- ಅಧಿಕಾರಿಗಳಿಗೆ ಸಚಿವ ಮಲ್ಲಿಕಾರ್ಜುನ, ಶಾಸಕ ಶಿವಶಂಕರಪ್ಪ ಅಭಿನಂದನೆ
ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಗಳ ಯಶಸ್ಸಿನ ಫಲಶೃತಿಗೆ ಈವರೆಗೆ 10 ಪ್ರಶಸ್ತಿ ಲಭಿಸಿದ್ದು, ಕಳೆದೊಂದು ವರ್ಷದಲ್ಲಿ ನಾಲ್ಕು ಪ್ರಶಸ್ತಿ ಸ್ಮಾರ್ಟ್ ಸಿಟಿ ಮುಡಿಗೇರಿದ್ದು ಸಂತೋಷ ತಂದಿದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದ್ದಾರೆ. ನಗರದ ತಮ್ಮ ಗೃಹ ಕಚೇರಿ ಶಿವ ಪಾರ್ವತಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಧಿಕಾರಿ, ಸಿಬ್ಬಂದಿಗೆ ಅಭಿನಂದಿಸಿ ಮಾತನಾಡಿದ ಅವರು, ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಗೆ ಮೇಲಿಂದ ಮೇಲೆ ಪ್ರಶಸ್ತಿ ಲಭಿಸುತ್ತಿರುವುದು, ಸ್ಮಾರ್ಟ್ ಸಿಟಿ ಯೋಜನೆಯ ಯಶಸ್ಸಿಗೆ ಸಾಕ್ಷಿಯಾಗಿವೆ ಎಂದರು. ಕಳೆದ ಒಂದೇ ವರ್ಷದಲ್ಲಿ ಐಸಿಟಿ ಯೋಜನೆಯ ಯಶಸ್ಸಿಗೆ 3 ರಾಷ್ಟ್ರ ಮಟ್ಟದ ಪ್ರಶಸ್ತಿ ಬಂದಿದ್ದವು. ಐಎಂಎಫ್ 2.0 ಸೈಕಲ್ 1, ಪಬ್ಲಿಕ್ ಸೇಫ್ಟಿ ಇನ್ನೋವೇಷನ್, ಬೆಸ್ಟ್ ಸ್ಮಾರ್ಟ್ ಸಿಟಿ ಇನ್ಫ್ರಾಸ್ಟ್ರೆಕ್ಚರ್ ಲಭಿಸಿದೆ. ದಾವಣಗೆರೆ ಕೆಎಸ್ಸಾರ್ಟಿಸಿ ಮುಖ್ಯ ಬಸ್ಸು ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಲ್ಟ್ರಾ ಟೆಕ್ ಕಂಪನಿ ನೀಡುವ ರಾಜ್ಯಮಟ್ಟದ ಒಂದು ಪ್ರಶಸ್ತಿಯಾದ ಔಟ್ ಸ್ಟ್ಯಾಂಡಿಂಗ್ ಕಾಂಕ್ರೀಟ್ ಸ್ಟ್ರಕ್ಚರ್ ಆಫ್ ನಾರ್ಥ್ ಕರ್ನಾಟಕ (ಇನ್ಫ್ರಾ ಕೆಟಗರಿ) ಪ್ರಶಸ್ತಿ ಲಭಿಸಿರುವುದು ಊರಿಗೆ ಹೆಮ್ಮೆಯ ವಿಚಾರ ಎಂದು ಅವರು ಶ್ಲಾಘಿಸಿದರು. ಸಚಿವ ಮಲ್ಲಿಕಾರ್ಜುನ ಮಾತನಾಡಿ, ಬಾಕಿ ಉಳಿದಿರುವ ಸ್ಮಾರ್ಟ್ ಸಿಟಿ ಯೋಜನೆಗಳನ್ನು ತ್ವರಿತ ಗತಿಯಲ್ಲಿ ಗುಣಮಟ್ಟದಿಂದ ಕೈಗೊಳ್ಳಬೇಕು. ಕಾಮಗಾರಿ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲದಂತೆ ಕೆಲಸ ಮಾಡಬೇಕು. ಜಿಲ್ಲಾ ಕೇಂದ್ರವನ್ನು ಮತ್ತಷ್ಟು ಸ್ಮಾರ್ಟ್ ಮಾಡಲು ಸ್ಮಾರ್ಟ್ ಸಿಟಿ ಯೋಜನೆಯಡಿ ಮುಂದಿನ ದಿನಗಳಲ್ಲಿ ಮತ್ತಷ್ಟು ಹೊಸ ಯೋಜನೆ, ಆಲೋಚನೆಗಳನ್ನು