ಇಲಾಖೆ ನಿರ್ಲಕ್ಷ್ಯಕ್ಕೆ ಸೊರಗಿದ ರೇಷ್ಮೆ ಇಲಾಖೆ

KannadaprabhaNewsNetwork |  
Published : Oct 10, 2023, 01:01 AM IST
ಶಿರಸಿಯ ಬನವಾಸಿ ರಸ್ತೆಯಲ್ಲಿರುವ ರೇಷ್ಮೆ ಇಲಾಖೆ ಕಟ್ಟಡ | Kannada Prabha

ಸಾರಾಂಶ

ರೈತರಿಗೆ ಉಪ ಆದಾಯ ತರಬಲ್ಲ ರೇಷ್ಮೆ ಕೃಷಿ ಜಿಲ್ಲೆಯಲ್ಲಿ ಸಾಧ್ಯವಿದ್ದರೂ ಇಲಾಖೆಯ ನಿರ್ಲಕ್ಯದಿಂದ ಸೊರಗಿದೆ. ರೇಷ್ಮೆ ಬೆಳೆಗಾರರನ್ನು ಪ್ರೋತ್ಸಾಹಿಸಬೇಕಾಗಿರುವ ಇಲಾಖೆ ಸಿಬ್ಬಂದಿ-ಕಟ್ಟಡ ನಿರ್ವಹಣೆ ಕೊರತೆಯ ಕಾರಣದಿಂದ ಇದ್ದೂ ಇಲ್ಲದಂತಾಗಿದೆ.

ಶಿರಸಿ:

ರೈತರಿಗೆ ಉಪ ಆದಾಯ ತರಬಲ್ಲ ರೇಷ್ಮೆ ಕೃಷಿ ಜಿಲ್ಲೆಯಲ್ಲಿ ಸಾಧ್ಯವಿದ್ದರೂ ಇಲಾಖೆಯ ನಿರ್ಲಕ್ಯದಿಂದ ಸೊರಗಿದೆ. ರೇಷ್ಮೆ ಬೆಳೆಗಾರರನ್ನು ಪ್ರೋತ್ಸಾಹಿಸಬೇಕಾಗಿರುವ ಇಲಾಖೆ ಸಿಬ್ಬಂದಿ-ಕಟ್ಟಡ ನಿರ್ವಹಣೆ ಕೊರತೆಯ ಕಾರಣದಿಂದ ಇದ್ದೂ ಇಲ್ಲದಂತಾಗಿದೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ರೇಷ್ಮೆ ಕೃಷಿ ವಿಸ್ತರಿಸಬೇಕಾದ ತಾಂತ್ರಿಕ ಸಲಹಾ ಕೇಂದ್ರದ ಕಟ್ಟಡವು ಸಿಬ್ಬಂದಿ, ನಿರ್ವಹಣೆ ಇಲ್ಲದೇ ದಶಕದಿಂದ ಅನಾಥವಾಗಿದೆ.

ನಗರದ ಬನವಾಸಿ ರಸ್ತೆಯಲ್ಲಿ ಜಿಲ್ಲಾಮಟ್ಟದ ರೇಷ್ಮೆ ಇಲಾಖೆಯಿದೆ. ಜಿಲ್ಲಾ ಕಟ್ಟಡವನ್ನೂ ಸೇರಿದಂತೆ ಅಲ್ಲಿರುವ ಅನೇಕ ಕಟ್ಟಡಗಳು ಶಿಥಿಲಗೊಂಡಿದ್ದು, ಸರ್ಕಾರಿ ಕಟ್ಟಡಗಳು ಯಾವುದೆ ಬಳಕೆಯಿಲ್ಲದೇ ದುಸ್ಥಿತಿ ತಲುಪಿದೆ.ಕೇವಲ ಬನವಾಸಿ ರಸ್ತೆಯ ಮುಖ್ಯ ಕಚೇರಿಯಲ್ಲದೇ ತಾಲೂಕಿನ ಹುಲೇಕಲ್‌ನಲ್ಲಿ ಇರುವ ರೇಷ್ಮೆ ಇಲಾಖೆಯ ರೇಷ್ಮೆ ವಿಸ್ತರಣಾಧಿಕಾರಿ ಸಲಹಾ ಕೇಂದ್ರದ ಕಥೆ ವ್ಯಥೆಯಿದು. ಕಟ್ಟಡ ಬಳಕೆಯಿಲ್ಲದೇ ಸುತ್ತಲೂ ಗಿಡ-ಗಂಟಿಗಳು ಬೆಳೆದು ನಿಂತಿದ್ದು ಇಡೀ ಕಟ್ಟಡ ಶಿಥಿಲವಾಗಿದೆ. ಮೂರು ದಶಕದ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ರೇಷ್ಮೆ ವಿಸ್ತರಿಸಬೇಕು ಎಂಬ ಕಾರಣಕ್ಕೆ ಸಲಹಾ ಕೇಂದ್ರ ಸ್ಥಾಪಿಸಲಾಗಿತ್ತು. ಇಲ್ಲಿ ರೇಷ್ಮೆ ವಿಸ್ತರಣಾಧಿಕಾರಿ ನಿಯೋಜಿಸಲಾಗಿತ್ತು.

