ಉಪ ಮುಖ್ಯಮಂತ್ರಿಗಳು ಹೀಗೆ ಬಂದರೂ, ಹಾಗೆ ಹೋದರು

KannadaprabhaNewsNetwork |  
Published : Aug 12, 2026, 01:45 AM IST
11 ಟಿವಿಕೆ 1 –ತುರುವೇಕೆರೆ ತಾಲೂಕು ಮಾಯಸಂದ್ರಕ್ಕೆ ಬರ ಅಧ್ಯಯನ ಪ್ರವಾಸ ಮಾಡಲು ಆಗಮಿಸಿದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ರವರನ್ನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎನ್. ಆರ್.ಜಯರಾಮ್ ಸೇರಿದಂತೆ ಹಲವರು ಸ್ವಾಗತಿಸಿದರು. | Kannada Prabha

ಸಾರಾಂಶ

ಉಪ ಮುಖ್ಯಮಂತ್ರಿಗಳು 11.30 ಕ್ಕೆ ಬರುವರೆಂದು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮತ್ತು ರೈತ ಮುಖಂಡರು ಜಮಾಯಿಸಿದ್ದರು. ಉಪ ಮುಖ್ಯಮಂತ್ರಿಗಳು ಕುಣಿಗಲ್ ನಲ್ಲಿ ಬ್ಯುಸಿಯಾಗಿದ್ದರಿಂದ 2.30 ಕ್ಕೆ ಇಲ್ಲಿಗೆ ಆಗಮಿಸಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಜಿಲ್ಲೆಯಾದ್ಯಂತ ಬರ ಆವರಿಸಿದೆ. ಈ ಸಂಬಂಧಪಟ್ಟಂತೆ ಸರ್ಕಾರಕ್ಕೆ ಬರಗಾಲದ ತೀವ್ರತೆಯ ಕುರಿತು ಮಾಹಿತಿ ನೀಡುವ ಸಲುವಾಗಿ ಉಪ ಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ್ ತಾಲೂಕಿನಲ್ಲಿ ಬರ ಅಧ್ಯಯನ ಮಾಡುವ ಸಲುವಾಗಿ ಕಾರ್ಯಕ್ರಮ ಹಾಕಿಕೊಂಡಿದ್ದರು. ಮಂಗಳವಾರ ಮಧ್ಯಾಹ್ನ 11.30 ಕ್ಕೆ ತಾಲೂಕಿನ ನೇರಳಕಟ್ಟೆ ಗ್ರಾಮದಲ್ಲಿ ಬರ ಅಧ್ಯಯನಕ್ಕೆ ಬರುವರೆಂದು ಮೊದಲೇ ಸೂಚಿಸಲಾಗಿತ್ತು. ಆದರೆ ನಿನ್ನೆ ರಾತ್ರಿ ಕೊನೇ ಗಳಿಗೆಯಲ್ಲಿ ಮಾಯಸಂದ್ರದ ಗದ್ದೆ ಬಯಲಿನಲ್ಲಿ ಬರ ಅಧ್ಯಯನ ಮಾಡುವರೆಂದು ತಿಳಿಸಲಾಯಿತು.

