ಕನ್ನಡಪ್ರಭ ವಾರ್ತೆ ಮಂಗಳೂರು
ಇದು ಎರಡನೇ ದಿನ ಮಂಗಳವಾರ ಮಂಗಳೂರಿನ ಜಿಲ್ಲಾ ಪಂಚಾಯ್ತಿಯ ನೇತ್ರಾವತಿ ಸಭಾಂಗಣದಲ್ಲಿ ಉಪ ಲೋಕಾಯುಕ್ತ ಜಸ್ಟೀಸ್ ಬಿ.ವೀರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಅಹವಾಲು ಸ್ವೀಕಾರ ಮತ್ತು ಕುಂದುಕೊರತೆ ವಿಚಾರಣಾ ಸಭೆಯಲ್ಲಿ ಕಂಡುಬಂದ ಅಂಶ.
ಸುಮಾರು ಅರ್ಧ ಹೊತ್ತು ನಡೆದ ಸಭೆಯಲ್ಲಿ ಉಪ ಲೋಕಾಯುಕ್ತ ಜಸ್ಟೀಸ್ ವೀರಪ್ಪ ಅವರು ಹೆಚ್ಚಿನ ದೂರುಗಳಿಗೆ ಸ್ಥಳದಲ್ಲೇ ಸ್ಪಂದಿಸಿ ಇತ್ಯರ್ಥಗೊಳಿಸಿದರು. ಇನ್ನೂ ಕೆಲವು ದೂರುಗಳನ್ನು ತನಿಖೆಗೆ ನಿರ್ದೇಶಿಸಿ ಒಂದು ತಿಂಗಳ ಗಡುವು ನೀಡಿದರು.ಶಿಸ್ತು ಕ್ರಮಕ್ಕೆ ಸೂಚನೆ: ಕೋಟೆಕಾರು ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಯಾವುದೇ ಪರವಾನಿಗೆ ಪಡೆಯದೆ ಖಾಸಗಿ ವ್ಯಕ್ತಿ ಕಟ್ಟಡ ನಿರ್ಮಾಣ ಮಾಡುತ್ತಿರುವ ಬಗ್ಗೆ ವ್ಯಕ್ತಿಯೊಬ್ಬರು ದೂರಿದ್ದರು. ಇದರ ವಿಚಾರಣೆ ನಡೆಸಿದ ಜಸ್ಟೀಸ್ ವೀರಪ್ಪ ಅವರು, ಅಂತಹ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳದ ಬಗ್ಗೆ ಪಂಚಾಯ್ತಿ ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ ನಿರ್ಲಕ್ಷ್ಯ ತೋರಿದ್ದಕ್ಕಾಗಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ನಗರಾಭಿವೃದ್ಧಿ ಕೋಶದ ಅಧಿಕಾರಿಗೆ ನಿರ್ದೇಶನ ನೀಡಿದರು.
ತನ್ನ ಜಮೀನಿನಲ್ಲಿ ಅಕ್ರಮವಾಗಿ ಖಾಸಗಿ ಕಂಪನಿಯ ಮೊಬೈಲ್ ಟವರ್ ನಿರ್ಮಾಣವಾಗಿದ್ದು, ಅದನ್ನು ತೆರವುಗೊಳಿಸುವಂತೆ ಮನವಿ ಮಾಡಿದರೂ ಸುಳ್ಯದ ಕನಕಮಜಲು ಪಂಚಾಯ್ತಿ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಪಟ್ಟಾದಾರರು ಅಹವಾಲು ಸಲ್ಲಿಸಿದರು. ಈ ಬಗ್ಗೆ ಉಪ ಲೋಕಾಯುಕ್ತರು ವಿಚಾರಣೆ ನಡೆಸಿದಾಗ, ಅದು ದೂರುದಾರರ ಕುಟುಂಬದ ಕ್ಲೇಷವಾಗಿರುವುದು ಕಂಡುಬಂತು. ಈ ರೀತಿ ಸುಳ್ಳು ದೂರು ನೀಡಿರುವುದಕ್ಕೆ ಕೇಸು ದಾಖಲಿಸುವುದಾಗಿ ಜಸ್ಟೀಸ್ ವೀರಪ್ಪ ಎಚ್ಚರಿಕೆ ನೀಡಿದರು. ಬಳಿಕ ದೂರುದಾರರು ಬೇಷರತ್ ಕ್ಷಮಾಪಣೆ ಕೋರಿದ ಬಳಿಕ ದೂರನ್ನು ವಜಾಗೊಳಿಸಲಾಯಿತು.
ನೋಟಿಸ್‌ಗೆ ಬೆದರಿ ಮನೆಗೇ ಬಂತು ದಾಖಲೆ: 94 ಸಿ ಅರ್ಜಿಯ ದಾಖಲೆಗೆ ಸಂಬಂಧಿಸಿ ಪುತ್ತೂರಿನ ವ್ಯಕ್ತಿಯೊಬ್ಬರು 2023ರಲ್ಲೇ ಕಂದಾಯ ಇಲಾಖೆಯಿಂದ ಮಾಹಿತಿ ಕೇಳಿದ್ದರು. ಆದರೆ ಇದುವರೆಗೆ ಮಾಹಿತಿ ನೀಡಿರಲಿಲ್ಲ. ಲೋಕಾಯುಕ್ತಗೆ ದೂರು ನೀಡಿ ವಿಚಾರಣೆಗೆ ಸೋಮವಾರ ನೋಟಿಸ್ ತಲುಪಿತ್ತು. ಅದೇ ದಿನ ಸಂಜೆಯೊಳಗೆ ಕಂದಾಯ ಅಧಿಕಾರಿಗಳು ದಾಖಲೆಯನ್ನು ವ್ಯಕ್ತಿಯ ಮನೆಗೆ ತಲುಪಿಸಿದ ವಿದ್ಯಮಾನ ನಡೆದಿರುವುದನ್ನು ದೂರುದಾರರು ಉಪ ಲೋಕಾಯುಕ್ತರ ಗಮನಕ್ಕೆ ತಂದರು.