ತಪ್ಪು ಮಾಹಿತಿ ನೀಡಿದ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ತರಾಟೆ

KannadaprabhaNewsNetwork |  
Published : Sep 28, 2024, 01:25 AM IST
16 | Kannada Prabha

ಸಾರಾಂಶ

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ರೇಷ್ಮೆಯನ್ನು ಹೆಚ್ಚಾಗಿ ಬೆಳೆಯುತ್ತಿದ್ದರು. ಈಗ ನಮ್ಮ ಸಿದ್ದರಾಮನಹುಂಡಿಯಲ್ಲಿ ಯಾರೂ ರೇಷ್ಮೆ ಬೆಳೆಯುತ್ತಿಲ್ಲ?

ಕನ್ನಡಪ್ರಭ ವಾರ್ತೆ ಮೈಸೂರು

ಸಭೆಗೆ ತಪ್ಪು ಮಾಹಿತಿ ನೀಡಿದ ಅಧಿಕಾರಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು.

ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಂಜುನಾಥ ಅಂಗಡಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಸಭೆಗೆ ಬರುವಾಗ ಸರಿಯಾದ ಸಿದ್ಧತೆ ಮಾಡಿಕೊಂಡಿಲ್ಲ. ಸಭೆಗೆ ಈ ರೀತಿ ತಪ್ಪು ಮಾಹಿತಿ ನೀಡಿದರೆ ಹೇಗೆ? ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಿಧಾನ ಪರಿಷತ್‌ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಪ್ರಶ್ನಿಸಿದರು.

ರೇಷ್ಮೆಗೆ ಸಿಬ್ಬಂದಿ ಕೊರತೆ

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ರೇಷ್ಮೆಯನ್ನು ಹೆಚ್ಚಾಗಿ ಬೆಳೆಯುತ್ತಿದ್ದರು. ಈಗ ನಮ್ಮ ಸಿದ್ದರಾಮನಹುಂಡಿಯಲ್ಲಿ ಯಾರೂ ರೇಷ್ಮೆ ಬೆಳೆಯುತ್ತಿಲ್ಲ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಈ ಬಗ್ಗೆ ಉತ್ತರಿಸಿದ ಅಧಿಕಾರಿಗಳು, ಸಿದ್ದರಾಮನಹುಂಡಿಯಲ್ಲಿ ಇಬ್ಬರು ಮಾತ್ರ ರೇಷ್ಮೆ ಬೆಳೆಯುತ್ತಿದ್ದಾರೆ. ರೇಷ್ಮೆ ಬೆಳೆ ಪ್ರದೇಶ ವಿಸ್ತರಿಸಲು ಏನು ಕ್ರಮ ಕೈಗೊಂಡಿದ್ದೀರಿ ಎಂಬ ಮುಖ್ಯಮಂತ್ರಿ ಪ್ರಶ್ನೆಗೆ, ಲಭ್ಯವಿರುವ ಸಿಬ್ಬಂದಿಯಲ್ಲೇ 10 ಹಳ್ಳಿ ಆಯ್ಕೆ ಮಾಡಿಕೊಂಡು ವಿಸ್ತರಣೆಗೆ ಕೆಲಸ ಮಾಡುತ್ತಿದ್ದೇವೆ. ನಾವೇ ಗೂಡನ್ನು ನಿರ್ಮಿಸಿ ಕೊಟ್ಟು, ಪ್ರೋತ್ಸಾಹ ನೀಡುತ್ತಿದ್ದೇವೆ ಎಂದು ವಿವರಿಸಿದರು.

ಮಧ್ಯಪ್ರವೇಶಿಸಿದ ಪಶುಸಂಗೋಪನಾ ಹಾಗೂ ರೇಷ್ಮೆ ಸಚಿವ ಕೆ.ವೆಂಕಟೇಶ್, ಸಿಬ್ಬಂದಿ ಕೊರತೆ ಇದೆ ಎಂದರು.

ಆ ಮಾತನ್ನು ಒಪ್ಪದ ಸಿಎಂ, ರೇಷ್ಮೆ ಕೃಷಿ ಕಡಿಮೆಯಾಗಲು ಇದೊಂದೇ ಕಾರಣ ಅಲ್ಲ. ಬೇರೆ ಬೇರೆ ಕಾರಣಗಳಿವೆ. ಅಧಿಕಾರಿಗಳು ಅವನ್ನೆಲ್ಲಾ ಗುರುತಿಸಿ ಪರಿಹಾರ ರೂಪಿಸಬೇಕು ಎಂದು ಅವರು ಸೂಚಿಸಿದರು.

