ಬಳ್ಳಾರಿ: ಚುನಾವಣಾ ಆಯೋಗದಿಂದ ನಡೆಯುತ್ತಿರುವ ಸಮಗ್ರ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ಐಆರ್) ಕುರಿತು ಕಾಂಗ್ರೆಸ್ ಪಕ್ಷದ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಬೂತ್ ಮಟ್ಟದ ಏಜೆಂಟ್ (ಬಿಎಲ್ಎ)ಗಳಿಗೆ, ಕಾಂಗ್ರೆಸ್ ಪಕ್ಷದ ಎಲ್ಲ ಪದಾಧಿಕಾರಿಗಳಿಗೆ ಹಾಗೂ ಕಾರ್ಯಕರ್ತರಿಗಾಗಿ ನಗರದ ಖಾಸಗಿ ಹೋಟೆಲ್‌ನಲ್ಲಿ ತರಬೇತಿ ಕಾರ್ಯಾಗಾರವನ್ನು ಏರ್ಪಡಿಸಲಾಯಿತು.ಕೆಪಿಸಿಸಿ ಉಸ್ತುವಾರಿ ವಾಸುದೇವಮೂರ್ತಿ ಹಾಗೂ ಕಾಂಗ್ರೆಸ್ ಯುವ ಘಟಕದ ರಾಷ್ಟ್ರೀಯ ಕಾರ್ಯದರ್ಶಿ ಜ್ಯೋತೀಶ್ ಎಚ್.ಎಂ. ತರಬೇತಿ ನೀಡಿದರು. ಮತದಾರರ ಪಟ್ಟಿಯಲ್ಲಿ ಯಾವುದೇ ಅರ್ಹ ಮತದಾರರು ಹೆಸರು ಕಳೆದುಕೊಳ್ಳದಂತೆ ಹಾಗೂ ಹೊಸದಾಗಿ ಅರ್ಹರಾದ ಪ್ರತಿಯೊಬ್ಬರು ಮತದಾರರ ಪಟ್ಟಿಗೆ ಸೇರ್ಪಡೆಯಾಗುವಂತೆ ಬಿಎಲ್‌ಎಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಕಾನೂನುಬದ್ಧತೆಯನ್ನು ಕಾಪಾಡುವ ನಿಟ್ಟಿನಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ಹಿನ್ನೆಲೆಯಲ್ಲಿ ಬೂತ್ ಮಟ್ಟದಲ್ಲಿ ಕಾರ್ಯ ನಿರ್ವಹಿಸುವ ಏಜೆಂಟ್‌ಗಳ ಪಾತ್ರ ಚುನಾವಣೆ ಪ್ರಕ್ರಿಯೆಯಲ್ಲಿ ಅತ್ಯಂತ ಮಹತ್ವದ್ದಾಗಿದೆ. ಮತದಾರರ ನೋಂದಣಿ, ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ವರ್ಗಾವಣೆ ಸೇರಿದಂತೆ ವಿವಿಧ ಅರ್ಜಿಗಳನ್ನು ಸರಿಯಾದ ರೀತಿಯಲ್ಲಿ ಸಲ್ಲಿಸುವ ಬಗ್ಗೆ ಕಾರ್ಯಕರ್ತರಿಗೆ ಮಾಹಿತಿ ನೀಡಿದರು.
ಯಾವುದೇ ಮತದಾರರಿಗೆ ಅನ್ಯಾಯವಾಗದಂತೆ ಜಾಗರೂಕರಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು.ಎಸ್‌ಐಆರ್ ಪ್ರಕ್ರಿಯೆಯಲ್ಲಿ ಬಳಸಬೇಕಾದ ನಮೂನೆಗಳು, ದಾಖಲೆಗಳ ಪರಿಶೀಲನೆ, ಆನ್‌ಲೈನ್ ಮತ್ತು ಆಫ್‌ಲೈನ್ ಅರ್ಜಿ ಸಲ್ಲಿಕೆ ವಿಧಾನ, ಮತದಾರರ ಪಟ್ಟಿಯ ಪರಿಶೀಲನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಸವಿಸ್ತಾರವಾಗಿ ತರಬೇತಿ ನೀಡಲಾಯಿತು. ಕಾರ್ಯಕರ್ತರ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಪ್ರಾಯೋಗಿಕ ಮಾಹಿತಿ ಹಂಚಿಕೊಳ್ಳಲಾಯಿತು.ಪಾಲಿಕೆಯ ಸದಸ್ಯರಾದ ರಾಮಾಂಜನೇಯ, ನೂರ್ ಮೊಹಮ್ಮದ್, ಜಬ್ಬಾರ್, ಶಿವರಾಜ್, ಮಾಜಿ ಮೇಯರ್ ಎಂ.ರಾಜೇಶ್ವರಿ, ಕಾಂಗ್ರೆಸ್ ಮುಖಂಡರಾದ ದಾದಾಭಾಯ್, ಹುಸೇನ್‌ಪೀರಾ, ಕಣೇಕಲ್ ಮೆಹಬೂಬಸಾಬ, ಕಲ್ಲುಕಂಬ ಪಂಪಾಪತಿ, ಅರುಣಕುಮಾರ್, ಪರ್ವೀನಬಾನು, ಸೋಮಶೇಖರ್, ಬಿಆರೆಲ್ ಸೀನಾ, ಡಿ.ಸೂರಿ, ಹಾವಂಭಾವಿ ಲೋಕೇಶ್, ಸೋಮಶೇಖರ್, ಚಂಪಾ ಚವ್ಹಾಣ್, ಪದ್ಮಾ, ಪರಶುರಾಮುಡು, ಹೊನ್ನಪ್ಪ, ಹಗರಿ ಗೋವಿಂದ, ಹೊನ್ನಪ್ಪ, ಚಾನಾಳ್ ಶೇಖರ್, ಗುರುಸಿದ್ಧಣ್ಣ, ದುರ್ಗಾ ಮೋಹನ್, ರಾಮು, ಥಿಯೇಟರ್ ಶಿವು, ಆಯೇಶಾ, ಶಮೀಮ್ ಜೊಹರಾ, ಇಮಾಮ್ ಗೋಡೆಕಾರ ಹಾಗೂ ನಗರದ ಎಲ್ಲ ಬೂತ್ ಮಟ್ಟದ ಏಜೆಂಟರು, ಕಾರ್ಯಕರ್ತರು ಇದ್ದರು.