ಹಳಿಯಾಳ: ಬುಡಕಟ್ಟು ಸಮುದಾಯ ಇರುವ ಹಳಿಯಾಳ ತಾಲೂಕಿನಲ್ಲಿ ಉತ್ತಮ ವೈದ್ಯಕೀಯ ಸೌಲಭ್ಯಗಳ ವ್ಯವಸ್ಥೆ, ಸುಸಜ್ಜಿತ, ಪೌಷ್ಟಿಕ ಪುನಃಶ್ಚೇತನ ಕೇಂದ್ರ ಆರಂಭಿಸುವ ಅವಶ್ಯಕತೆ ಇದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ ಹೇಳಿದರು.
ಹಳಿಯಾಳಕ್ಕೆ ಆಗಮಿಸಿದ ಅವರು, ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.ಎರಡು ದಿನಗಳ ಜಿಲ್ಲಾ ಪ್ರವಾಸವನ್ನು ತಾವು ಕೈಗೊಂಡಿದ್ದು, ಈ ಪ್ರವಾಸದ ಮೊದಲ ಹಂತವಾಗಿ ಹಳಿಯಾಳದಿಂದ ತಮ್ಮ ಭೇಟಿಯನ್ನು ಆರಂಭಿಸಿರುವುದಾಗಿ ತಿಳಿಸಿದರು.
ಹಳಿಯಾಳ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದೆ. ಇಲ್ಲಿ 15 ವೈದ್ಯರು ಇರಬೇಕು. ಆದರೆ ಕೇವಲ ಇಬ್ಬರು ವೈದ್ಯರು ಮಾತ್ರ ಇದ್ದಾರೆ. ತಾಲೂಕು ಆಸ್ಪತ್ರೆಯಲ್ಲಿನ ಕೊರತೆಗಳು ಇಲ್ಲಿ ಅವಶ್ಯಕವಾಗಿ ಬೇಕಾಗಿದ್ದ ವ್ಯವಸ್ಥೆಗಳ ಬಗ್ಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಗಮನಕ್ಕೆ ತರುತ್ತೆನೆ ಎಂದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನೀಡಿದ ದಾಖಲೆಗಳ ಪ್ರಕಾರ ಸಾಧಾರಣ ಅಪೌಷ್ಟಿಕತೆಯಿಂದ 13 ಮಕ್ಕಳು ಹಾಗೂ ತೀವ್ರ ಅಪೌಷ್ಟಿಕತೆಯಿಂದ 90ಕ್ಕಿಂತ ಹೆಚ್ಚು ಮಕ್ಕಳ ಇದ್ದಾರೆ ಎಂದರು.
ಆಸ್ಪತ್ರೆಯಲ್ಲಿನ ಮಕ್ಕಳ ವಾರ್ಡ್, ನವಜಾತ ಶಿಸುಗಳ ಆರೈಕೆ ಘಟಕ, ಹೆರಿಗೆ ನಂತರ ಆರೈಕೆ ವ್ಯವಸ್ಥೆ ಇತ್ಯಾದಿ ಪರಿಶೀಲನೆ ನಡೆಸಲಾಗಿ, ಇಲ್ಲಿ ಬಿಸಿ ನೀರಿನ ಸೌಲಭ್ಯ ಒದಗಿಸಬೇಕು. ಹಾಗೂ ಆಸ್ಪತ್ರೆಯಲ್ಲಿ ಮಕ್ಕಳ ಸಹಾಯವಾಣಿ ಡಿಸ್‌ಪ್ಲೇ ಮಾಡಬೇಕೆಂದು ಸೂಚಿಸಿದ್ದೇನೆ ಎಂದರು.ಅಪ್ರಾಪ್ತ ಹೆಣ್ಮಕ್ಕಳು ಗರ್ಭಿಣಿಯಾಗುವ ಹಾಗೂ ಪೋಕ್ಸೊ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಮುಖ್ಯಮಂತ್ರಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಒಗಳ ಸಭೆ ನಡೆಸಿ, ಈ ಪ್ರಕರಣಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಹಾಗೂ ಜಾಗೃತಿ ಮೂಡಿಸಲು ಸೂಚಿಸಿದ್ದಾರೆ. ಹಳಿಯಾಳದಲ್ಲಿ ಈ ವರ್ಷ ಆಗಸ್ಟ್ ತಿಂಗಳಿನವರೆಗೆ 5 ಪೋಕ್ಸೊ ಪ್ರಕರಣಗಳು ದಾಖಲಾಗಿವೆ. ಇಂತಹ ಪ್ರಕರಣಗಳು ಸಂಭವಿಸಿದಾಗ ಸೂಕ್ತ ಚಿಕಿತ್ಸೆ ಹಾಗೂ ಕಾನೂನಾತ್ಮಕ ಕ್ರಮಗಳ ಆಗಬೇಕು ಎಂದರು.
