ಡಿಸೆಂಬರ್‌ 6ರಂದು ಕಂದಾಯ ಸಚಿವರಿಂದ ಸಾಗುವಳಿ ಚೀಟಿ ವಿತರಣೆ: ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌

KannadaprabhaNewsNetwork | Published : Dec 4, 2024 12:30 AM

ಸಾರಾಂಶ

ಡಿ.6 ರಂದು ಗುಂಡ್ಲುಪೇಟೆಯಲ್ಲಿ ತಲಾ 4 ಮಂದಿ ರೈತ ಫಲಾನುಭವಿಗಳಿಗೆ ಸಾಗುವಳಿ ಚೀಟಿ ಹಾಗೂ ದುರಸ್ತಿಯಾದ ಆರ್‌ಟಿಸಿಯನ್ನು ಕಂದಾಯ ಸಚಿವ ಕೃಷ್ಣೇಬೈರೇಗೌಡ ವಿತರಿಸಲಿದ್ದಾರೆ ಎಂದು ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಅಧ್ಯಕ್ಷ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ತಿಳಿಸಿದರು. ಗುಂಡ್ಲುಪೇಟೆಯಲ್ಲಿ ಬಗರ್‌ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಗುಂಡ್ಲುಪೇಟೆ ತಾಲೂಕನ್ನು ಪೈಲೆಟ್‌ ಆಗಿ ರಾಜ್ಯ ಸರ್ಕಾರ ಘೋಷಿಸಿರುವ ಹಿನ್ನೆಲೆಯಲ್ಲಿ ಬರುವ ಡಿ.6 ರಂದು ಗುಂಡ್ಲುಪೇಟೆಯಲ್ಲಿ ತಲಾ 4 ಮಂದಿ ರೈತ ಫಲಾನುಭವಿಗಳಿಗೆ ಸಾಗುವಳಿ ಚೀಟಿ ಹಾಗೂ ದುರಸ್ತಿಯಾದ ಆರ್‌ಟಿಸಿಯನ್ನು ಕಂದಾಯ ಸಚಿವ ಕೃಷ್ಣೇಬೈರೇಗೌಡ ವಿತರಿಸಲಿದ್ದಾರೆ ಎಂದು ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಅಧ್ಯಕ್ಷ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿ ಸಭಾ ಭವನದಲ್ಲಿ ನಡೆದ ಬಗರ್‌ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆಯಲ್ಲಿ ಮಾತನಾಡಿ, ಡಿ.6 ರಂದು ಪಟ್ಟಣದ ತಾಲೂಕು ಕಚೇರಿ ಸಭಾ ಭವನದಲ್ಲಿ 4 ಮಂದಿ ಫಲಾನುಭವಿಗಳಿಗೆ ಕಂದಾಯ ಸಚಿವರು ಸಾಗುವಳಿ ಚೀಟಿ ಹಾಗೂ ದುರಸ್ತಿಯಾದ ಆರ್‌ಟಿಸಿಯನ್ನು ವಿತರಿಸುವ ಸಮಾರಂಭ ನಿಗದಿಯಾಗಿದೆ ಎಂದರು. ತಾಲೂಕಿನ ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಗರ್‌ಹುಕುಂ ಆ್ಯಪ್‌ನಲ್ಲಿ ರಾಜ್ಯದ 163 ಸಾಗುವಳಿ ಸಕ್ರಮೀಕರಣ ಸಮಿತಿಗಳಲ್ಲಿ ಸಿರಸಿ ಹಾಗೂ ಗುಂಡ್ಲುಪೇಟೆ ಸಾಗುವಳಿ ಚೀಟಿ ಅನುಮೋದನೆ ಮಾಡಿದೆ ಎಂದರು.

ತಾಲೂಕಿನಲ್ಲಿ ನಡೆದ ಮೂರು ಬಗರ್‌ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯ ಮೊದಲ ಸಭೆಯಲ್ಲಿ 15, 2 ನೇ ಸಭೆಯಲ್ಲಿ 40, ಮೂರನೇ ಸಭೆಯಲ್ಲಿ (ಡಿ.3) 39 ಮಂದಿಗೆ ಸಾಗುವಳಿ ಚೀಟಿ ಸೇರಿ ಒಟ್ಟು 94 ಸಾಗುವಳಿ ಚೀಟಿಗಳನ್ನು ಆ್ಯಪ್‌ನಲ್ಲಿ ಅನುಮೋದನೆ ಮಾಡಲಾಗಿದೆ ಎಂದರು.

