ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ ತಾಲೂಕಿನ ಹೊಸಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸವಳಿ ಗ್ರಾಮದಲ್ಲಿ ನಿರ್ಮಾಣಗೊಳ್ಳಲಿರುವ ₹344 ಕೋಟಿ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವಿರೋಧಿಸಿ, ಸೋಮವಾರ ಬೆಳಗಿನಿಂದ ತಾಲೂಕು ಕಚೇರಿ ಎದುರು ನಡೆಯುತ್ತಿದ್ದ ಭೀಮೇಶ್ವರ ಸಂಗಮ ಉಳಿಸಿ ಹೋರಾಟ ಸಮಿತಿ ಅಹೋರಾತ್ರಿ ಧರಣಿ ಕೈ ಬಿಡಲಾಗಿದೆ. ಶಾಸಕ ಆರಗ ಜ್ಞಾನೇಂದ್ರ ನೀಡಿದ ಆಶ್ವಾಸನೆ ಮೇರೆಗೆ ಪ್ರತಿಭಟನೆ ಹಿಂಪಡೆಯಲಾಗಿದೆ. ಸಂಜೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಜನರ ಭಾವನೆಗೆ ವಿರುದ್ಧವಾಗಿ ಈ ಯೋಜನೆ ಮಾಡುವ ಉದ್ದೇಶವಿಲ್ಲ. ಹೋರಾಟ ಸಮಿತಿ ಪ್ರಮುಖರ ಜೊತೆ ಅಧಿಕಾರಿಗಳು ಹಾಗೂ ತಾಂತ್ರಿಕ ತಜ್ಞರ ಸಭೆ ನಡೆಸಿ, ಪರ್ಯಾಯ ವ್ಯವಸ್ಥೆ ಬಗ್ಗೆ ತೀರ್ಮಾನಿಸೋಣ ಎಂದರು. ರೈತ ಮುಖಂಡ ಕೆ.ಟಿ.ಗಂಗಾಧರ್ ಮಾತನಾಡಿ, ಭೀಮನಕಟ್ಟೆ ಬಳಿ ನಿರ್ಮಿಸುವ ಕುಡಿಯುವ ನೀರಿನ ಯೋಜನೆ ಅವೈಜ್ಞಾನಿಕ. ನದಿಮೂಲದಲ್ಲಿ ನೀರೆತ್ತುವ ಪ್ರಕ್ರಿಯೆ ನದಿ ಮೂಲವೇ ನಾಶವಾಗುವ ಆತಂಕವಿದೆ. ಗ್ರಾಪಂಗಳಿಗೆ ಮಾಹಿತಿ ನೀಡದೇ ಜನರನ್ನು ಕತ್ತಲಲ್ಲಿಟ್ಟು ಯೋಜನೆ ಸಿದ್ಧಪಡಿಸಿರುವುದು ಖಂಡನೀಯ. ತಾಲೂಕಿನ ಗ್ರಾಮಾಂತರ ಪ್ರದೇಶಗಳ ಜನರಿಗೆ ಶುದ್ಧ ಕುಡಿಯುವ ನೀರಿನ ಯೋಜನೆಗೆ ಶರಾವತಿ, ವರಾಹಿ ಮತ್ತು ತುಂಗಾ ನದಿಗಳ ಹಿನ್ನೀರು ಬಳಕೆ ಸೂಕ್ತ ಎಂದರು. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಈ ಯೋಜನೆ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದ್ದರೂ ನನ್ನಿಂದಾಗಿ ತಾಲೂಕಿಗೆ ಮಂಜೂರಾಗಿರುವ ₹ 344 ಕೋಟಿ ಅನುದಾನಕ್ಕೆ ಹಿನ್ನಡೆಯಾಯಿತು ಎಂಬ ಅಪವಾದ ಬರಬಾರದೆಂಬ ಕಾರಣಕ್ಕೆ ಈವರೆಗೆ ಮೌನವಾಗಿದ್ದೆ. ಒಂದೊಮ್ಮೆ ಶಾಸಕರಿಂದ ಇದನ್ನು ಬದಲಾಯಿಸಲು ಅಸಾಧ್ಯವಾದಲ್ಲಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದರು. ಕಂಬ್ಳಿಗೆರೆ ರಾಜೇಂದ್ರ, ಕೋಡ್ಲು ವೆಂಕಟೇಶ್, ಕಲ್ಲಹಳ್ಳ ಶ್ರೀಧರ್, ಕೋಡ್ಲು ಸುಂದರೇಶ್, ಬೆಕ್ಕಿನಕಲ್ಮಠ ಸಚಿನ್, ತಲುಬಿ ರಾಘವೇಂದ್ರ, ಪಟೇಲ್ ವೆಂಕಟೇಶ ಹೆಗ್ಡೆ, ಕೊರೋಡಿ ಕೃಷ್ಣಪ್ಪ, ಬಂಡೆ ವೆಂಕಟೇಶ್, ಹೊಳೆಕೊಪ್ಪ ರವೀಂದ್ರ, ಧರಣೇಂದ್ರ, ಅರೇಹಳ್ಳಿ ಗ್ರಾಪಂ ಅಧ್ಯಕ್ಷೆ ಕವಿತಾ ಮುಂತಾದವರು ಇದ್ದರು. - - - -16 ಟಿಟಿಎಚ್ 01: ಭೀಮೇಶ್ವರ ಸಂಗಮ ಉಳಿಸಿ ಹೋರಾಟ ಸಮಿತಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದ ಸ್ಥಳಕ್ಕೆ ಶಾಸಕ ಆರಗ ಜ್ಞಾನೇಂದ್ರ ಭೇಟಿ ನೀಡಿ ಮಾತುಕತೆ ನಡೆಸಿದರು.