ಬಸ್‌ ನಿಲ್ದಾಣದ ಅವ್ಯವಸ್ಥೆ ಕಂಡು ಉಪಲೋಕಾಯುಕ್ತ ನ್ಯಾ. ಬಿ. ವೀರಪ್ಪ ಗರಂ

KannadaprabhaNewsNetwork | Published : Mar 14, 2025 12:35 AM

ಸಾರಾಂಶ

ನಗರದ ಬಸ್ ನಿಲ್ದಾಣಕ್ಕೆ ಉಪಲೋಕಾಯುಕ್ತ ನ್ಯಾ. ಬಿ. ವೀರಪ್ಪ ಗುರುವಾರ ಬೆಳಗ್ಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಿಲ್ದಾಣದಲ್ಲಿ ಅವ್ಯವಸ್ಥೆ ಕಂಡು ವಿಭಾಗೀಯ ನಿಯಂತ್ರಣಾಧಿಕಾರಿ ತಿಮ್ಮಾರೆಡ್ಡಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಸಾರ್ವಜನಿಕ ಅರ್ಜಿಗಳ ವಿಚಾರಣೆ, ಪ್ರಕರಣಗಳ ಇತ್ಯರ್ಥ

ಕನ್ನಡಪ್ರಭ ವಾರ್ತೆ ಹೊಸಪೇಟೆ

ನಗರದ ಬಸ್ ನಿಲ್ದಾಣಕ್ಕೆ ಉಪಲೋಕಾಯುಕ್ತ ನ್ಯಾ. ಬಿ. ವೀರಪ್ಪ ಗುರುವಾರ ಬೆಳಗ್ಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಿಲ್ದಾಣದಲ್ಲಿ ಅವ್ಯವಸ್ಥೆ ಕಂಡು ವಿಭಾಗೀಯ ನಿಯಂತ್ರಣಾಧಿಕಾರಿ ತಿಮ್ಮಾರೆಡ್ಡಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಬಸ್ ನಿಲ್ದಾಣದಲ್ಲಿನ ಗೂಡಂಗಡಿಗಳು, ಕ್ಯಾಂಟೀನ್‌ ಸೇರಿದಂತೆ ವಿವಿಧೆಡೆ ಪರಿಶೀಲನೆ ನಡೆಸಿದರು. ಅಂಗಡಿಗಳಲ್ಲಿ ಅವಧಿಗೆ ಮೀರಿದ ನೀರಿನ ಬಾಟಲಿ, ತಿನಿಸುಗಳ ಪ್ಯಾಕೆಟ್‌ಗಳನ್ನು ಮಾರಾಟ ಮಾಡುತ್ತಿರುವುದನ್ನು ಕಂಡು ಗರಂ ಆದ ಅವರು, ಬಸ್‌ ನಿಲ್ದಾಣದಲ್ಲಿ ಏನು ಪರಿಶೀಲನೆ ಮಾಡುತ್ತೀರಾ? ಬಸ್ ನಿಲ್ದಾಣದಲ್ಲಿ ಎಲ್ಲವೂ ಪರಿಶೀಲನೆ ಮಾಡೋಲ್ವಾ? ಎಂದು ಡಿಪೋ ಮ್ಯಾನೇಜರ್ ಮತ್ತು ನಗರಸಭೆ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡರು. ನೀವು ಹೊಟ್ಟೆಪಾಡಿಗೆ ತಿಂಡಿ-ತಿನಿಸುಗಳನ್ನು ಮಾರಾಟ ಮಾಡ್ತಿದ್ದೀರಿ, ಆದರೆ, ಜನರಿಗೆ ಅವಧಿಗೆ ಮೀರಿದ ತಿಂಡಿ, ತಿನಿಸು, ನೀರು ಕೊಡಬೇಡಿ ಎಂದು ಅಂಗಡಿಯವರಿಗೆ ತಾಕೀತು ಮಾಡಿದರು.

ಬಸ್ ನಿಲ್ದಾಣದ ಶೌಚಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಯಾವಾಗ ಸ್ವಚ್ಛತೆ ಮಾಡ್ತೀರಿ? ಬಸ್ ನಿಲ್ದಾಣದ ಹೊರಗಡೆ ಎಲ್ಲ ಗಲೀಜು ಮಾಡ್ತಾರೆ, ಇವೆಲ್ಲಾ ಹೇಳೋಕಾಗೋಲ್ವಾ? ಸ್ವಚ್ಛತಾ ಕಾರ್ಯ ಸರಿಯಾಗಿ ಮಾಡೋಕಾಗೋಲ್ವಾ? ಎಂದು ಗದರಿದರು.

ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ, ಜಿಪಂ ಸಿಇಒ ಅಕ್ರಂ ಷಾ, ಎಸ್ಪಿ ಬಿ.ಎಲ್‌. ಶ್ರೀಹರಿಬಾಬು, ಎಎಸ್ಪಿ ಸಲೀಂ ಪಾಷಾ, ಡಿವೈಎಸ್ಪಿ ಡಾ. ಮಂಜುನಾಥ ತಳವಾರ ಮತ್ತಿತರರಿದ್ದರು. ಬಳಿಕ ಬಸವಣ್ಣ ಕಾಲುವೆಗೆ ಭೇಟಿ ನೀಡಿ, ಚರಂಡಿ ನೀರು ಕಾಲುವೆಗೆ ಬಿಡುತ್ತಿರುವುದನ್ನು ಕಂಡು ನೀರಾವರಿ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ವಿಚಾರಣೆ:

ವಿಜಯನಗರ ಜಿಲ್ಲೆಯ ಹರಪನಹಳ್ಳಿ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹೊಸಪೇಟೆ, ಹೂವಿನಹಡಗಲಿ ಮತ್ತು ಕೊಟ್ಟೂರು ತಾಲೂಕುಗಳ ಹಳ್ಳಿ, ಪಟ್ಟಣ, ನಗರ ಪ್ರದೇಶದ ಜನರು ಸರ್ಕಾರಿ ಕಚೇರಿಗಳಲ್ಲಿ ಕೆಲಸ ಕಾರ್ಯಗಳು ವಿಳಂಬವಾಗಿ ನಡೆಯುತ್ತಿರುವುದರ ಬಗ್ಗೆ ದೂರು ನೀಡಿರುವುದನ್ನು ಉಪ ಲೋಕಾಯುಕ್ತ ನ್ಯಾ. ಬಿ. ವೀರಪ್ಪ ಅವರು ವಿಚಾರಣೆ ನಡೆಸಿ, ಹಲವು ಪ್ರಕರಣಗಳಲ್ಲಿ ತಿಂಗಳಲ್ಲಿ ಇತ್ಯರ್ಥಪಡಿಸಿ ಜನರಿಗೆ ಸೇವೆ ಒದಗಿಸಬೇಕು ಎಂದು ತಾಕೀತು ಮಾಡಿದರು.

ಹಡಗಲಿ ಪುರಸಭೆ ಅಧಿಕಾರಿಗೆ ಶಹಬ್ಬಾಸ್‌:

ಹೂವಿನಹಡಗಲಿ ಪುರಸಭೆ ಮುಖ್ಯಾಧಿಕಾರಿ ಇಮಾಮ್‌ ಸಾಹೇಬ್‌ ಅವರಿಗೆ ವ್ಯಕ್ತಿಯೊಬ್ಬರು ನೀಡಿದ ಇ-ಸ್ವತ್ತು ಅರ್ಜಿಯನ್ನು ತ್ವರಿತವಾಗಿ ಪೂರೈಸಲು ಲೋಕಾಯುಕ್ತ ನ್ಯಾ. ಬಿ. ವೀರಪ್ಪ ಅವರು ವಿಚಾರಣೆ ವೇಳೆ ಸೂಚಿಸಿದ್ದರು. ಅವರು ಇ-ಸ್ವತ್ತು ಅರ್ಜಿ ವಿಲೇ ಮಾಡಿ ಮಧ್ಯಾಹ್ನ ಭೋಜನದ ಬಳಿಕ ಉಪಲೋಕಾಯುಕ್ತರಿಗೆ ನೀಡಿದರು. ಈ ವೇಳೆ ಈ ತರಹ ಕೆಲಸ ಮಾಡುವ ಸರ್ಕಾರಿ ಅಧಿಕಾರಿಗಳು ನಮಗೇ ಬೇಕು ಎಂದು ಉಪ ಲೋಕಾಯುಕ್ತರು ಶಹಬ್ಬಾಸ್‌ಗಿರಿ ನೀಡಿದರು.

ಕೂಡ್ಲಿಗಿ ತಹಸೀಲ್ದಾರ್‌ ನೇತ್ರಾವತಿ ಹಾಗೂ ಉಪ ನೋಂದಣಾಧಿಕಾರಿ ಸಯ್ಯದ್ ಖಾದರ್ ಅವರಿಗೆ ಮ್ಯುಟೇಶನ್‌ ಕುರಿತು ಬಂದ ದೂರಿನ ಬಗ್ಗೆ ಉಪ ಲೋಕಾಯುಕ್ತರು ಮಾಹಿತಿ ಕೇಳಿದರು. ಈ ಸಮಸ್ಯೆ ಬಗೆಹರಿಸಲಾಗಿದೆ ಎಂದು ನೇತ್ರಾವತಿ ದಾಖಲಾತಿಯನ್ನು ಉಪಲೋಕಾಯುಕ್ತರ ಗಮನಕ್ಕೆ ತಂದರು.

