ಕನ್ನಡಪ್ರಭ ವಾರ್ತೆ ಶಹಾಪುರ
ರಸ್ತೆ ನಿರ್ಮಾಣ ವಿಚಾರವಾಗಿ ವಿವಾದಕ್ಕೆ ಕಾರಣವಾಗಿದ್ದ ತಾಲೂಕಿನ ವಿಭೂತಿಹಳ್ಳಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಹರ್ಷಲ್ ಬೋಯರ್, ಜಿಲ್ಲಾ ಪಂಚಾಯ್ತಿ ಸಿಇಓ ಲವೀಶ ಒರಡಿಯಾ ಹಾಗೂ ಎಸ್ಪಿ ಪೃಥ್ವಿಕ್ ಶಂಕರ್ ಭೇಟಿ ನೀಡಿ, ಶಾಂತಿ- ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸುವಿಕೆಗೆ ಗ್ರಾಮಸ್ಥರಲ್ಲಿ ಮನವಿ ಮಾಡಿದರು.ವಿಭೂತಿಹಳ್ಳಿ ಗ್ರಾಮಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಹರ್ಷಲ್ ಬೋಯರ್, ಪ್ರೀತಿ, ವಿಶ್ವಾಸ ಹಾಗೂ ಶಾಂತತೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳಲು ಸಾಧ್ಯವಿದೆ. ಎಲ್ಲರೂ ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಮನವಿ ಮಾಡಿದರು.
ದಲಿತರ ಬಡಾವಣೆಗೆ ಹೊಸ ರಸ್ತೆ ನಿರ್ಮಾಣದ ಸ್ಥಳವನ್ನು ಹಿರಿಯ ಅಧಿಕಾರಿಗಳ ತಂಡವು ಭೇಟಿ ನೀಡಿ ಪರಿಶೀಲನೆ ನಡೆಸಿತು. ರಸ್ತೆ ನಿರ್ಮಾಣವು ದಲಿತ-ಕುರುಬ ಸಮುದಾಯದ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಗ್ರಾಮದಲ್ಲಿ 30 ದಲಿತರ ಮನೆಗಳಿವೆ. ಗ್ರಾಮದ ಕುರುಬ ಸಮುದಾಯದ ಮಹಿಳೆಯರು ರಸ್ತೆ ನಿರ್ಮಾಣದ ಜಾಗೆಯಲ್ಲಿ ಬಹಿರ್ದೆಸೆಗೆ ಬರುತ್ತಾರೆ. ಇದರಿಂದ ಕಲುಷಿತ ವಾತಾವರಣ ಉಂಟಾಗುತ್ತಿದೆ. ರಸ್ತೆ ನಿರ್ಮಾಣ ಮಾಡಿ ಪುಣ್ಯ ಕಟ್ಟಿಕೊಳ್ಳಿ ಎಂದು ಜಿಲ್ಲಾಧಿಕಾರಿಯೆದುರು ಅಲ್ಲಿನ ನಿವಾಸಿಗರು ಕೋರಿದರು.ಡಿವೈಎಸ್ಪಿ ಜಾವೇದ್ ಇನಾಂದಾರ, ಸಿಡಿಪಿಓ ಮಲ್ಲಣ್ಣ ದೇಸಾಯಿ, ಇನ್ಸ್ಪೆಕ್ಟರ್ ಎಸ್. ಎಂ. ಪಾಟೀಲ, ತಹಸೀಲ್ದಾರ್ ಉಮಾಕಾಂತ ಹಳ್ಳೆ ಮುಂತಾದವರು ಉಪಸ್ಥಿತರಿದ್ದರು.
ಈ ಮಧ್ಯೆ, ದಲಿತರ ಮೇಲೆ ದೌರ್ಜನ್ಯ ಕಾಯ್ದೆಯಡಿ ತಮ್ಮಗಳ ವಿರುದ್ಧ ದೂರು ದಾಖಲಾಗಿದೆ ಎಂದು ಆಕ್ರೋಶಗೊಂಡ ಗ್ರಾಮದ ಕುರುಬ ಸಮುದಾಯದ ಮುಖಂಡರು, ಮಹಿಳೆಯರು, ರಸ್ತೆ ನೆಪದಲ್ಲಿ ದಲಿತರು ನಮಗೂ ತೊಂದರೆ ನೀಡಿದ್ದಾರೆ. ಈ ಬಗ್ಗೆ ದೂರು ದಾಖಲಿಸುವಂತೆ ಪಟ್ಟು ಹಿಡಿದು, ಧರಣಿ ನಡೆಸುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದು ಎಸ್ಪಿ ಪೃಥ್ವಿಕ್ ಶಂಕರ್ ತಿಳಿಸಿದ್ದಾರೆ.