ಆದರೆ ಕಳೆದ ಕೆಲ ವರ್ಷಗಳಿಂದ ಇಲ್ಲಿದ್ದ ಸಿಬ್ಬಂದಿಗಳನ್ನು ಹೊರಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ಎಲ್ಲ ಸಾಮಗ್ರಿಗಳನ್ನು ಸ್ಥಳಾಂತರಿಸಲಾಗಿದೆ. ಹೀಗಾಗಿ ಈ ಕಟ್ಟಡ ಬಳಕೆಯಿಲ್ಲದೆ ನಿರ್ವಹಣಾ ಕೊರತೆಯಿಂದ ಸೊರಗಿದೆ. ಸುಮಾರು ಮೂರು ಗುಂಟೆ ಪ್ರದೇಶದಲ್ಲಿರುವ ಸಲಹಾ ಕೇಂದ್ರ ಕಟ್ಟಡ ಬಾಗಿಲು ಎಳೆದುಕೊಂಡಿದ್ದು ಸ್ಮಾರಕದಂತೆ ಕಾಣುತ್ತಿದೆ.ಖಾಲಿಯಿರುವ ಕಟ್ಟಡ ಬಳಸುವ ಬಗ್ಗೆ ಈ ಮೊದಲು ಸ್ಥಳೀಯ ಗ್ರಾಮ ಪಂಚಾಯಿತಿ ಒಲವು ತೋರಿತ್ತು. ಈ ಬಗ್ಗೆ ಇಲಾಖೆಯಿಂದ ಒಪ್ಪಿಗೆ ಸಹ ನೀಡಲಾಗಿತ್ತು. ಆದರೆ ಅದನ್ನು ದುರಸ್ತಿ ಮಾಡಿಕೊಳ್ಳುವುದಕ್ಕೆ ಅನುದಾನ ಕೊರತೆಯ ಕಾರಣದಿಂದ ಕಟ್ಟಡ ಪುನಃ ಇಲಾಖೆ ಸುಪರ್ದಿಗೆ ನೀಡಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.ಮುಖ್ಯವಾಗಿ ದಶಕಗಳ ಹಿಂದಿನ ಈ ಕಟ್ಟಡ ಪಾಳು ಬಿದ್ದಿರುವುದನ್ನು ನೋಡಿ ಈ ಮಾರ್ಗದಲ್ಲಿ ಸಾಗುವವರು ವ್ಯಥೆ ಪಡುವಂತಾಗಿದೆ. ಎರಡು ಹಾಲ್‌ ಇರುವ ಈ ಕಟ್ಟಡದ ಕಿಟಕಿ ಗ್ಲಾಸ್‌ಗಳು ಉದುರಿ ಬಿದ್ದಿವೆ. ಇನ್ನು ಕಟ್ಟಡ ಮಳೆಯಿಂದ ಸೋರುತ್ತಿದ್ದು ಶಿಥಿಲಗೊಳ್ಳುತ್ತಿದೆ. ಕಟ್ಟಡಕ್ಕೆ ತಗಡಿನ ಶೀಟ್ ಹೊದಿಕೆ ಹಾಕಿದ್ದರೆ ಇನ್ನಷ್ಟು ದುಸ್ಥಿತಿಗೊಳಗಾಗದಂತೆ ತಡೆಯಬಹುದಿತ್ತು. ಈ ಮೂಲಕ ಬಾಡಿಗೆಗೆ ನೀಡಿ ಬಳಕೆ ಮಾಡಬಹುದಿತ್ತು ಎನ್ನುತ್ತಾರೆ ಸ್ಥಳೀಕರಾದ ನರಸಿಂಹ ಹೆಗಡೆ. ಜಿಲ್ಲಾ ರೇಷ್ಮೆ ಇಲಾಖೆಯಲ್ಲಿ 60 ಸಿಬ್ಬಂದಿ ಮಂಜೂರಾಗಿದೆ. ಆದರೆ ಕೇವಲ 3 ಸಿಬ್ಬಂದಿ ಮಾತ್ರ ಇದ್ದು, ಇದರಿಂದ ರೇಷ್ಮೆ ಇಲಾಖೆಗೆ ಸಂಬಂಧಿಸಿ ಯಾವುದೇ ಪ್ರಚಾರ ಕಾರ್ಯ, ರೈತರಿಗೆ ಸಹಕಾರ ಸಿಗುತ್ತಿಲ್ಲ.‌ ನಿರೀಕ್ಷಿತ ಮಟ್ಟದಲ್ಲಿ ರೇಷ್ಮೆ ಕೃಷಿಯೂ ಜಿಲ್ಲೆಯಲ್ಲಿ ನಡೆಯುತ್ತಿಲ್ಲ. ಜತೆಗೆ ಮಾರುಕಟ್ಟೆಗೆ ಬೇರೆ ಜಿಲ್ಲೆಯನ್ನು ಅವಲಂಭಿಸಲಾಗಿದೆ. ಇದರಿಂದಾಗಿ‌ ರೇಷ್ಮೆ ಇಲಾಖೆ ಇದ್ದರೂ ಇಲ್ಲದಂತಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ತಾಲೂಕಿನ ಪಶ್ಚಿಮ ಭಾಗದಲ್ಲಿ ರೇಷ್ಮೆ ಕೃಷಿ ವಿಸ್ತರಣೆ ಕಷ್ಟಸಾಧ್ಯವಾದ ಹಿನ್ನೆಲೆ ಸಿಬ್ಬಂದಿ ವರ್ಗಾವಣೆ ಮಾಡಲಾಗಿದೆ. ಆಗಿಂದ ಹುಲೇಕಲ್ ಭಾಗದ ಕಟ್ಟಡ ನಿರ್ವಹಣೆಯಿಲ್ಲದೆ ಸೊರಗುತ್ತಿದೆ ಎಂದು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಶ್ರೀಧರ ಹೆಗಡೆ ಹೇಳಿದ್ದಾರೆ.ಶ್ರೀಧರ ಹೆಗಡೆ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