ಕಳ್ಳತನ ಮಾಡಲು ಹೋದಾಗ ನನ್ನ ಮೇಲೆ ದಂಪತಿ ಹಲ್ಲೇ ಮಾಡಿದ್ದಾರೆಂದು ಸ್ವತಃ ಕಳ್ಳನೇ ಪೊಲೀಸ್ ಠಾಣೆಗೆ ದೂರು ನೀಡಿರುವ ಅಪರೂಪದ ಪ್ರಸಂಗ ಸಂಪಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕಳ್ಳತನ ಮಾಡಲು ಹೋದಾಗ ನನ್ನ ಮೇಲೆ ದಂಪತಿ ಹಲ್ಲೇ ಮಾಡಿದ್ದಾರೆಂದು ಸ್ವತಃ ಕಳ್ಳನೇ ಪೊಲೀಸ್ ಠಾಣೆಗೆ ದೂರು ನೀಡಿರುವ ಅಪರೂಪದ ಪ್ರಸಂಗ ಸಂಪಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ನಮ್ಮ ಮನೆಗೆ ಕಳ್ಳತನ ಮಾಡಲು ಬಂದಾಗ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆಂದು ಸಂಪಿಗೇಹಳ್ಳಿ ಪೊಲೀಸ್ ಠಾಣೆಗೆ ಮನೆಯ ಮಾಲೀಕರು ದೂರು ನೀಡಿದ್ದು, ಇದಕ್ಕೆ ಪ್ರತಿಯಾಗಿ ಕಳ್ಳತನಕ್ಕೆ ಹೋಗಿದ್ದಾಗ ನನ್ನ ಮೇಲೆಯೇ ಅವರು ಹಲ್ಲೆ ನಡೆಸಿದ್ದಾರೆಂದು ಅಸ್ಗರ್‌ಖಾನ್ ಎಂಬಾತ ಪೊಲೀಸರಿಗೆ ದೂರು ನೀಡಿದ್ದಾನೆ. ಒಂದೇ ಘಟನೆ ಸಂಬಂಧ 2 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ಕಳ್ಳತನಕ್ಕೆ ಯತ್ನಿಸಿದ ದಂಪತಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಅಸ್ಗರ್ ಖಾನ್, ರಜಾಕ್ ಹಾಗೂ ಶ್ಯಾಮ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.ಘಟನೆಯ ವಿವರ:ಆರ್.ಟಿ.ನಗರ ನಿವಾಸಿ ಪ್ರಮುಖ ಆರೋಪಿ ಅಸ್ಗರ್ ಖಾನ್, ದುಶ್ಚಟಗಳಿಗೆ ಹಣ ಹೊಂದಿಸಲು ತನ್ನ ಇಬ್ಬರು ಸಹಚರರೊಂದಿಗೆ ಕಳ್ಳತನ ಮಾಡುತ್ತಿದ್ದ. ಜ.31ರ ರಾತ್ರಿ ಚೊಕ್ಕನಹಳ್ಳಿ ರಸ್ತೆಯ ಮನೆಯ ಬಳಿ ಮೂವರು ಆಟೋದಲ್ಲಿ ಹೋಗಿದ್ದರು. ಈ ವೇಳೆ ಇಬ್ಬರನ್ನು ಹೊರಗೆ ಇರುವಂತೆ ಹೇಳಿದ್ದ ಅಸ್ಗರ್ ಒಬ್ಬನೇ ಮನೆಯ ಕಾಂಪೌಂಡ್ ಹತ್ತಿ ನಂತರ ಅಲ್ಲಿದ್ದ ಎಲೆಕ್ಟ್ರಿಕಲ್ ವಸ್ತುಗಳ ಕದಿಯುತ್ತಿದ್ದ. ಇದನ್ನು ಗಮನಿಸಿದ ದೂರುದಾರರಾದ ರೇಖಾ ಹಾಗೂ ಪತಿ ಸ್ಯಾಮುಯೆಲ್ ಪ್ರಶ್ನಿಸಿದ್ದರು. ಈ ವೇಳೆ ವಾಗ್ವಾದ ನಡೆದಿದ್ದು, ಹೊರಗಿದ್ದ ಇನ್ನಿಬ್ಬರನ್ನು ಅಸ್ಗರ್ ಕರೆಯಿಸಿಕೊಂಡಿದ್ದ. ಅವರು ಬಿಯರ್ ಬಾಟೆಲ್‌ನಿಂದ ಸ್ಯಾಮುಯೆಲ್ ಅವರ ತಲೆಗೆ ಹೊಡೆದಿದ್ದರು. ಆ ಬಾಟೆಲ್‌ನ ಚೂರುಗಳು ಪತ್ನಿಗೂ ತಗುಲಿ ಇಬ್ಬರಿಗೆ ಪೆಟ್ಟಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಲ್ಲೆಯಿಂದಾಗಿ ದಂಪತಿ ಜೋರಾಗಿ ಕೂಗಿಕೊಳ್ಳುತ್ತಿದ್ದಂತೆ ಸ್ಥಳದಿಂದ ರಜಾಕ್ ಹಾಗೂ ಶ್ಯಾಮ್ ಪರಾರಿಯಾಗಿದ್ದರು. ಈ ವೇಳೆ ಸ್ಥಳೀಯರ ಕೈಗೆ ಆಸ್ಗರ್ ಸಿಕ್ಕಿಬಿದ್ದಿದ್ದು ಆತನಿಗೆ ಧರ್ಮದೇಟು ನೀಡಲಾಗಿತ್ತು. ಗಾಯಗೊಂಡಿದ್ದ ಆತ ಆಸ್ಪತ್ರೆಗೆ ದಾಖಲಾಗಿದ್ದ. ಈ ಸಂಬಂಧ ದಂಪತಿ ನೀಡಿದ ದೂರಿನನ್ವಯ ಕಾರ್ಯಾಚರಣೆ ನಡೆಸಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕಳ್ಳನಿಂದಲೂ ಪ್ರತಿ ದೂರು:
ಪ್ರಾಥಮಿಕ ಚಿಕಿತ್ಸೆ ಪಡೆದ ಆರೋಪಿ ಅಸ್ಗರ್‌ಖಾನ್ ಅಪರಿಚಿತರು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿ ಪ್ರತಿ ದೂರು ನೀಡಿದ್ದು, ತನಗೆ ಮರದ ತುಂಡಿನಿಂದ ಹೊಡೆದು ರಕ್ತಗಾಯ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾನೆ. ವಿಚಿತ್ರವೆಂದರೆ ಕಳ್ಳತನ ಮಾಡಲು ಬಂದಿರುವ ವಿಚಾರವನ್ನು ಕೂಡ ಅಸ್ಗರ್ ದೂರಿನಲ್ಲಿ ಹೇಳಿದ್ದಾನೆ.ಕಳ್ಳತನಕ್ಕೆ ಯತ್ನಿಸಿದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ಅಸ್ಗರ್ ಎಂಬಾತ ತನ್ನ ಮೇಲೆ ಅಪರಿಚಿತರು ಹಲ್ಲೆ ಮಾಡಿರುವುದಾಗಿ ಆರೋಪಿಸಿ ನೀಡಿದ ದೂರಿನನ್ವಯ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ.
- ಜಿ.ಎಂ.ಮಿಥುನ್ ಕುಮಾರ್, ಈಶಾನ್ಯ ವಿಭಾಗದ ಡಿಸಿಪಿ