ಶರಣು ಸೊಲಗಿ ಮುಂಡರಗಿ
ತಾಲೂಕಿನ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಹಮ್ಮಿಗಿ ಹತ್ತಿರವಿರುವ ಬ್ಯಾರೇಜ್ ಸಂಪೂರ್ಣವಾಗಿ ಖಾಲಿಯಾಗಿದ್ದು, ಬ್ಯಾರೇಜ್ ಹಿನ್ನೀರು ಡೆಡ್ ಸ್ಟೋರೇಜ್‌ಗೆ ತಲುಪಿದೆ. ಹೀಗಾಗಿ ಶೀಘ್ರದಲ್ಲಿಯೇ ಮುಂಡರಗಿ ತಾಲೂಕಿಗೆ ಕುಡಿವ ನೀರಿನ ಸಮಸ್ಯೆ ಎದುರಾಗಲಿದೆ.ಈಗಾಗಲೇ ಹಮ್ಮಿಗಿ ಬ್ಯಾರೇಜ್‌ನಲ್ಲಿ ಕುಡಿಯುವ ನೀರಿಗಾಗಿ ಕಾಯ್ದಿರಿಸಿದ್ದ ನೀರು ಖಾಲಿಯಾಗುವ ಸಂಭವ ಕಂಡು ಬಂದಾಗ ಎರಡು ಬಾರಿ 2 ಟಿಎಂಸಿ ನೀರು ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ಹರಿಸಲಾಗಿತ್ತು. ಅದು ಇಲ್ಲಿಯವರೆಗೂ ಗದಗ-ಬೆಟಗೇರಿ, ಮುಂಡರಗಿ ತಾಲೂಕು ಸೇರಿದಂತೆ ಇತರೆ ಕೆಲವು ತಾಲೂಕುಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಅನುಕೂಲವಾಯಿತು. ಇದೀಗ ನೀರು ಡೆಡ್ ಸ್ಟೋರೇಜ್ ಮಟ್ಟಕ್ಕಿಂತ ಕೆಳಗೆ ತಲುಪಿದೆ. ನೀರು ಹಸಿರು ಬಣ್ಣಕ್ಕೆ ತಿರುಗಿ ಗಬ್ಬುವಾಸನೆ ಬರುತ್ತಿದೆ. ಮತ್ತೊಮ್ಮೆ ಭದ್ರಾ ಜಲಾಶಯದಿಂದ ನೀರು ಹರಿಸೋಣವೆಂದರೆ ಅಲ್ಲಿಯೂ ನೀರು ಖಾಲಿಯಾಗುವ ಹಂತಕ್ಕೆ ತಲುಪಿದೆ ಎನ್ನಲಾಗುತ್ತಿದೆ. ಹೀಗಾಗಿ ಎಲ್ಲರೂ ಮಳೆರಾಯನ ನಿರೀಕ್ಷೆಯಲ್ಲಿರುವಂತಾಗಿದೆ.
ಸಿಂಗಟಾಲೂರು ಬ್ಯಾರೇಜ್‌ನ ಹಿನ್ನೀರಿನಲ್ಲಿ ಕುಡಿಯುವ ನೀರಿಗಾಗಿ ಮೀಸಲಿಟ್ಟ ನೀರನ್ನು ಗದಗ ನಿರಂತರ ಕುಡಿಯುವ ನೀರು ಯೋಜನೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಹೂವಿನಹಡಗಲಿ ಕುಡಿಯುವ ನೀರು ಯೋಜನೆ ಪೂರೈಕೆ ಮಾಡಲಾಗುತ್ತದೆ. ಈಗ ಬ್ಯಾರೇಜ್‌ನಲ್ಲಿ ನೀರು ಡೆಡ್ ಸ್ಟೋರೇಜ್‌ಗೆ ತಲುಪಿದ್ದು, ಡೆಡ್ ಸ್ಟೋರೇಜ್ ನೀರು ಬಳಸಿಕೊಂಡರೂ ಸಹ 4-6 ದಿನಕ್ಕೆ ಮಾತ್ರ ಸಾಕಾಗಬಹುದಾಗಿದೆ. ಹೀಗಾಗಿ ಮುಂಡರಗಿ ತಾಲೂಕು ಸೇರಿದಂತೆ ಬ್ಯಾರೇಜಿನಿಂದ ನೀರು ಸರಬರಾಜಾಗುವ ಎಲ್ಲೆಡೆಯೂ ಕುಡಿಯುವ ನೀರಿನ ಸಮಸ್ಯೆಯಾಗುವುದು ನಿಶ್ಚಿತ.ಮುಂಡರಗಿ ಪಟ್ಟಣದಲ್ಲಿ ಬೇಸಿಗೆ ಪ್ರಾರಂಭದಲ್ಲಿ 2-3 ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿತ್ತು. ನಂತರ 4-5 ದಿನಗಳಿಗೊಮ್ಮೆ ಮಾಡಲಾಯಿತು. ಇತ್ತೀಚೆಗೆ ಒಂದು ತಿಂಗಳಿಂದ 7-8 ದಿನಗಳಿಗೊಮ್ಮೆ ಪೂರೈಸಲಾಗುತ್ತಿದೆ. ಇದೀಗ ನೀರು ಸಂಪೂರ್ಣವಾಗಿ ಖಾಲಿಯಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲರ ಚಿತ್ತ ಮಳೆರಾಯನತ್ತ ನೆಟ್ಟಿದೆ.
