ಸೂಕ್ತ ಕ್ರಮಕ್ಕೆ ಪದಾಧಿಕಾರಿಗಳು ತಹಸೀಲ್ದಾರ್‌ಗೆ ಒತ್ತಾಯ ಕನ್ನಡಪ್ರಭ ವಾರ್ತೆ ಹನೂರು ಕಂದಾಯ ಇಲಾಖೆಯ ರೆಕಾರ್ಡ್ ರೂಂನಲ್ಲಿ ದಾಖಲೆಗಳು ಕಳ್ಳತನವಾಗಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ. ಹನೂರು ಪಟ್ಟಣದ ಹೃದಯ ಭಾಗದಲ್ಲಿರುವ ತಾಲೂಕು ತಹಸೀಲ್ದಾರ್ ಕಚೇರಿ ಮುಂಭಾಗ ಇರುವ ಭೂ ದಾಖಲೆಗಳ ಕಚೇರಿಯಲ್ಲಿ ಕಳೆದ ಸೋಮವಾರ ರಾತ್ರಿ ಅಪರಿಚಿತ ವ್ಯಕ್ತಿ ದ್ವಿಚಕ್ರವಾಹನದಲ್ಲಿ ಬಂದು ರಾತ್ರಿ ವೇಳೆ ಬಾಗಿಲು ಮುರಿದು ಸರ್ಕಾರಿ ದಾಖಲೆಗಳನ್ನು ಕಳ್ಳತನ ಮಾಡಿರುವ ಬಗ್ಗೆ ತಹಸೀಲ್ದಾರ್ ಹನೂರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದುವರೆಗೂ ಭೂ ದಾಖಲೆಗಳ ಕಳ್ಳತನವಾಗಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಕಳ್ಳತನವಾಗಿರುವ ಭೂ ದಾಖಲೆಗಳ ಪತ್ತೆಹಚ್ಚಿ ಕ್ರಮ ಕೈಗೊಂಡಿಲ್ಲ ಎಂದು ಪದಾಧಿಕಾರಿಗಳು ದೂರಿದ್ದಾರೆ. ಇತ್ತೀಚೆಗೆ ತಹಸೀಲ್ದಾರ್ ಕಚೇರಿಯಲ್ಲಿ ಭೂಗಳ್ಳರು ಹಾಗೂ ಮಧ್ಯವರ್ತಿಗಳ ಹಾವಳಿ ಮಿತಿಮೀರಿದ್ದು ಇದರಿಂದಾಗಿ ಸರ್ಕಾರಿ ದಾಖಲೆಗಳು ಕಳ್ಳತನವಾಗಿರುವ ಬಗ್ಗೆ ಕೆಲವು ಅಧಿಕಾರಿಗಳ ಶಾಮೀಲಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು ಸಿಸಿಟಿವಿಯಲ್ಲಿ ವ್ಯಕ್ತಿ ರೆಕಾರ್ಡ್ ರೂಂ ಬಳಿ ಬಂದು ಬಾಗಿಲು ಮುರಿದು ಕೊಠಡಿ ಒಳಗೆ ನುಗ್ಗಿ ದಾಖಲೆಗಳನ್ನು ಕಳ್ಳತನ ಮಾಡಿರುವ ಬಗ್ಗೆ ಹೆಚ್ಚಿನ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಕೊಳ್ಳೇಗಾಲ ತಾಲೂಕು ಘಟಕದ ಅಧ್ಯಕ್ಷ ಗೌಡೇ ಗೌಡ, ಹನೂರು ಘಟಕದ ಅಧ್ಯಕ್ಷ ಅಮ್ಜದ್ ಖಾನ್ ರೈತ ಮುಖಂಡರಾದ ರಾಜೇಂದ್ರ, ಪೆರುಮಾಳ್ ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದ್ದಾರೆ. ಹನೂರು ಪಟ್ಟಣದ ಕಂದಾಯ ಇಲಾಖೆಗೆ ಸೇರಿರುವ ರೆಕಾರ್ಡ್ ರೂಂನಲ್ಲಿ ಕಳ್ಳತನವಾಗಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.