ಎಚ್‌ಎಂಟಿ ಅಧೀನದ 180 ಎಕರೆಯನ್ನೂ ಅರಣ್ಯ ಭೂಮಿಯಿಂದ ಡಿನೋಟಿಫೈ : ರಾಜ್ಯ ಸರ್ಕಾರ ತಡೆ

KannadaprabhaNewsNetwork |  
Published : Jan 17, 2025, 01:45 AM ISTUpdated : Jan 17, 2025, 10:56 AM IST
ಎಚ್‌.ಕೆ.ಪಾಟೀಲ್‌ | Kannada Prabha

ಸಾರಾಂಶ

180 ಎಕರೆಯನ್ನೂ ಸಂಪುಟ ಅನುಮೋದನೆ ಇಲ್ಲದೆ ಅರಣ್ಯ ಭೂಮಿಯಿಂದ ಡಿನೋಟಿಫೈ ಮಾಡಲು ಅರಣ್ಯ ಇಲಾಖೆ ಅಧಿಕಾರಿಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಮಧ್ಯಂತರ ಅರ್ಜಿ ಹಿಂಪಡೆಯಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಘಟನೋತ್ತರ ಅನುಮೋದನೆ ನೀಡಲಾಗಿದೆ.

 ಬೆಂಗಳೂರು : ರಾಜ್ಯ ಸರ್ಕಾರವು ಎಚ್ಎಂಟಿ ಸ್ವಾಧೀನಕ್ಕೆ ನೀಡಿದ್ದ 443 ಎಕರೆ ಪೈಕಿ ಉಳಿದ 180 ಎಕರೆಯನ್ನೂ ಸಂಪುಟ ಅನುಮೋದನೆ ಇಲ್ಲದೆ ಅರಣ್ಯ ಭೂಮಿಯಿಂದ ಡಿನೋಟಿಫೈ ಮಾಡಲು ಅರಣ್ಯ ಇಲಾಖೆ ಅಧಿಕಾರಿಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಮಧ್ಯಂತರ ಅರ್ಜಿ ಹಿಂಪಡೆಯಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಘಟನೋತ್ತರ ಅನುಮೋದನೆ ನೀಡಲಾಗಿದೆ.

ಈ ಬಗ್ಗೆ ಸಂಪುಟ ಸಭೆ ಬಳಿಕ ಮಾಹಿತಿ ನೀಡಿದ ಸಚಿವ ಎಚ್.ಕೆ.ಪಾಟೀಲ್‌, ಒಟ್ಟು 443 ಎಕರೆ ಅರಣ್ಯ ಜಮೀನಿನ ಪೈಕಿ 160 ಎಕರೆ ಜಮೀನನ್ನು ಖಾಸಗಿ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಗೆ ಎಚ್‌ಎಂಟಿ ಅಕ್ರಮವಾಗಿ ಮಾರಾಟ ಮಾಡಿದೆ. ಉಳಿದ 180 ಎಕರೆ ಅರಣ್ಯಭೂಮಿಯನ್ನೂ ಪರಭಾರೆ ಮಾಡಲು ಅನುವಾಗುವಂತೆ ರಾಜ್ಯ ಅರಣ್ಯ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ಸುಪ್ರೀಂ ಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಇದನ್ನು ಪತ್ತೆ ಹಚ್ಚಿದ ಸಚಿವ ಈಶ್ವರ್‌ ಖಂಡ್ರೆ ಕಡಿವಾಣ ಹಾಕಿದ್ದಾರೆ ಎಂದು ಹೇಳಿದರು.

ಎಚ್‌ಎಂಟಿ ಕಂಪನಿ ಸ್ವಾಧೀನಕ್ಕೆ ನೀಡಿದ್ದ ₹14,300 ಕೋಟಿ ಮೌಲ್ಯದ 443 ಎಕರೆ ಜಮೀನನ್ನೂ ಹಂತ-ಹಂತವಾಗಿ ಕಬಳಿಸಲು ಹುನ್ನಾರ ನಡೆಯುತ್ತಿದೆ.

ಈ ಅಕ್ರಮ ಪರಭಾರೆಗಳಿಗೆ ಕಡಿವಾಣ ಹಾಕಿ ಅರಣ್ಯ ಜಮೀನನ್ನು ಸರ್ಕಾರಕ್ಕೆ ವಾಪಸು ಪಡೆಯಲು ಹಂತ-ಹಂತವಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಪೀಣ್ಯ ಅರಣ್ಯ ವಲಯದ 599 ಎಕರೆ ಅಧಿಸೂಚಿತ ಅರಣ್ಯ ಪ್ರದೇಶದಲ್ಲಿ 443 ಎಕರೆ ಅರಣ್ಯ ಭೂಮಿಯನ್ನು ಎಚ್ಎಂಟಿ ಸ್ವಾಧೀನಕ್ಕೆ ನೀಡಲಾಗಿತ್ತು. ಇದೀಗ ಎಚ್ಎಂಟಿ ನೀಡಿದ್ದ ಉದ್ದೇಶಕ್ಕೆ ಬಳಕೆ ಮಾಡುತ್ತಿಲ್ಲ. ಇದರ ನಡುವೆ ಸಚಿವ ಸಂಪುಟ ಸಭೆಯ ಪೂರ್ವಾನುಮತಿ ಹಾಗೂ ಉನ್ನತ ಮಟ್ಟದ ಸಮಿತಿಯ ಅನುಮೋದನೆ ಇಲ್ಲದೆ ಎಚ್ಎಂಟಿ ಸ್ವಾಧೀನದಲ್ಲಿದ್ದ 160 ಎಕರೆ ಜಾಗವನ್ನು ಖಾಸಗಿ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಗೆ ಪರಭಾರೆ ಮಾಡಲಾಗಿದೆ ಎಂದು ಎಚ್.ಕೆ. ಪಾಟೀಲ್ ದೂರಿದರು.