ಹಳಿಯಾಳ ತಾಲೂಕಿನಲ್ಲಿ ಈ ವರ್ಷ 8 ಮಕ್ಕಳ ಅಸಹಜ ಸಾವಿನ ಪ್ರಕರಣ ವರದಿಯಾಗಿವೆ. ಇದೊಂದು ಗಂಭೀರವಾದ ವಿಷಯವಾಗಿದೆ. ಇಂತಹ ಪ್ರಕರಣಗಳ ತಡೆಗಟ್ಟಲು ಇಲಾಖೆಯವರು ಕ್ರಮ ಕೈಗೊಳ್ಳುವ ಅವಶ್ಯಕತೆಯಿದೆ ಎಂದರು.ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ತಂಡದವರು ಪೊಲೀಸ್ ಇಲಾಖೆಯವರು ಸಮನಯ್ವತೆಯಿಂದ ಕೆಲಸ ಮಾಡಬೇಕಾಗಿದೆ ಎಂದರು.
ಹಳಿಯಾಳ ಪೊಲೀಸ್ ಠಾಣೆಗೆ ಭೇಟಿ ನೀಡಿದ ಅವರು, ಮಕ್ಕಳ ಸಂರಕ್ಷಣೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಪರಿಶೀಲನೆ ನಡೆಸಿದರು. ನಂತರ ಅವರು ಹೆಸ್ಕಾಂ ಕಚೇರಿ ಬಳಿ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಾಲಕಿಯರೊಂದಿಗೆ ಮಾತನಾಡಿ ವಸತಿ ನಿಲಯದಲ್ಲಿನ ಊಟೋಪಚಾರ ಹಾಗೂ ಇತ್ಯಾದಿ ಮಾಹಿತಿ ಪಡೆದರು. ಭೋಜನಾಲಯಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮದನಳ್ಳಿ ಗ್ರಾಮದ ಬಳಿ ವಾಜಪೇಯಿ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಂಜೆ ತಾಲೂಕಾಡಳಿತ ಸೌಧದಲ್ಲಿ ಅಧಿಕಾರಿಗಳ ಸಭೆ ನಡೆಸಿದರು.ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸೋನಲ್ ಐಗಳ, ಸುನೀಲ, ಸಾವೇರ ಫರ್ನಾಂಡೀಸ್, ತಹಸೀಲ್ದಾರ ಪ್ರವೀಣ ಹುಚ್ಚಣ್ಣನವರ, ಸಮಾಜ ಕಲ್ಯಾಣಾಧಿಕಾರಿ ಅಶೋಕ ಪವಾರ, ಪ್ರಭಾರೆ ಸಿಡಿಪಿಒ ಅಂಬಿಕಾ, ಬಿಇಒ ಪ್ರಮೋದ ಮಹಾಲೆ, ಬಿಸಿಎಂ ಅಧಿಕಾರಿ ಸುಜಾತಾ, ಸಿಪಿಐ ಜಯಪಾಲ ಪಾಟೀಲ, ಇದ್ದರು.