ತಾಲೂಕಿನಲ್ಲಿ ಗೋಮಾಳ ಹಾಗೂ ಅರಣ್ಯ ಭೂಮಿಯಲ್ಲಿ ಸಾಗುವಳಿ ನೀಡಲು ಆಗುತ್ತಿಲ್ಲ. ಇದು ಸರ್ಕಾರ ಮಟ್ಟದಲ್ಲಿ ಆಗಬೇಕಾದ ತೀರ್ಮಾನವಾಗಿದೆ. ನಾನು ಕೂಡ ಸರ್ಕಾರದ ಗಮನ ಸೆಳೆದು ಸಾಗುವಳಿ ಚೀಟಿ ಕೊಡಲು ಪ್ರಯತ್ನಿಸುತ್ತೇನೆ ಎಂದರು. 1998ರ ಹಿಂದೆ ನೀಡಲಾದ ಸಾಗುವಳಿ ಚೀಟಿ ನೀಡಲಾಗಿದೆ. ಈಗ ಅರಣ್ಯ ಭೂಮಿ ಹಾಗೂ ಗೋಮಾಳದಲ್ಲಿ ಸಾಗುವಳಿ ನೀಡಲು ಕಾನೂನಿನ ತೊಡಕಿದೆ. ಅರಣ್ಯ ಹಾಗೂ ಕಂದಾಯ ಇಲಾಖೆ ಜಂಟಿ ಸರ್ವೇ ನಡೆಸಿ, ವರದಿ ಬಂದು ಸರ್ಕಾರ ಈ ಸಮಸ್ಯೆ ಬಗೆಹರಿಸುವ ತನಕ ಸಾಗುವಳಿ ಚೀಟಿದಾರರು ಕಾಯಬೇಕಿದೆ ಎಂದರು.

ತಹಸೀಲ್ದಾರ್‌ ಹಾಗೂ ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸದಸ್ಯ ಕಾರ್ಯದರ್ಶಿ ಟಿ.ರಮೇಶ್‌ ಬಾಬು ಮಾತನಾಡಿ, ರಾಜ್ಯದಲ್ಲಿ ಸಿರಸಿ ಹಾಗೂ ಗುಂಡ್ಲುಪೇಟೆ ತಾಲೂಕು ಸಾಗುವಳಿ ಚೀಟಿ ಅನುಮೋದನೆಯಲ್ಲಿ ಪ್ರಥಮ ಸ್ಥಾನದಲ್ಲಿವೆ ಎಂದರು. ಡಿ.4 ರಂದು ಕಂದಾಯ ಸಚಿವರು ಮೊದಲ ಹಂತದಲ್ಲಿ ನಾಲ್ಕು ಮಂದಿ ಫಲಾನುಭವಿಗಳಿಗೆ ಸಾಗುವಳಿ ಚೀಟಿ ಹಾಗೂ ದುರಸ್ತಿಗೊಂಡ ಆರ್‌ಟಿಸಿಯನ್ನು ವಿತರಿಸಿದರೆ 2 ನೇ ಹಂತದಲ್ಲಿ ಡಿ.6 ರಂದು ಗುಂಡ್ಲುಪೇಟೆಯಲ್ಲಿ ವಿತರಿಸಲಿದ್ದಾರೆ ಎಂದರು.

ಸಭೆಯಲ್ಲಿ ಬಗರ್‌ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸದಸ್ಯರಾದ ಪಿ.ಮಹದೇವಪ್ಪ, ಹಂಗಳ ನಾಗರಾಜು, ಕಲಾವತಿ ಮಹೇಶ್‌ ಸೇರಿದಂತೆ ಅಧಿಕಾರಿಗಳು ಹಾಗೂ ಫಲಾನುಭವಿಗಳಿದ್ದರು.

Share this article