ದೇಂತಡ್ಕ ದೇವಳ ಆಭರಣ ನಾಪತ್ತೆ: ದೂರು ದಾಖಲು

KannadaprabhaNewsNetwork |  
Published : Oct 17, 2023, 12:45 AM IST
ಆಭರಣಗಳು ನಾಪತ್ತೆ | Kannada Prabha

ಸಾರಾಂಶ

ಬ್ರಹ್ಮಕಲಶೋತ್ಸದ ವೇಳೆ ಪೆರ್ನೆಯ ಕಳೆಂಜ- ದೇಂತಡ್ಕದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ದೇವರಿಗೆ ಸಮರ್ಪಿಸಲಾದ ಆಭರಣಗಳು ನಾಪತ್ತೆಯಾಗಿದೆ.

ಉಪ್ಪಿನಂಗಡಿ: ಕಳೆದ ಡಿಸೆಂಬರ್‌ನಲ್ಲಿ ನಡೆದ ಬ್ರಹ್ಮಕಲಶೋತ್ಸದ ವೇಳೆ ಪೆರ್ನೆಯ ಕಳೆಂಜ- ದೇಂತಡ್ಕದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ದೇವರಿಗೆ ಸಮರ್ಪಿಸಲಾದ ಆಭರಣಗಳು ನಾಪತ್ತೆಯಾಗಿರುವುದು ಅ.೧೫ರಂದು ಬೆಳಕಿಗೆ ಬಂದಿದ್ದು, ಈ ಬಗ್ಗೆ ದೇವಾಲಯದ ಆಡಳಿತ ಮಂಡಳಿಯ ಮಾಜಿ ಕಾರ್ಯದರ್ಶಿ ಗೋಪಾಲ ಶೆಟ್ಟಿ ಎನ್. ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಈ ದೇವಾಲಯದ ಬ್ರಹ್ಮಕಲಶಾಭಿಷೇಕ ನಡೆದಿದ್ದು, ಈ ಸಮಯದಲ್ಲಿ ದೇವರಿಗೆ ಭಕ್ತರೋರ್ವರು ಸುಮಾರು ಮೂರು ಮುಕ್ಕಾಲು ಪವನಿನ ಐದು ಎಳೆಗಳಿಂದ ಕೂಡಿದ ಚಿನ್ನದ ಜೋ ಮಾಲೆಯನ್ನು ಸಮರ್ಪಿಸಿದ್ದರು. ಈ ಹಿಂದೆ ರಾಮದಾಸ್ ರೈ ಎಂಬವರು ಸಮರ್ಪಿಸಿದ ಎರಡು ಪವನಿನ ಚಿನ್ನದ ಸರ ದೇವಾಲಯದಲ್ಲಿದ್ದು, ಭಾನುವಾರ ಆಡಳಿತಾಧಿಕಾರಿಯ ಸಮ್ಮುಖದಲ್ಲಿ ನಡೆದ ಪರಿಶೀಲನೆಯ ವೇಳೆ ಆಭರಣಗಳು ನಾಪತ್ತೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಚಿನ್ನದ ಸರಗಳು ನಾಪತ್ತೆಯಾಗಿರುವ ಕುರಿತು ಪೊಲೀಸರಿಗೆ ದೂರು ನೀಡಿರುವ ದೇವಾಲಯದ ಮಾಜಿ ಕಾರ್ಯದರ್ಶಿ ಗೋಪಾಲ ಶೆಟ್ಟಿ, ಕಬ್ಬಿಣದ ಕಪಾಟನ್ನು ದೇವಾಲಯದ ಕಾರ್ಯಾಲಯದಿಂದ ಕಳ್ಳತನ ಮಾಡಿ ಅದನ್ನು ಒಡೆದು ಅದರಲ್ಲಿದ್ದ ದಾಖಲೆಪತ್ರಗಳನ್ನು ಸ್ಥಾನಪಲ್ಲಟ ಮಾಡಲಾಗಿದ್ದು, ಆ ಖಾಲಿ ಕಪಾಟು ಭದ್ರತಾ ಕೊಠಡಿಯಲ್ಲಿರುವುದು ಇಂದು ಕಂಡು ಬಂದಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. * ಅತಿಯಾದ ನೋವು ತಂದಿದೆ: ಗೋಪಾಲ ಶೆಟ್ಟಿ ಕಳೆದ ಡಿಸೆಂಬರ್‌ನಲ್ಲಿ ದೇವಾಲಯದ ಬ್ರಹ್ಮಕಲಶಾಭಿಷೇಕ ಯಶಸ್ವಿಯಾಗಿ ನಡೆದಿತ್ತು. ಈ ಸಂದರ್ಭ ಆಡಳಿತ ಸಮಿತಿ ಅಧ್ಯಕ್ಷರಾಗಿ ರೋಹಿತಾಕ್ಷ ಬಾಣಬೆಟ್ಟು ಹಾಗೂ ಕಾರ್ಯದರ್ಶಿಯಾಗಿ ನಾನಿದ್ದೆ. ಮಹಾಸಭೆ ಕರೆದು ಮುಂದೆ ನೂತನ ಸಮಿತಿಯನ್ನು ರಚಿಸುವ ಆಲೋಚನೆಯಲ್ಲಿ ನಾವಿದ್ದೆವು. ಆದರೆ ಮಹಾಸಭೆ, ಲೆಕ್ಕಪತ್ರ ಪರಿಶೀಲನೆ ಆಗದ ಹೊರತಾಗಿಯೂ ಖಾಸಗಿ ಟ್ರಸ್ಟ್ ರಚಿಸಿ ಅವರಿಗೆ ಬೇಕಾದವರನ್ನು ಮಾತ್ರ ಸೇರಿಸಿ, ಅವರಷ್ಟಕ್ಕೆ ನೂತನ ಸಮಿತಿಯನ್ನು ರಚಿಸಿದರು. ಭದ್ರತಾ ಕೊಠಡಿ, ಅಡುಗೆ ಕೋಣೆ, ಕಾರ್ಯಾಲಯ ಸೇರಿದಂತೆ ಎಲ್ಲ ಕೀಗಳು ಅಧ್ಯಕ್ಷರ ವಶದಲ್ಲಿತ್ತು. ಈ ಎಲ್ಲ ಬೆಳವಣಿಗೆಗಳು ನಡೆದಾಗ ನಾವು ಇಲ್ಲಿನ ಸಮಸ್ಯೆಯನ್ನು ಪರಿಹರಿಸಿಕೊಡುವಂತೆ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಿಗೆ ದೂರು ನೀಡಿದ್ದೆವು. ಅದರ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಸರ್ಕಾರ ಆಡಳಿತಾಧಿಕಾರಿಯವರನ್ನು ನೇಮಿಸಿದ್ದು, ಭಕ್ತರ ಸಮ್ಮುಖದಲ್ಲಿ ರಚಿಸಲಾದ ಹೊಸ ಸಮಿತಿಗೆ ದೇವಾಲಯದ ಅಧಿಕಾರ ಹಸ್ತಾಂತರ ನಡೆಸಲು ಸೊತ್ತುಗಳ ಪರಿಶೀಲನೆ ನಡೆಸುವ ವೇಳೆ ಚಿನ್ನದ ಸರಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ. ದೇವರ ಆಭರಣ ನಾಪತ್ತೆಯಾಗಿರುವುದು ಮನಸ್ಸಿಗೆ ಬೇಸರ ಮೂಡಿಸಿದೆ ಎಂದು ಗೋಪಾಲ ಶೆಟ್ಟಿ ತಿಳಿಸಿದ್ದಾರೆ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