ವಿಜೃಂಭಣೆಯಿಂದ ನಡೆದ 24ನೇ ವರ್ಷದ ದೀಪೋತ್ಸವ

KannadaprabhaNewsNetwork | Published : Dec 4, 2024 12:30 AM

ಸಾರಾಂಶ

ಪಾಂಡವಪುರ ತಾಲೂಕಿನ ಎಂ.ಬೆಟ್ಟಹಳ್ಳಿ ಹಾಗೂ ಚಾಗಶೆಟ್ಟಹಳ್ಳಿ ಗ್ರಾಮಸ್ಥರಿಂದ ಶ್ರೀಶಂಭುಲಿಂಗೇಶ್ವರ ದೇವಾಲಯದಲ್ಲಿ ಕಡೆ ಕಾರ್ತಿಕ ಮಾಸ ಹಾಗೂ ಅಮಾವಾಸ್ಯೆ ಅಂಗವಾಗಿ ನಡೆದ 24ನೇ ವರ್ಷದ ದೀಪೋತ್ಸವವು ವಿಜೃಂಭಣೆಯಿಂದ ನಡೆಯಿತು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಎಂ.ಬೆಟ್ಟಹಳ್ಳಿ ಹಾಗೂ ಚಾಗಶೆಟ್ಟಹಳ್ಳಿ ಗ್ರಾಮಸ್ಥರಿಂದ ಶ್ರೀಶಂಭುಲಿಂಗೇಶ್ವರ ದೇವಾಲಯದಲ್ಲಿ ಕಡೆ ಕಾರ್ತಿಕ ಮಾಸ ಹಾಗೂ ಅಮಾವಾಸ್ಯೆ ಅಂಗವಾಗಿ ನಡೆದ 24ನೇ ವರ್ಷದ ದೀಪೋತ್ಸವವು ವಿಜೃಂಭಣೆಯಿಂದ ನಡೆಯಿತು.

ದೇವಾಲಯದಲ್ಲಿ ಎರಡು ಗ್ರಾಮಗಳ ಗ್ರಾಮಸ್ಥರು ದೀಪೋತ್ಸವ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಚಾಗಶೆಟ್ಟಿಹಳ್ಳಿ ಹೊರವಲಯದ ದೇಗುಲದ ದೀಪೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಮಹಿಳೆಯರು, ಭಕ್ತರು ಆಗಮಿಸಿ ದೀಪವನ್ನು ಬೆಳಗಿಸಿದರು.

ದೇಗುಲಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ದೀಪೋತ್ಸಕ್ಕಾಗಿ ದೇವಸ್ಥಾನದ ಸುತ್ತಲು ಮರದ ಬೊಂಬೆಗಳಿಂದ ಕಂಬಗಳನ್ನು ಕಟ್ಟಿ ಅದರ ಮೇಲೆ ದೀಪಗಳನ್ನು ಇಡಲಾಗಿತ್ತು. ರಾತ್ರಿ ನಡೆದ ದೀಪೋತ್ಸವದಲ್ಲಿ ಸುತ್ತಮುತ್ತಲಿಂದ ಗ್ರಾಮಸ್ಥರು ಆಗಮಿಸಿ ದೇವರಿಗೆ ಪೂಜೆಸಲ್ಲಿಸಿ ನಂತರ ದೀಪೋತ್ಸವದಲ್ಲಿ ಭಾಗವಹಿಸಿದರು.

ದೇವಸ್ಥಾನದ ಮುಂಭಾಗ ಒಂದೇ ತೆಂಗಿನ ಬುಡದಲ್ಲಿ ಮೂರು ತೆಂಗಿನ ಮರ ಬೆಳೆದಿರುವುದು ವಿಶೇಷವಾಗಿದೆ. ಭಕ್ತರು ಈ ಇದು ದೇವರ ಸ್ವರೂಪ ಎಂದು ಭಾವಿಸಿ ತೆಂಗಿನ ಮರಕ್ಕೂ ಪೂಜೆಸಲ್ಲಿಸಿದರು. ದೀಪೋತ್ಸವದ ಅಂಗವಾಗಿ ಎರಡು ಗ್ರಾಮಗಳ ಭಕ್ತರು ದೇವರಿಗೆ ಭಕ್ತಿ ಸಮರ್ಪಿಸಿದರು. ನಂತರ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಭಕ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಡಿಸೆಂಬರ್ 10 ಶ್ರೀ ಭಗವದ್ಗೀತಾ ಮಹಾಸಮರ್ಪಣೆ ಕಾರ್ಯಕ್ರಮ

ಮಂಡ್ಯ:

ಶ್ರೀಭಗವದ್ಗೀತಾ ಅಭಿಯಾನ ಸಮಿತಿಯಿಂದ ಡಿ.10ರಂದು ನಗರದ ವಿದ್ಯಾಗಣಪತಿ ದೇಗುಲದಲ್ಲಿ ಶ್ರೀಗೀತಾ ಜಯಂತಿ ಆಚರಣೆ ಮತ್ತು ಶ್ರೀಭಗವದ್ಗೀತಾ ಮಹಾ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮವನ್ನು ತಾರಾ ವೈದ್ಯಕೀಯ ಸಮೂಹ ಸಂಸ್ಥೆಗಳ ಮಾಲೀಕ ಡಾ.ಕೆ.ಚಂದ್ರಶೇಖರ್ ಉದ್ಘಾಟಿಸಲಿದ್ದು, ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಅಧ್ಯಕ್ಷತೆ ವಹಿಸಲಿದ್ದಾರೆ. ವಿವೇಕ ವಂತಿ ಫೌಂಡೇಷನ್‌ನ ಸಂಸ್ಥಾಪಕ ಶ್ರೀನಿತ್ಯಾನಂದ ವಿವೇಕ ವಂಶಿ ಗೀತಾ ಸಂದೇಶ ನೀಡಲಿದ್ದಾರೆ.

ಸುಮನ ವಿನಾಯಕ ನರ್ಸಿಂಗ್ ಹೋಂನ ಸ್ತ್ರೀರೋಗ ತಜ್ಞರಾದ ಡಾ.ವಸುಮತಿ ಎಸ್.ರಾವ್, ಜಿಲ್ಲಾ ಬ್ರಾಹ್ಮಣಸಭಾ ಅಧ್ಯಕ್ಷ ಪ್ರೊ.ಎಚ್.ಎಸ್.ನರಸಿಂಹಮೂರ್ತಿ, ನಿರ್ದೇಶಕ ಹೊಳಲು ರಾಘವೇಂದ್ರ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಭಗವದ್ಗೀತೆ ಕುರಿತು ನಡೆದ ಕಂಠಪಾಠ, ರಸಪ್ರಶ್ನೆ ಸ್ಪರ್ಧೆ ಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುವುದು. ಅಂದು ಬೆಳಗ್ಗೆ 9 ಗಂಟೆಗೆ ಶ್ರೀಕೃಷ್ಣ ಪರಮಾತ್ಮನ ಸಾಲಂಕೃತ ಮೆರವಣಿಗೆ ನಡೆಯಲಿದೆ ಎಂದು ಭಗವದ್ಗೀತಾ ಅಭಿಯಾನ ಸಮಿತಿ ತಿಳಿಸಿದೆ.

Share this article