ಸಂಸತ್ತಿನಲ್ಲಿ ನಡೆದಿದ್ದ ಚರ್ಚೆಯೊಂದನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ, ಹಳ್ಳಿ ಜನರು ಉತ್ಪಾದಿಸುವ ಹಾಲು ಪಟ್ಟಣಗಳಿಗೆ ಬರುತ್ತಿದೆ. ಪಟ್ಟಣದಲ್ಲಿ ತಯಾರಾಗುವ ಮದ್ಯ ಹಳ್ಳಿಗಳಿಗೆ ಬಂದಿದೆ ಎಂದರು.

ಹಸು ಸಾಕಣೆದಾರರು ಮೊದಲು ಹಾಲನ್ನು ತಾವು ಕುಡಿದು, ಮಕ್ಕಳಿಗೂ ಕೊಟ್ಟು ಹೆಚ್ಚುವರಿಯಾದುದನ್ನು ಮಾತ್ರವೇ ಮಾರಬೇಕು. ಆಗ ಅವರಿಗೂ ಆರೋಗ್ಯಕರ ಹಾಲು ಸಿಗುತ್ತದೆ. ಅಧಿಕಾರಿಗಳು ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಅವರು ಸೂಚಿಸಿದರು.

ಹಾಲು ಒಕ್ಕೂಟಗಳಲ್ಲಿನ ಅನಗತ್ಯ ಹೆಚ್ಚುವರಿ ಸಿಬ್ಬಂದಿಯನ್ನು ತೆಗೆದು ಹಾಕಬೇಕು. ಹಾಲು ಮತ್ತು ಉಪ ಉತ್ಪನ್ನಗಳ ಮಾರುಕಟ್ಟೆಯನ್ನು ಹೆಚ್ಚೆಚ್ಚು ವಿಸ್ತರಿಸಲು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಪ್ರೊಟೀನ್‌ ಪೌಡರ್‌ ಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಇದರ ಉತ್ಪಾದನೆ ಮತ್ತು ಮಾರಾಟದ ಕಡೆಗೆ ಗಮನ ಕೊಡಿ ಎಂದು ವಿಧಾನ ಪರಿಷತ್‌ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಸಲಹೆ ನೀಡಿದರು. ಕುರಿ ಮತ್ತು ಕೋಳಿ ಸಾಕಣೆಗೆ ಸಹಾಯಧನ ಸೌಲಭ್ಯ ಹೆಚ್ಚೆಚ್ಚು ಮಂದಿಗೆ ವಿಸ್ತರಿಸಬೇಕು ಎಂದು ಅವರು ಸೂಚಿಸಿದರು.

ಮುಂಗಾರು, ಪೂರ್ವ ಮುಂಗಾರು ಕೃಷಿ ಚಟುವಟಿಕೆ ಪ್ರಮಾಣದ ಬಗ್ಗೆ ಮುಖ್ಯಮಂತ್ರಿಗಳು ಮಾಹಿತಿ ಕೇಳಿದರು. ಇದಕ್ಕೆ ಉತ್ತರಿಸಿದ ಜಂಟಿ ಕೃಷಿ ನಿರ್ದೇಶಕರು ತಾಲೂಕುವಾರು ಬಿತ್ತನೆ ಮಾಹಿತಿ ನೀಡಿ ವಾಡಿಕೆಗಿಂತ ಕೃಷಿ ಚಟುವಟಿಕೆ ಕಡಿಮೆ ಆಗಿಲ್ಲ ಎಂದರು.

ಬಳಿಕ ಮುಖ್ಯಮಂತ್ರಿಗಳು, ಜಿಲ್ಲೆಯಲ್ಲಿ ಕೃಷಿಗೆ ಯಾವುದಾದರೂ ರೋಗ ತಗುಲಿದೆಯೇ? ಔಷಧ, ಗೊಬ್ಬರ ರೆಡಿ ಇದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಸದ್ಯಕ್ಕೆ ಜಿಲ್ಲೆಯಲ್ಲಿ ಯಾವುದೇ ಕೃಷಿ ಬೆಳೆಗೆ ರೋಗ ತಗುಲಿಲ್ಲ. ಔಷಧ, ಗೊಬ್ಬರ ಅಗತ್ಯವಿದ್ದಷ್ಟು ಸಂಗ್ರಹ ಇದೆ ಎಂದರು.