ಸಂಪುಟ ಅನುಮೋದನೆ ಇಲ್ಲದೆ ಡಿನೋಟಿಫೈಗೆ ನಿರ್ಧಾರ:

ಇದೀಗ ಉಳಿದ 180 ಎಕರೆ ಅರಣ್ಯ ಭೂಮಿಯನ್ನೂ ಪರಭಾರೆ ಮಾಡಲು ಕೆಲ ಶಕ್ತಿಗಳು ಪ್ರಯತ್ನಿಸುತ್ತಿವೆ. 2015ರಲ್ಲಿ ಹಾಗೂ 2018ರಲ್ಲಿ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಡವಳಿಯಲ್ಲಿ ಇನ್ನೂ ಹಸಿರು ಹೊದಿಕೆ ಹೊಂದಿರುವ ಅರಣ್ಯ ಭೂಮಿಯನ್ನು ಎಚ್‌ಎಂಟಿ ಸಂಸ್ಥೆಯು ಮಾರಾಟ ಮತ್ತು ಹರಾಜು ಮಾಡುತ್ತಿದ್ದು, ಈ ಅರಣ್ಯ ಬೆಂಗಳೂರಿನ ಜೀವ ಉಳಿಸುವ ಮತ್ತು ಶ್ವಾಸಕೋಶದಂತೆ ಕೆಲಸ ಮಾಡುವ ಸ್ಥಳ ಎಂಬುದಾಗಿ ಹೇಳಿದ್ದರು.

ಇದರ ನಡುವೆ 2020ರ ಮುಖ್ಯಕಾರ್ಯದರ್ಶಿ ಅಧ್ಯಕ್ಷತೆಯಲ್ಲಿನ ಸಭೆಯಲ್ಲಿ ಅರಣ್ಯ ಭೂಮಿಯನ್ನು ಡಿನೋಟಿಫಿಕೇಷನ್‌ ಮಾಡುವ ಕುರಿತು ಅಡ್ವೋಕೆಟ್‌ ಜನರಲ್‌ ಅಭಿಪ್ರಾಯದೊಂದಿಗೆ ಪ್ರಸ್ತಾವನೆ ಸಿದ್ಧಪಡಿಸುವಂತೆ ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಲಾಗಿತ್ತು.

ಆದರೆ ಅರಣ್ಯ ಅಧಿಕಾರಿಗಳು ತಮ್ಮದೇ ಆದ ನಿರ್ಧಾರವನ್ನು ತೆಗೆದುಕೊಂಡಿದ್ದು 2020ರಲ್ಲಿ ವಿವಾದಿತ ಭೂಮಿಯ ಡಿನೋಟಿಫಿಕೇಶನ್ ಮಾಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ತನ್ಮೂಲಕ ಉಳಿದ 180 ಎಕರೆಯನ್ನೂ ಪರಭಾರೆ ಮಾಡಲು ಅವಕಾಶ ಮಾಡಲು ಯತ್ನಿಸಿದ್ದರು. ಹೀಗಾಗಿ ಈ ಮಧ್ಯಂತರ ಅರ್ಜಿ ಹಿಂಪಡೆಯಲು ಸರ್ಕಾರ ಅರ್ಜಿ ಸಲ್ಲಿಸಿದ್ದು, ಈ ಬಗ್ಗೆ ಘಟನೋತ್ತರ ಅನುಮತಿಯನ್ನು ಗುರುವಾರದ ಸಂಪುಟದಲ್ಲಿ ಪಡೆಯಲಾಗಿದೆ ಎಂದು ಪಾಟೀಲ್‌ ಮಾಹಿತಿ ನೀಡಿದರು.

ಕುಮಾರಸ್ವಾಮಿಗೆ ತಿರುಗೇಟು

ಎಚ್ಎಂಟಿ ಕಂಪನಿಗೆ ಮರು ಜೀವ ನೀಡಲು ರಾಜ್ಯ ಸರ್ಕಾರ ಯಾವುದೇ ಅಡ್ಡಿ ಮಾಡುತ್ತಿಲ್ಲ. ಅರಣ್ಯ ಭೂಮಿಯನ್ನು ಅಕ್ರಮವಾಗಿ ಡಿನೋಟಿಫಿಕೇಷನ್‌ ಮಾಡುವ ಕ್ರಮಕ್ಕೆ ಮಾತ್ರ ಬ್ರೇಕ್‌ ಹಾಕುತ್ತಿದೆ ಎಂದು ಸಚಿವ ಎಚ್.ಕೆ.ಪಾಟೀಲ್‌ ತಿರುಗೇಟು ನೀಡಿದ್ದಾರೆ.

ಎಚ್ಎಂಟಿ ಕಂಪನಿಗೆ ಮರುಜೀವ ನೀಡಲು ಯತ್ನಿಸುತ್ತಿದ್ದರೆ ರಾಜ್ಯ ಸರ್ಕಾರ ಸಹಕರಿಸುತ್ತಿಲ್ಲ ಎಂದಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ, ನಾವು ಅಡ್ಡಿ ಮಾಡಿದ್ದೀವಾ? ಅವರ ಕೆಲಸಕ್ಕೆ ನಾವ್ಯಾರು ಅಡ್ಡಿ ಮಾಡಿಲ್ಲ. ನಾವು ಅರಣ್ಯ ಭೂಮಿ ಉಳಿಸಲು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!