ಉಪ ಮುಖ್ಯಮಂತ್ರಿಗಳು 11.30 ಕ್ಕೆ ಬರುವರೆಂದು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮತ್ತು ರೈತ ಮುಖಂಡರು ಜಮಾಯಿಸಿದ್ದರು. ಉಪ ಮುಖ್ಯಮಂತ್ರಿಗಳು ಕುಣಿಗಲ್ ನಲ್ಲಿ ಬ್ಯುಸಿಯಾಗಿದ್ದರಿಂದ 2.30 ಕ್ಕೆ ಇಲ್ಲಿಗೆ ಆಗಮಿಸಿದರು. ಉಪ ಮುಖ್ಯಮಂತ್ರಿಗಳ ಆಗಮನವನ್ನು ಕಾಯುತ್ತಿದ್ದ ಜನರು ದಿಢೀರನೆ ಅವರನ್ನು ಮುತ್ತಿದರು. ಕಾರಿನಿಂದ ಇಳಿಯುತ್ತಿದ್ದಂತೆ ಮೊದಲೇ ಸಿದ್ದಪಡಿಸಿದ್ದ ಬೀಜ ವಿತರಣೆ ಕಾರ್ಯದತ್ತ ಕರೆದುಕೊಂಡು ಬಂದರು. ಉಪ ಮುಖ್ಯಮಂತ್ರಿಗಳ ಬಂದರೆ ಭೂಮಿಯಲ್ಲಿ ಬಿತ್ತಿದ್ದ ಬೀಜ ಬರಲೋ ಬೇಡವೋ ಎಂಬ ಸ್ಥಿತಿಯಲ್ಲಿದ್ದ ಜಾಗಕ್ಕೆ ಕರೆದುಕೊಂಡು ಹೋಗಬೇಕೆನ್ನುವುದು ಅಧಿಕಾರಿಗಳ ಉದ್ದೇಶವಾಗಿತ್ತು. ಆದರೆ ಜನರು ಉಪ ಮುಖ್ಯಮಂತ್ರಿಗಳಿಗೆ ಅತ್ತ ಸುಳಿಯಲೂ ಅವಕಾಶ ನೀಡಿಲಿಲ್ಲ. ಅವರು ಬಂದಿದ್ದೇ ಮೂರು ಗಂಟೆ ತಡವಾಗಿ. ಊಟವನ್ನೂ ಸಹ ಮಾಡಿರಲಿಲ್ಲವಂತೆ. ಹಾಗಾಗಿ ಡಾ.ಜಿ.ಪರಮೇಶ್ವರ್ ರವರೂ ಸಹ ಜಮೀನಿನತ್ತ ತೆರಳಲು ಮನಸ್ಸು ಮಾಡದೇ ಕಾರಿನತ್ತ ತೆರಳಿದರು. ಇದರಿಂದಾಗಿ ನೈಜ ಸಮಸ್ಯೆ ಅರಿಯಲು ಅವಕಾಶ ನೀಡದ ಅಲ್ಲಿದ್ದ ಕೆಲವರ ಬಗ್ಗೆ ರೈತರು ಆಕ್ರೋಶ ವ್ಯಕ್ತಪಡಿಸಿದರು. ಅಷ್ಟರೊಳಗೆ ತಾಲೂಕಿನ ಕೃಷಿ ಇಲಾಖಾ ಸಹಾಯಕ ನಿರ್ದೇಶಕಿ ಪೂಜಾ ತಾಲೂಕಿನಲ್ಲಿ ಒಟ್ಟು 23760 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಆಗಬೇಕಿತ್ತು. ಆಗಿಲ್ಲ. ಕಳೆದ ಏಳೆಂಟು ತಿಂಗಳಿನಿಂದ ಅಲ್ಪ ಸ್ವಲ್ಪ ಮಳೆಯಾಗುತ್ತಿರುವುದರಿಂದ ಸುಮಾರು 2892 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡಲಾಗಿದೆ. ಈಗ ಕೇವಲ ಶೇಕಡಾ 12 ರಷ್ಟುಮಾತ್ರ ಬಿತ್ತನೆ ಆಗಿದೆ. ಆದರೆ ಕಳೆದ ವರ್ಷದ ಹಿಂದೆ ಶೇಕಡಾ 104 ರಷ್ಟು ಬಿತ್ತನೆ ಕಾರ್ಯ ಆಗಿತ್ತು ಎಂದು ಮಾಹಿತಿ ನೀಡಿದರು.

ಶಾಸಕ ಎಂ.ಟಿ.ಕೃಷ್ಣಪ್ಪ 12 ಮಂದಿ ರೈತರಿಗೆ ಸಾಂಕೇತಿಕವಾಗಿ ವಿತರಣೆ ಮಾಡಿದ ಬಿತ್ತನೆ ರಾಗಿಯ ಹಣವನ್ನು ಕೃಷಿ ಸಹಾಯಕ ನಿರ್ದೇಶಕಿ ಪೂಜಾರಿಗೆ ನೀಡಿ ಎಲ್ಲಾ 12 ಮಂದಿ ರೈತರಿಗೆ ಉಚಿತವಾಗಿ ಬಿತ್ತನೆ ರಾಗಿ ಚೀಲವನ್ನು ಪರಮೇಶ್ವರ್ ರವರಿಂದ ವಿತರಿಸಿದರು. ಉಪ ಮುಖ್ಯಮಂತ್ರಿಗಳ ಬರ ಅಧ್ಯಯನ ಕೇವಲ 10 ರಿಂದ 15 ನಿಮಿಷದೊಳಗೆ ಮುಗಿದೇ ಹೋಯಿತು. ಸಮಸ್ಯೆ ಹೇಳಲು ಬೆಳಿಗ್ಗೆಯಿಂದ ಕಾಯುತ್ತಿದ್ದ ಜನರಿಗೆ ನಿರಾಶೆಯಾಗಿ ಅವರು ಪರಮೇಶ್ವರ್ ಬಂದರೂ ಹೋದರು ಅಷ್ಟೇ ಎಂದು ಮಾತನಾಡಿಕೊಂಡು ಮನೆಯತ್ತ ಹೆಜ್ಜೆಹಾಕಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನನ್ನನ್ನು ಮುಗಿಸಲು ಕಿಮ್ಮನೆ ಸುಪಾರಿ ನೀಡಲೂ ಸಿದ್ಧ: ಶಾಸಕ ಆರಗ ಜ್ಞಾನೇಂದ್ರ ಆರೋಪ
ರಾಜ್ಯ ಸರ್ಕಾರದ ಆಡಳಿತ ವೈಪಲ್ಯ ಖಂಡಿಸಿ ಬಿಜೆಪಿ ಪ್ರತಿಭಟನೆ