15-9-2026ರಂದೇ ಆದೇಶ ಹೊರಬಿದ್ದರೂ ಮೌನಕ್ಕೆ ಶರಣಾದ ಡಿಸಿ, ಸಿಇಒ
ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ ಗದಗಪಶುಪಾಲನಾ ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿಯಾಗಿರುವ ವ್ಯಕ್ತಿಗೆ ನೀಡಿರುವ ಗದಗ ತಾಪಂ ಕಾರ್ಯನಿರ್ವಾಹಕ ಅಧಿಕಾರಿ (ಇಒ) ಹುದ್ದೆಯ ಹೆಚ್ಚುವರಿ ಪ್ರಭಾರವನ್ನು ತಕ್ಷಣದಿಂದಲೇ ರದ್ದುಗೊಳಿಸಿ ಮೂಲ ಇಲಾಖೆಗೆ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ಸ್ಪಷ್ಟ ಆದೇಶ ಹೊರಡಿಸಿದ್ದರೂ, ಗದಗ ಜಿಲ್ಲಾಡಳಿತ ಮಾತ್ರ ಈ ಆದೇಶವನ್ನು ಜಾರಿಗೊಳಿಸದೇ ಯಾರದ್ದೋ ಮರ್ಜಿಗೆ ಬಿದ್ದಂತೆ ಕಾಲಹರಣ ಮಾಡುತ್ತಿದೆ.
ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ವಿ. ಅಶೋಕ್ 15-09-2026ರಂದು ಹೊರಡಿಸಿರುವ ಪತ್ರದಲ್ಲಿ ಗದಗ ಪಾಲಿಕ್ಲಿನಿಕ್‌ನ ಮುಖ್ಯ ಪಶುವೈದ್ಯಾಧಿಕಾರಿ ಡಾ. ಎಚ್.ಎಸ್. ಜಿನಗಿ ಅವರನ್ನು ಗದಗ ತಾಪಂ ಇಒ ಹುದ್ದೆಯ ಹೆಚ್ಚುವರಿ ಪ್ರಭಾರದಲ್ಲಿರಿಸಿ ಹೊರಡಿಸಲಾಗಿರುವ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲು ಗದಗ ಜಿಲ್ಲಾಧಿಕಾರಿ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
ಜು.10ರಂದೇ ಮಹತ್ವದ ಆದೇಶ
ಇದಕ್ಕೆ ಮುಖ್ಯ ಕಾರಣ ಕರ್ನಾಟಕ ಹೈಕೋರ್ಟ್ ಮತ್ತು ಕರ್ನಾಟಕ ಆಡಳಿತ ನ್ಯಾಯಮಂಡಳಿಯ ನಿರ್ದೇಶನಗಳ ಪ್ರಕಾರ, ಪಶುವೈದ್ಯಾಧಿಕಾರಿಗಳನ್ನು ತಾಪಂ ಇಓಗಳನ್ನಾಗಿ ನೇಮಿಸಬಾರದು ಎಂಬ ನಿಯಮವಿದೆ. ಈ ನಿಯಮ ಉಲ್ಲಂಘಿಸಿ ಕಾನೂನುಬಾಹಿರವಾಗಿ ಇವರನ್ನು ನೇಮಕ ಮಾಡಲಾಗಿದೆ ಎಂದು ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ದೂರು ದಾಖಲಾಗಿತ್ತು. ಈ ಕಾರಣ ಹಾಗೂ ನ್ಯಾಯಾಲಯದ ನಿರ್ದೇಶನಗಳ ಹಿನ್ನೆಲೆ ಡಾ. ಜಿನಗಿ ಅವರಿಗೆ ಗದಗ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ನೀಡಲಾಗಿದ್ದ ಹೆಚ್ಚುವರಿ ಪ್ರಭಾರದ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ. ಅಲ್ಲದೆ, ಅವರನ್ನು ಹೆಚ್ಚುವರಿ ಪ್ರಭಾರ ಹುದ್ದೆಯಿಂದ ಬಿಡುಗಡೆಗೊಳಿಸಲು ಗದಗ ಜಿಪಂ ಸಿಇಒಗೆ ಆಯುಕ್ತರು ಆದೇಶದಲ್ಲಿ ಸ್ಪಷ್ಟವಾಗಿ ಸೂಚಿಸಿದ್ದಾರೆ. ಆದರೆ ಇದುವರೆಗೂ ಅವರನ್ನು ಬಿಡುಗಡೆ ಮಾಡಿಲ್ಲ.ಪಶು ವೈದ್ಯಾಧಿಕಾರಿಗಳನ್ನು ಇಲಾಖೇತರ ಆಡಳಿತ ಹುದ್ದೆಗಳಿಗೆ ನಿಯೋಜಿಸಬಾರದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಸುತ್ತೋಲೆ ಇದೆ. ಗದಗ ಪ್ರಕರಣಕ್ಕಾಗಿಯೇ ಪ್ರತ್ಯೇಕವಾಗಿ ಎರಡು ಆದೇಶಗಳನ್ನು ಹೊರಡಿಸಲಾಗಿದ್ದರೂ ಆ ನಿಯಮಗಳನ್ನು ಗಾಳಿಗೆ ತೂರಿ ತಾಪಂ ಇಒ ಪ್ರಭಾರ ನೀಡಲಾಗಿದೆ. ಪದವೀಧರ ಕ್ಷೇತ್ರದ ಚುನಾವಣಾ ಅಧಿಸೂಚನೆ ನೆಪ ಮಾಡಿಕೊಂಡು ಆದೇಶ ಮುಚ್ಚಿಹಾಕಲು ಯತ್ನಿಸಿದರೆ ರೈತ ಸಂಘ ಹಾಗೂ ಹಸಿರು ಸೇನೆ ಬೀದಿಗಿಳಿದು ಉಗ್ರ ಹೋರಾಟ ನಡೆಸಲಿದೆ.
--------
ಸೆ. 15 ರಂದು ಹೊರಡಿಸಿರುವ ಸರ್ಕಾರದ ಆದೇಶದ ಪ್ರತಿಗಳು.