ಮೂರು ತೊಂಬತ್ತು ಸಾವಿರ ಹೆಕ್ಟೇರ್ ನಲ್ಲಿ ಮೂರು ಲಕ್ಷ ಎಂಬತ್ತು ಸಾವಿರ ಹೆಕ್ಟೇರ್ ಬಿತ್ತನೆ ಆಗಿದೆ. ಬರುವ ದಿನಗಳಲ್ಲಿ ನಿರೀಕ್ಷಿತ ಮಳೆ ಆಗದಿದ್ದರೆ ರಾಗಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವ ಅಪಾಯ ಇದೆ. ಆದರೆ ಅದಕ್ಕೆ ಅವಕಾಶ ಇಲ್ಲದಂತೆ ಸಾಧ್ಯ ಇರುವ ಎಲ್ಲಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

ಭತ್ತ ಬೆಳೆಗೆ ಯಾವುದೇ ತೊಂದರೆ ಇಲ್ಲ. ಉತ್ತರ ಮಳೆ ಮುಗಿದಿದೆ. ಕೃತ್ತಿಕಾ ಮತ್ತು ರೋಹಿಣಿ ಮಳೆಯಿಂದ ಮೇ ತಿಂಗಳಲ್ಲಿ 255 ಹೆಕ್ಟೇರ್ ನಷ್ಟು ಬೆಳೆ ನಷ್ಟ ಆಗಿದೆ ಎಂದು ತಾಲೂಕಾವಾರು ಹಾನಿ ಕುರಿತು ಕೃಷಿ ಅಧಿಕಾರಿಗಳು ವಿವರಿಸಿದರು.

ತಂಬಾಕು ಸೇರಿ ಬೆಳೆ ನಷ್ಟಕ್ಕೆ ಪರಿಹಾರ ನೀಡಲಾಗಿದೆ ಎಂದರು. ಈ ವೇಳೆ ಮುಖ್ಯಮಂತ್ರಿಗಳು, ಮಳೆ ಹಾನಿಯಿಂದ ಆದ ಜೀವ ಹಾನಿ ಮತ್ತು ಮನೆ ಹಾನಿಗಳಿಗೆ ಪರಿಹಾರ ನೀಡಲಾಗಿದೆಯೇ ಎಂದು ಪ್ರಶ್ನಿಸಿದರು. ಉತ್ತರಿಸಿದ ಜಿಲ್ಲಾಧಿಕಾರಿ, ಒಂದು ಜೀವ ಹಾನಿ ಆಗಿತ್ತು. ಇದನ್ನೂ ಸೇರಿಸಿ ಹಾನಿ ಮನೆಗಳಿಗೆ ಪರಿಹಾರ ಸಂಪೂರ್ಣ ನೀಡಲಾಗಿದೆ ಎಂದರು.

ಕಳೆದ ವರ್ಷ ಎಷ್ಟು ಬೆಳೆ ಹಾನಿ ಆಗಿತ್ತು, ಎಷ್ಟು ಪರಿಹಾರ ನೀಡಿದ್ದೀರಿ ಎಂದು ಸಿಎಂ ಮರು ಪ್ರಶ್ನೆ ಹಾಕಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು 95,000 ಹೆಕ್ಟೇರ್ ಬೆಳೆ ಹಾನಿಗೆ 63 ಕೋಟಿ ರೂ. ಪರಿಹಾರ ನೀಡಿದ್ದೇವೆ ಎಂದು ಅವರು ಹೇಳಿದರು.