ಮುಂಡರಗಿ ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 13 ಶುದ್ಧ ಕುಡಿವ ನೀರಿನ ಘಟಕಗಳಿದ್ದು, ಅವುಗಳಲ್ಲಿ 12 ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು, 1ಘಟಕ ತಾಂತ್ರಿಕ ತೊಂದರೆಯಿಂದಾಗಿ ಸ್ಥಗಿತಗೊಂಡಿದೆ. ಹೀಗಾಗಿ ಪಟ್ಟಣದಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆಯಾಗುವ ಲಕ್ಷಣವಿಲ್ಲ. ಆದರೆ ಪುರಸಭೆ ಅಧಿಕಾರಿಗಳು ಈಗಿರುವ ಎಲ್ಲ ಶುದ್ಧ ನೀರಿನ ಘಟಕ ಸರಿಯಾಗಿ ನಿರ್ವಹಣೆ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.ತಾಲೂಕಿನ ಗ್ರಾಮೀಣ ಭಾಗದಲ್ಲಿ ಒಟ್ಟು 88 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಅವುಗಳಲ್ಲಿ ಸುಮಾರು 10 ಘಟಕಗಳು ಸ್ಥಗಿತವಾಗಿವೆ. ಅಲ್ಲದೇ ಗ್ರಾಮೀಣ ಪ್ರದೇಶದಲ್ಲಿ ಜಾನುವಾರುಗಳಿಗೆ ಕುಡಿಯಲು ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದ್ದು, ಅವುಗಳಿಗೂ ಸಹ ನೀರಿನ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು ಎಂದು ಗ್ರಾಮೀಣ ಪ್ರದೇಶದ ರೈತ ಸಮುದಾಯ ಒತ್ತಾಯಿಸಿದೆ.
ಸಿಂಗಟಾಲೂರು ಬ್ಯಾರೇಜ್ ಹಿನ್ನೀರಿನಲ್ಲಿ 3.12 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿದ್ದು, ಹಿನ್ನೀರಿಗೆ ಮುಳುಗಡೆ ಪ್ರದೇಶಕ್ಕೆ ಒಳಪಡುವ ತಾಲೂಕಿನ ಗುಮ್ಮಗೋಳ, ಬಿದರಹಳ್ಳಿ, ವಿಠಲಾಪೂರ ಹಾಗೂ ಹೂವಿನಹಡಗಲಿ ತಾಲೂಕಿನ ಅಲ್ಲಿಪುರ ಗ್ರಾಮಗಳು ಸಂಪೂರ್ಣ ಸ್ಥಳಾಂತರಗೊಳ್ಳದ ಕಾರಣ ಸದ್ಯ ಅಲ್ಲಿ 1.82 ಟಿಎಂಸಿ ನೀರು ಮಾತ್ರ ಸಂಗ್ರಹಿಸಿಕೊಂಡು ಬರಲಾಗುತ್ತಿದೆ. ಹೀಗಾಗಿಯೇ ಪ್ರತಿ ವರ್ಷವೂ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದ್ದು, ಸರ್ಕಾರ ಸ್ಥಳಾಂತರದ ಬಗ್ಗೆ ಹೆಚ್ಚಿನ ಮುತುವರ್ಜಿವಹಿಸುವುದು ಅತ್ಯಂತ ಅವಶ್ಯವಾಗಿದೆ.ಸಿಂಗಟಾಲೂರು ಬ್ಯಾರೇಜ್‌ನಲ್ಲಿರುವ ನೀರು ಡೆಡ್ ಸ್ಟೋರೇಜ್ ಮಟ್ಟಕ್ಕಿಂತ ಕೆಳಕ್ಕೆ ತಲುಪಿದ್ದು, ಮುಂಜಾಗೃತಾ ಕ್ರಮವಾಗಿ ಈಗಾಗಲೇ ಮುಂಡರಗಿ ಭಾಗದಲ್ಲಿ ಸುಮಾರು 7 ರಿಂದ 8 ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಪಡೆದುಕೊಂಡಿದ್ದು, ಅವುಗಳ ಮೂಲಕ ಸುತ್ತಮುತ್ತಲಿನ ಪ್ರದೇಶಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. ಡಂಬಳ ಭಾಗದ 1-2 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು, ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ತಹಸೀಲ್ದಾರ್ ಧನಂಜಯ ಮಾಲಗತ್ತಿ ತಿಳಿಸಿದ್ದಾರೆ.