ಕಮಲಾಪುರ ಪಿಎಸ್‌ಐ ಸಂತೋಷ್‌, ದೂರುದಾರ ಒಬ್ಬರಿಗೆ ಠಾಣೆಯಲ್ಲಿ ಗದರಿಸಿದ್ದಾರೆ ಎಂಬ ದೂರು ನೀಡಲಾಗಿತ್ತು. ಪಿಎಸ್‌ಐ ಕರೆಸಿದ ಉಪಲೋಕಾಯುಕ್ತ ನ್ಯಾ. ವೀರಪ್ಪ ಅವರು, ನಾನೇ ತೀರ್ಪು ನೀಡಿರುವ ಮಾರಪ್ಪ ಪ್ರಕರಣ ತಿಳಿದಿದೆಯೇ? ದೂರುದಾರರಿಗೆ, ಸಾರ್ವಜನಿಕರಿಗೆ ಗದರುವಂತಿಲ್ಲ. ಕೋರ್ಟ್‌ಗೆ ವಿಚಾರಣೆಗೆ ತನ್ನಿ, ಪೊಲೀಸರು ಸಾರ್ವಜನಿಕರ ಜತೆಗೆ ಸಭ್ಯವಾಗಿ ನಡೆದುಕೊಳ್ಳಬೇಕು. ಇನ್ನೂ ಜನರು ಕೂಡ ಸುಖಾಸುಮ್ಮನೆ ದೂರು ಕೊಡಬಾರದು ಎಂದೂ ಪ್ರಕರಣ ಇತ್ಯರ್ಥಪಡಿಸಿದರು.ಉಪ ಲೋಕಾಯುಕ್ತರಿಂದ 183 ಅಹವಾಲು ಸ್ವೀಕಾರ:

ಹೊಸಪೇಟೆ ನಗರದ ಸಹಕಾರಿ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಉಪಲೋಕಾಯುಕ್ತರ ಭೇಟಿಯ ಮೊದಲನೇ ದಿನದಂದು ನಡೆದ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಒಟ್ಟು 183 ಅಹವಾಲುಗಳನ್ನು ಸ್ವೀಕೃತವಾಗಿವೆ ಎಂದು ಉಪ ಲೋಕಾಯುಕ್ತ ಬಿ.ವೀರಪ್ಪ ತಿಳಿಸಿದರು.ಕಾರ್ಯಕ್ರಮದ ನಂತರ ಮಾತನಾಡಿ, ಸಾರ್ವಜನಿಕರಿಂದ ಅತಿ ಹೆಚ್ಚು ಅರ್ಜಿಗಳು ಜಿಪಂಗೆ - 60 ಅರ್ಜಿಗಳು ಸ್ವೀಕೃತವಾದರೇ, ಕಂದಾಯ ಇಲಾಖೆ 40, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸಂಬಂಧಿಸಿದಂತೆ 41, ಜೆಸ್ಕಾಂ ಇಲಾಖೆ 6, ಗ್ರಾಮೀಣ ಕುಡಿಯುವ ನೀರು ಸರಬರಾಜು 5, ಆರೋಗ್ಯ ಇಲಾಖೆ 3, ಕೆಎಸ್ ಆರ್ ಟಿಸಿ 2, ಕಾರ್ಮಿಕ ಇಲಾಖೆ 3, ಪೊಲೀಸ್ ಇಲಾಖೆ 3, ಶಿಕ್ಷಣ ಇಲಾಖೆ 4, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 2, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 2, ಸರ್ವೇ ಇಲಾಖೆ 2 ಸೇರಿದಂತೆ ಪಿಡಬ್ಲೂಡಿ,ಆರ್ ಟಿಒ, ವಾಣಿಜ್ಯ ತೆರಿಗೆ ಇಲಾಖೆ, ಮೊರಾರ್ಜಿ ದೇಸಾಯಿ ಶಾಲೆ, ಹೌಸಿಂಗ್ ಬೋರ್ಡ್, ನಗರ ಒಳಚರಂಡಿ, ಅಬಕಾರಿ ಇಲಾಖೆಗಳಿಗೆ ತಲಾ 1 ಅರ್ಜಿಗಳು ಸ್ವೀಕೃತಗೊಂಡಿವೆ. ಉಪಲೋಕಾಯುಕ್ತರ ಪರಿಶೀಲನೆ ಬಳಿಕ ಸ್ಥಳದಲ್ಲಿಯೇ 10 ಪ್ರಕರಣ ಇತ್ಯರ್ಥಗೊಂಡಿವೆ. ಒಂದು ತಿಂಗಳೊಳಗೆ ಸುಮಾರು 40 ಪ್ರಕರಣ ಇತ್ಯರ್ಥಗೊಳಿಸಲು ಅಧಿಕಾರಿಗಳು ಭರವಸೆ ನೀಡಿದ್ದಾರೆ. ನಿಗದಿತ ವೇಳೆಗೆ ಅಹವಾಲುಗಳಿಗೆ ಪರಿಹಾರ ಕಲ್ಪಿಸುವ ವಿಶ್ವಾಸವನ್ನು ಅಧಿಕಾರಿಗಳ ಮೇಲೆ ಇಟ್ಟಿದ್ದೇನೆ ಎಂದರು.

Share this article