ಮಾಧ್ಯಮಗಳಲ್ಲಿ ವರದಿ ಆಗಿರುವ ರೈತರ ಸಾವು ಮತ್ತು ಬೆಳೆ ಹಾನಿ ವರದಿಗಳನು ನಿರ್ಲಕ್ಷಿಸಬೇಡಿ. ವರದಿಗಳ ಸತ್ಯಾಸತ್ಯತೆ ಪರಿಶೀಲಿಸಿ ಪರಿಹಾರ ಒದಗಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಸಾಲದಿಂದ 31 ರೈತರು ಆತ್ಮಹತ್ಯೆ ಆಗಿದೆ. ಸಮಿತಿ ಮುಂದೆ ಮಂಡಿಸಿದ ಪ್ರಕರಣ 29, ತಿರಸ್ಕೃತ 8, ಎಫ್ಎಸ್ಎಲ್ ಬಾಕಿ-2 ಉಳಿದ ಎಲ್ಲಕ್ಕೂ ಪರಿಹಾರ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ತಿರಸ್ಕೃತಗೊಂಡ ಪ್ರಕರಣಗಳ ಕುರಿತು ಸಿಎಂ ಹೆಚ್ಚಿನ ವಿವರಣೆ ಕೇಳಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು-ಕೆಲವರಿಗೆ ಜಮೀನು ಇರಲಿಲ್ಲ. ಒಬ್ಬರು ತಾಯಿ ಹೆಸರಲ್ಲಿ ಸಾಲ ಪಡೆದು ನಾಲ್ಕು ದಿನದಲ್ಲಿ ಪಿರಿಯಾಪಟ್ಟಣದಲ್ಲಿ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ ಸಾಲ ವಸೂಲಾತಿ ಬಗ್ಗೆ ಒತ್ತಡವೂ ಇರಲಿಲ್ಲ. ಹೀಗಾಗಿ ಈ ಪ್ರಕರಣವನ್ನು ತಿರಸ್ಕರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕರಣವನ್ನು ವಿವರಿಸಿದರು.

ಅಧಿಕಾರಿಯ ಡೈರಿ- ಫೋಟೋ ಕೇಳಿದ ಸಿಎಂ

ಕೃಷಿ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ರೈತರ ಜಮೀನುಗಳಲ್ಲಿ ಪರಿಶೀಲನೆ ನಡೆಸಬೇಕು. ರೈತರ ಸಭೆಗಳನ್ನು ನಡೆಸಬೇಕು. ಇದನ್ನೆಲ್ಲಾ ನೀವು ಮಾಡಿದ್ದೀರಾ ಎಂದು ಸಿಎಂ ಪ್ರಶ್ನಿಸಿದರು. ಈ ವೇಳೆ ಕೃಷಿ ಅಧಿಕಾರಿ ತಾವು ಗ್ರಾಮ ಭೇಟಿ ನೀಡಿದ್ದ ಡೈರಿಯನ್ನು ಸಿಎಂಗೆ ನೀಡಿದರು. ಸಿಎಂ ಡೈರಿ ಪರಿಶೀಲಿಸಿದರು. ಸಮಾಧಾನ ಆಗಲಿಲ್ಲ. ನೀವು ಭೇಟಿ ನೀಡಿದ ಫೋಟೋಗಳನ್ನು ತೋರಿಸಿ ಎಂದರು. ಅಧಿಕಾರಿಗಳು ತಾವು ಭೇಟಿ ನೀಡಿದ್ದ ಫೋಟೋಗಳನ್ನು ಪ್ರದರ್ಶಿಸಿದರು.

ಆದರೂ ಸಮಾಧಾನ ಆಗದ ಮುಖ್ಯಮಂತ್ರಿಗಳು, ರೈತರ ಜಮೀನುಗಳಿಗೆ ಭೇಟಿ ನೀಡಿದಾಗ ರೈತರಿಗೆ ಹೆಚ್ಚು ತಿಳಿವಳಿಕೆ ಇದೆಯಾ? ನಿಮಗೆ ಹೆಚ್ಚು ತಿಳಿವಳಿಕೆ ಇದೆಯಾ ಗೊತ್ತಾಯ್ತಾ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ಪ್ರಾಕ್ಟಿಕಲ್ ಆಗಿ ರೈತರು ಬುದ್ದಿವಂತರಿರುತ್ತಾರೆ. ನಾವು ಅವರಿಂದ ಕಲಿಯುತ್ತೀವಿ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೊಲೀಸರಿಗೆ ಕಪಾಳಮೋಕ್ಷ: 27 ಜನರ ವಿರುದ್ಧ ಕೇಸ್‌
ಮಹಾಲಿಂಗಪುರದಲ್ಲಿ ಇಂದು ಜನುಮದ ಜೋಡಿ ಕಾರ್ಯಕ್ರಮ