಯುವ ಮತದಾರರು ಮತದಾರರ ಪಟ್ಟಿಯಲ್ಲಿ ನೋಂದಣಿಗೆ ಅರ್ಜಿ ಹಾಕಬಹುದು. ಅರ್ಹ ಯುವ ಮತದಾರರು ನಿಗದಿತ ದಾಖಲೆಗಳೊಂದಿಗೆ ಸಂಬಂಧಿತ ಬಿಎಲ್‌ಒಗಳಿಂದ ಫಾರಂ 6 ಪಡೆದು ಭರ್ತಿ ಮಾಡಿ ಕೊಟ್ಟಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗುವುದು.

ತಪ್ಪು ಮಾಹಿತಿ ಇದ್ದಲ್ಲಿ ನೋಟಿಸ್‌

ಕಾನೂನಿನ ಅನ್ವಯ ರಾಜ್ಯದಲ್ಲಿ ಎಸ್‌ಐಆರ್‌ ಮಾಡಲಾಗುತ್ತಿದೆ. ಈ ಹಂತದಲ್ಲಿ ಯಾವುದೇ ದಾಖಲೆ ಪಡೆಯುವುದಿಲ್ಲ. ಆ.5ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಬಳಿಕ ನಮೂನೆಯಲ್ಲಿ ತಪ್ಪು ಮಾಹಿತಿ ಇದ್ದರೆ ಅಂತಹ ಮತದಾರರಿಗೆ ನೋಟಿಸ್‌ ನೀಡಿ ಮಾಹಿತಿ ಪಡೆಯುತ್ತೇವೆ. ಮತದಾರರಿಗೆ ಮಾಹಿತಿ ನೀಡದೇ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್‌ ಹೇಳಿದರು.

ಆನ್‌ಲೈನ್‌ನಲ್ಲಿ ಮಾಹಿತಿ ಭರ್ತಿಗೆ ಅವಕಾಶ:

ಮತದಾರರು ಗಣತಿ ನಮೂನೆಗಳನ್ನು ಆನ್‌ಲೈನ್‌ನಲ್ಲಿಯೂ ಭರ್ತಿ ಮಾಡಲು ಅವಕಾಶ ಕಲ್ಪಿಸಲಾಗಿದೆ. https://voters.eci.gov.in/ ಮತ್ತು ECINET ಮೊಬೈಲ್‌ ಅಪ್ಲಿಕೇಶನ್‌ನಲ್ಲಿ ಜೂ.30ರಿಂದ ಈ ಸೇವೆ ಲಭ್ಯವಾಗಲಿದೆ.

ಎಸ್ಐಆರ್‌ ಪ್ರಕಿಯೆ ವೇಳಾ ಪಟ್ಟಿ:

ಬಿಎಲ್‌ಒಗಳಿಂದ ಮನೆ-ಮನೆ ಭೇಟಿ- ಜೂ.30ರಿಂದ ಜು.29ರ ವರೆಗೆ

ಮತಗಟ್ಟೆಗಳ ತಾರ್ಕಿಕ ಮರು ಹೊಂದಾಣಿಕೆ ವಿಂಗಡಣೆ- ಜೂ.30ರಿಂದ ಜು.29

ಕರಡು ಮತದಾರರ ಪಟ್ಟಿ ಪ್ರಕಟ- ಆ.5

ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಕೆ- ಆ.5ರಿಂದ ಸೆ.4ರವರೆಗೆ

ನೋಟಿಸ್ ಹಂತ ಮತ್ತು ಹಕ್ಕುಗಳು ಹಾಗೂ ಆಕ್ಷೇಪಣೆ ವಿಲೇವಾರಿ- ಆ.5 ರಿಂದ ಅ.3ರವರೆಗೆ

ಅಂತಿಮ ಮತದಾರರ ಪಟ್ಟಿ ಪ್ರಕಟ- ಅ.10

ಪ್ರತಿನಿತ್ಯ ಮಾಧ್ಯಮ ಹೇಳಿಕೆ

ಎಸ್‌ಐಆರ್‌ ಪ್ರಕ್ರಿಯೆಯು ಪ್ರತಿಯೊಬ್ಬ ಅರ್ಹ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವ ಉದ್ದೇಶದಿಂದ ನಡೆಸಲಾಗುತ್ತಿದೆ. ಈ ಪ್ರಕ್ರಿಯೆ ದಿನನಿತ್ಯದ ಪ್ರಗತಿ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಲಾಗುವುದು. ಆಯೋಗದ ವೆಬ್‌ಸೈಟ್‌ನಲ್ಲಿಯೂ ಎಲ್ಲಾ ಮಾಹಿತಿ ಹಾಕಲಾಗುವುದು. ಎಸ್ಐಆರ್‌ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಲಿದೆ

- ವಿ.ಅನ್ಬುಕುಮಾರ್‌, ರಾಜ್ಯ ಮುಖ್ಯ ಚುನಾವಣಾಧಿಕಾರಿ

- ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ರಾಜ್ಯದಲ್ಲಿ ಇಂದಿನಿಂದ ಆರಂಭ

- ಬೂತ್‌ ಮಟ್ಟದ ಅಧಿಕಾರಿಗಳಿಂದ ಮನೆಗೆ ಮನೆಗೆ ಭೇಟಿ. ಗಣತಿ ನಮೂನೆಗಳ ವಿತರಣೆ

- ನಮೂನೆ ಭರ್ತಿ ಮಾಡಿ, ಸಹಿ ಮಾಡಿ ಬೂತ್‌ ಮಟ್ಟದ ಅಧಿಕಾರಿಗಳಿಗೆ ಮರಳಿಸಬೇಕು

- ಗಣತಿ ನಮೂನೆ ವಿತರಣೆ ಸಂಬಂಧ ಮನೆಗೆ ಸ್ಟಿಕ್ಕರ್‌ ಅಂಟಿಸಲಿರುವ ಅಧಿಕಾರಿಗಳು

- ಮನೆಗೆ ಬೀಗ ಹಾಕಿದ್ದರೆ ಮತ್ತೊಂದು ಸ್ಟಿಕ್ಕರ್‌ ಅಂಟಿಸಿ, ಮುಂದಿನ ಭೇಟಿಯ ಮಾಹಿತಿ