ಮಾಡಲಾಗುವುದು ಎಂದು ಹೇಳಿದರು. ನಂತರ ಶಾಸಕ, ಮಾಜಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ ಅವರನ್ನು ಭೇಟಿ ಮಾಡಿದ ಸ್ಮಾರ್ಟ್ ಸಿಟಿ ಯೋಜನೆ ಅಧಿಕಾರಿಗಳು, ಸಿಬ್ಬಂದಿಗೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿ, ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡ ಕಾರ್ಯಗಳಿಗೆ ದಾವಣಗೆರೆ ಮಹಾನಗರಕ್ಕೆ ಪ್ರಶಸ್ತಿ ಬಂದಿರುವುದಕ್ಕೆ ಅಭಿನಂದಿಸಿದರು. ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳು ಜಿಲ್ಲಾ ಕೇಂದ್ರದಲ್ಲಿ ಆಗುವಂತೆ ನೋಡಿಕೊಳ್ಳಿ ಎಂದು ಸೂಚಿಸಿದರು.
ಸ್ಮಾರ್ಟ್ ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ವೀರೇಶ ಕುಮಾರ ಮಾತನಾಡಿ, ಕಳೆದೊಂದು ವರ್ಷದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ 4 ಪ್ರಶಸ್ತಿಗಳು ಬಂದಿವೆ. ಐಎಂಎಎಫ್ 2.0 ಸೈಕಲ್ 1, ಪಬ್ಲಿಕ್ ಸೇಫ್ಟಿ ಇನ್ನೊವೇಷನ್, ಬೆಸ್ಟ್ ಸ್ಮಾರ್ಟ್ ಸಿಟಿ ಇನ್ಫ್ರಾಸ್ಟ್ರಕ್ಚರ್, ಔಟ್‍ಸ್ಟ್ಯಾಂಡಿಂಗ್ ಕಾಂಕ್ರೀಟ್ ಸ್ಟ್ರಕ್ಚರ್ ಆಫ್ ನಾರ್ಥ್ ಕರ್ನಾಟಕ’ (ಇನ್ಫ್ರಾ ಕೆಟಗರಿ)ದಲ್ಲಿ ಪ್ರಶಸ್ತಿಗಳು ಬಂದಿರುವುದಕ್ಕೆ ಸಚಿವರು, ಸಂಸದರು, ಶಾಸಕರು, ಅಧಿಕಾರಿಗಳು, ಜನ ಪ್ರತಿನಿಧಿಗಳು, ಸಾರ್ವಜನಿಕರ ಸಹಕಾರ, ಪ್ರೋತ್ಸಾಹವೂ ಕಾರಣವಾಗಿವೆ ಎಂದರು.ಕಾಂಗ್ರೆಸ್ ಮುಖಂಡ ಮಾಗಾನಹಳ್ಳಿ ಬಿ.ಕೆ.ಪರಶುರಾಮ, ಸ್ಮಾರ್ಟ್ ಸಿಟಿ ಯೋಜನೆಯ ಸ್ವತಂತ್ರ ನಿರ್ದೇಶಕ ಎಂ.ನಾಗರಾಜ, ಪ್ರಧಾನ ವ್ಯವಸ್ಥಾಪಕ (ತಾಂತ್ರಿಕ) ಎಚ್.ಎನ್.ಕೃಷ್ಣ ಪ್ರಸಾದ, ಡಿಜಿಎಂ ಐಟಿ ಮಮತಾ, ಜಲವಾಹಿನಿ ಪಿಎಂಸಿ ಟೀಮ್ ಲೀಡ್ ಉಮಾಪತಿ ಹೊಂಬಣ್ಣ ಇತರರು ಇದ್ದರು.
- - - -3ಕೆಡಿವಿಜಿ4.-5ಜೆಪಿಜಿ:ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಯಡಿ ಪ್ರಶಸ್ತಿಗಳು ಬಂದ ಹಿನ್ನೆಲೆ ಯೋಜನೆ ಅಧಿಕಾರಿಗಳಿಗೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅಭಿನಂದಿಸಿದರು.