ಹೊಸಪೇಟೆ: ನಗರದ ಎಪಿಎಂಸಿ, ಬಸ್ ನಿಲ್ದಾಣ, ಬಾಲಕರ ವಸತಿ ನಿಲಯ ಅಂಗನವಾಡಿ ಕೇಂದ್ರ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಿಗೆ ಶನಿವಾರ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ಹಠಾತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರೈತರಿಗೆ ತೂಕದಲ್ಲಿ ವಂಚನೆಯಾಗದಂತೆ ತಡೆಯಲು ಲೋಕಾಯುಕ್ತರು ಸ್ವತಃ ತೂಕದ ಯಂತ್ರದ (ವೇಯಿಂಗ್ ಮಿಷನ್) ಮೇಲೆ ನಿಂತು, ತೂಕ ಸರಿಯಾಗಿದೆಯೇ ಹಾಗೂ ಸರ್ಕಾರಿ ನಿಯಮಾವಳಿಗಳಂತೆ ಯಂತ್ರಗಳನ್ನು ಕಾಲಕಾಲಕ್ಕೆ ನವೀಕರಿಸಲಾಗಿದೆಯೇ ಎಂದು ಪರಿಶೀಲಿಸಿದರು.
ಮಾರುಕಟ್ಟೆಯಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಭೇಟಿ ನೀಡಿದಾಗ ಅಲ್ಲಿ ಕಂಡುಬಅದ ಅಸಮರ್ಪಕ ನಿರ್ವಹಣೆ ಮತ್ತು ನಿರ್ಲಕ್ಷ್ಯವನ್ನು ಕಂಡು ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡರು. ಇಲ್ಲಿನ ಸಮಸ್ಯೆಯನ್ನು ಶೀಘ್ರವೇ ಸರಿಪಡಿಸಿಕೊಂಡು ಸಾರ್ವಜನಿಕರಿಗೆ ತಕ್ಷಣವೇ ಸುಸಜ್ಜಿತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಎಚ್ಚರಿಕೆ ನೀಡಿದರು.ಎಪಿಎಂಸಿಗೆ ರೈತರು ರಾತ್ರಿ ನಿದ್ದೆಗೆಟ್ಟು ಬರುವುದರಿಂದ ವಿಶ್ರಾಂತಿ ಪಡೆಯಲು ಕೂಡಲೇ ತಂಗುದಾಣ ನಿರ್ಮಾಣಕ್ಕೆ ನಗರಸಭೆಗೆ ಅನುಮತಿ ನೀಡಲು ಸೂಚನೆ ನೀಡೀದರು.
ಬಸ್ ನಿಲ್ದಾಣದ ಲಗೇಜು ಕೊಠಡಿ, ಶೌಚಾಲಯ, ಕಾಯುವ ಕೊಠಡಿ (ವೇಟಿಂಗ್ ಹಾಲ್) ಮತ್ತು ಅಂಗಡಿಮುಂಗಟ್ಟುಗಳಿಗೆ ಭೇಟಿ ನೀಡಿದ ಅವರು, ಅಂಗಡಿಗಳಲ್ಲಿ ಮಾರಾಟ ಮಾಡುವ ಸಿಹಿ ತಿನಿಸುಗಳು ಹಾಗೂ ಆಹಾರ ಪದಾರ್ಥಗಳನ್ನು ಪರಿಶೀಲನೆ ನಡೆಸಿದ ಅವರು, ನಿಗದಿತ ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚಿನ ದರ ವಸೂಲಿ ಮಾಡಬಾರದು. ಅವಧಿ ಮುಗಿದ ಆಹಾರ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಬಾರದು ಎಂದು ಅಂಗಡಿ ಮಾಲೀಕರಿಗೆ ಎಚ್ಚರಿಸಿದರು.
ಈ ವೇಳೆ ಲೋಕಾಯುಕ್ತ ಉಪನಿಬಂಧಕರಾದ ಅರವಿಂದ್, ಉಪವಿಭಾಗಾಧಿಕಾರಿ ವಿವೇಕಾನಂದ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮನೋಹರ್, ನಗರಸಭೆ ಪೌರಾಯುಕ್ತ ಎರಗುಡಿ ಶಿವಕುಮಾರ್, ತಹಶೀಲ್ದಾರ್ ಶೃತಿ ಎಂ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.