ಶುಕ್ರವಾರದೊಳಗೆ ರೈತರಿಗೆ ಬರ ಪರಿಹಾರ ಜಮಾ ಮಾಡಿ

KannadaprabhaNewsNetwork | Published : May 16, 2024 12:46 AM

ಸಾರಾಂಶ

ಅಧಿಕಾರಿಗಳ ಬೇಜವ್ದಾರಿಯಿಂದ ಬರ ಪರಿಹಾರದ ಹಣ ಸರಿಯಾಗಿ ಜಮಾ ಆಗುತ್ತಿಲ್ಲ ಎಂದು ಚನ್ನಬಸವರಾಜ ಆರೋಪ ಮಾಡಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ಕಂದಾಯ ಇಲಾಖೆಯ ಅಧಿಕಾರಿಗಳ ಬೇಜವ್ದಾರಿಯಿಂದ ತಾಲೂಕಿನ ರೈತರಿಗೆ ಬರ ಪರಿಹಾರದ ಹಣ ಸರಿಯಾಗಿ ಜಮಾ ಆಗುತ್ತಿಲ್ಲ. ಈ ತಾರತಮ್ಯ ನೀತಿ ವಿರೋಧಿಸಿ ಶುಕ್ರವಾರ ತಹಸೀಲ್ದಾರ್‌ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ರಾಜ್ಯ ಸಾಮಾಜಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಚನ್ನಬಸವರಾಜ ಕುಲಕರ್ಣಿ ಆರೋಪಿಸಿದರು.

ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭೀಕರ ಬರಗಾಲದ ಹಿನ್ನೆಲೆಯಲ್ಲಿ ಸರ್ಕಾರ ರೈತರಿಗೆ ನೀಡುತ್ತಿರುವ ಪರಿಹಾರದಲ್ಲಿ 2.5 ಹೆಕ್ಟೇರ್‌ಗೆ ₹23 ಸಾವಿರ ಜಮಾ ಆಗಬೇಕಾಗಿತ್ತು. ಆದರೆ, ಕೆಲವರಿಗೆ ₹2 ಸಾವಿರ, ₹5 ಸಾವಿರ, ₹10 ಸಾವಿರ ಮತ್ತು ₹15 ಸಾವಿರ ಜಮಾ ಮಾಡಲಾಗಿದೆ. ಯಾವ ಬೆಳೆಗೆ ಎಷ್ಟು ಪರಿಹಾರ ಎಂಬುವುದು ಸ್ಪಷ್ಟವಾಗುತ್ತಿಲ್ಲ ಎಂದು ದೂರಿದರು.

ಕಂದಾಯ ಇಲಾಖೆಯ ಅಧಿಕಾರಿಗಳನ್ನು ಕೇಳಿದರೇ ರೈತರ ಎಫ್‌ಐಡಿ ನಂಬರ, ಆರ್‌ಟಿಸಿ ನಂಬರ್‌ ಇರುವ ಆಧಾರ್‌ ಮತ್ತು ಬ್ಯಾಂಕ್ ಖಾತೆ ಸರಿಯಾಗಿ ಇಲ್ಲದಿರುವುದಕ್ಕೆ ಪರಿಹಾರ ಜಮಾ ಆಗಿರುವುದಿಲ್ಲ ಎಂದು ಹೇಳುತ್ತಾರೆ. ಆದರೆ, ಈ ಬಗ್ಗೆ ಶುಕ್ರವಾರದೊಳಗೆ ಸರಿಯಾಗಿ ರೈತರಿಗೆ ಬರ ಪರಿಹಾರ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.

ಪರಿಹಾರಕ್ಕೆ ತತ್ರಾಂಶದಲ್ಲಿ ನೋಡಿದರೇ 1-9 ಹಂತಗಳನ್ನು ಮಾಡಿದ್ದು, ಇದರಲ್ಲಿ ಕೂಡಾ ಪರಿಹಾರದ ಮಾಹಿತಿ ಸರಿಯಾಗಿಲ್ಲ. ನಿರ್ಲಕ್ಷ್ಯ ಮಾಡಿದ ಅಧಿಕಾರಿಗಳ ಸ್ವಂತ ಹಣದಿಂದ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಬರಪರಿಹಾರದ ಹಣ ಬ್ಯಾಂಕ್‌ಗಳಲ್ಲಿ ರೈತರ ಸಾಲಕ್ಕೆ ಜಮಾ ಮಾಡಿಕೊಳ್ಳುತ್ತಿದ್ದು, ಬ್ಯಾಂಕ್‌ ಅಧಿಕಾರಿಗಳು ಇದನ್ನು ನಿಲ್ಲಿಸಬೇಕು. ಭೀಕರ ಬರದ ಹಿನ್ನೆಲೆಯಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ. ಬರ ಪರಿಹಾರದ ಹಣವನ್ನು ಸಾಲಕ್ಕೆ ಜಮಾ ಮಾಡಿಕೊಳ್ಳದಂತೆ ಬ್ಯಾಂಕ್‌ ಅಧಿಕಾರಿಗಳಿಗೆ ಸರ್ಕಾರ ಸೂಚಿಸಬೇಕು ಎಂದು ಒತ್ತಾಯಿಸಿದರು.

ಭೂಮಿ ತತ್ರಾಂಶದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಕೆಲವಡೆ ಒಟ್ಟುಗೂಡಿಸುವ ಕಾರ್ಯ ಮಾಡಿದ್ದು, ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ತಪ್ಪು ಮಾಡಿರುವ ಅಧಿಕಾರಿಗಳೇ ಸರಿ ಪಡಿಸಿಕೊಳ್ಳಬೇಕು. ರೈತರು ಸರಿ ಮಾಡಬೇಕಾದರೇ ಸಾವಿರಾರು ರುಪಾಯಿ ಖರ್ಚಾಗುವುದಲ್ಲದೇ 3-4 ತಿಂಗಳು ಸಮಯ ಹಿಡಿಯುತ್ತಿದೆ. ಅದಕ್ಕಾಗಿ ತಪ್ಪು ಮಾಡಿರುವ ಅಧಿಕಾರಿಗಳು ಸರಿಪಡಿಸಬೇಕು ಎಂದು ಆಗ್ರಹಿಸಿದರು. ಗೋಷ್ಠಿಯಲ್ಲಿ ರಾಮಪ್ಪ ತಳವಾರ, ಹನಮಂತ ಪಾಟೀಲ ಇದ್ದರು.

Share this article