ಶಾಸಕರ ಕಚೇರಿಯಲ್ಲಿ ಅಡಕೆ ಬೆಳೆಗಾರರು, ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್, ಕಂದಾಯ ಅಧಿಕಾರಿಗಳ ಸಭೆ
ಕನ್ನಡಪ್ರಭ ವಾರ್ತೆ, ಕಡೂರುಮಾ.24 ರಂದು ಬೇಸಿಗೆಯಲ್ಲಿ ಅಡಕೆ ಮತ್ತಿತರ ಬೆಳೆ ನಿರ್ವಹಣೆಗೆ ನೀರು ಹಾಯಿಸಲು ಮದಗದಕೆರೆಯ ನೀರಿನ ತೂಬನ್ನು ತೆರೆಯಲಾಗುವುದು ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು. ಪಟ್ಟಣದ ಶಾಸಕರ ಕಚೇರಿಯಲ್ಲಿ ನಡೆದ ಅಡಕೆ ಬೆಳೆಗಾರರು, ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ಮತ್ತು ಕಂದಾಯ ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಭೆಯಲ್ಲಿ ಮದಗದಕೆರೆ ಅಚ್ಚುಕಟ್ಟುದಾರರ ಸಂಘದ ಸದಸ್ಯರು, ಬೀರೂರು-ಕಡೂರು ಅಡಕೆ ಬೆಳೆಗಾರ ಸಂಘಗಳ ಅಧ್ಯಕ್ಷರು, ಸದಸ್ಯರು, ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ಸಣ್ಣ ನೀರಾವರಿ ಇಲಾಖೆ ಎಇಇ ದಕ್ಷಿಣಮೂರ್ತಿ, ಪೊಲೀಸ್ ವೃತ್ತ ನಿರೀಕ್ಷಕ ಎಂ. ರಫೀಕ್, ಎಂ.ಐ ಎಂಜಿನಿಯರ್ ಮಂಜುನಾಥ್ ಸಭೆಯಲ್ಲಿ ರೈತರೊಂದಿಗೆ ಚರ್ಚಿಸಿ ತೀರ್ಮಾನಿಸಿದರು. ಈಗಾಗಲೇ ಮದಗದಕೆರೆಯಲ್ಲಿ ಸಂಗ್ರಹವಾದ ನೀರಿನ ಪ್ರಮಾಣ ಕೋಡಿಯಿಂದ 4 ಅಡಿ ಕಡಿಮೆಯಿದ್ದು, ಹಾಯುವಳಿ ದಾರರಿಗೆ ಉಳಿದ ನೀರನ್ನು ಬಿಡುಗಡೆ ಮಾಡಲಾಗುವುದು. ಇದಕ್ಕೆ ರೈತರು ಒಪ್ಪಿದ್ದಾರೆ ಎಂದು ಶಾಸಕರು ಪ್ರಕಟಿಸಿದರು. ಮದಗದಕೆರೆ ಕಾಲುವೆ ದುರಸ್ಥಿ ಕಾರ್ಯ ನಡೆಯುತ್ತಿದ್ದು ಎಂ.ಐ. ಇಲಾಖೆ ಅಧಿಕಾರಿಗಳು ಕಾಲುವೆ ದುರಸ್ಥಿ ಕಾರ್ಯವನ್ನು ಮಾ.24 ರ ತನಕ ನಡೆಸಿ ನಂತರ ನೀರು ಹರಿಸಲು ಸಹಕಾರ ನೀಡಬೇಕು. ಕಾಲುವೆಯಲ್ಲಿನ ಗಿಡ, ಗೆಂಟೆ,ಕಸವನ್ನು ಮಾ. 24 ರೊಳಗೆ ತೆಗೆದು ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಸಂಭಂಧಿಸಿದ ಇಲಾಖೆ ಅಧಿಕಾರಿಗಳು ಮಾಡಿಸಬೇಕು. ಅಕ್ರಮ ವಾಗಿ ನೀರು ಪಡೆಯುವವರ ವಿರುದ್ಧ ಕಂದಾಯ ಇಲಾಖೆ, ಉಪ ವಿಭಾಗಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು ರೈತರೊಂದಿಗೆ ಅಧಿಕಾರಿಗಳಿಗೆ ಸಹಕಾರ ನೀಡಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಮಾ.24 ರಿಂದ ಕನಿಷ್ಠ 40 ದಿನಗಳ ತನಕ ನೀರು ಹಾಯುವಳಿದಾರರು ಜಮೀನು, ತೋಟಗಳಿಗೆ ಹರಿಸಿದ ನಂತರ ತೂಬು ಮುಚ್ಚಲಾಗುವುದು ಎಂದು ಮಾಹಿತಿ ನೀಡಿದರು. ಸಭೆಯಲ್ಲಿ ಅಧಿಕಾರಿಗಳು, ಅಡಕೆ ಬೆಳೆಗಾರ ಸಂಘದ ರೈತರು ಮತ್ತಿತರರು ಇದ್ದರು. 11ಕೆಕೆಡಿಯು1.
ಕಡೂರು ತಾಲೂಕು ಮದಗದಕೆರೆ ಅಚ್ಚುಕಟ್ಟುದಾರರ ಸಭೆ ನಡೆಯಿತು. ಶಾಸಕ ಕೆ.ಎಸ್.ಆನಂದ್ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಸಿ.ಎಸ್.ಪೂರ್ಣಿಮ, ಎಇಇ ದಕ್ಷಿಣಮೂರ್ತಿ, ವೃತ್ತ ನಿರೀಕ್ಷಕ ರಫೀಕ್ ಮತ್ತಿತರರು ಇದ್ದರು.