ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಶಹರ ಠಾಣೆ ಪೊಲೀಸರು ಬಂಧಿಸಿ ಆಕೆಯಿಂದ ಕದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ರಾಣಿಬೆನ್ನೂರು: ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಶಹರ ಠಾಣೆ ಪೊಲೀಸರು ಬಂಧಿಸಿ ಆಕೆಯಿಂದ ಕದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಹರಿಹರ ಭೀಮಾನಗರದ ಸಿರಿನಾಬಾನು ಮಹಮ್ಮದ್‌ ಜಾಫರ್ ಹೆಡಿಯಾಲ (35) ಬಂಧಿತ ಆರೋಪಿ.

ಇಲ್ಲಿನ ಅಲ್ತಾಫ್ ನಗರದ ಮಹಿಳೆಯೊಬ್ಬರು ಜ. 26ರಂದು ನಗರದ ದೊಡ್ಡಪೇಟೆಯ ಬಟ್ಟೆ ಅಂಗಡಿಗೆ ಖರೀದಿಗೆ ತೆರಳಿದ್ದರು. ಆಗ ಆಕೆಯ ವ್ಯಾನಿಟಿ ಬ್ಯಾಗ್‌ನಲ್ಲಿದ್ದ 59 ಗ್ರಾಂ ತೂಕದ ಬಂಗಾರದ ಆಭರಣ, 70 ಗ್ರಾಂ ತೂಕದ ಬೆಳ್ಳಿ ಆಭರಣ, ಒಂದು ಸಾವಿರ ನಗದು ಸೇರಿದಂತೆ ಒಟ್ಟು ₹4,76,500 ವಸ್ತುಗಳನ್ನು ಆಕೆಗೆ ಗೊತ್ತಾಗದ ಕಳ್ಳತನ ಮಾಡಿ ಪರಾರಿಯಾಗಿದ್ದರು.

ಘಟನೆ ಕುರಿತು ಮಹಿಳೆಯು ಶಹರ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಸ್‌ಪಿ ಯಶೋಧಾ ವಂಟಗೋಡಿ ಆರೋಪಿಗಳ ಪತ್ತೆಗಾಗಿ ಹೆಚ್ಚುವರಿ ಎಸ್‌ಪಿ ಲಕ್ಷ್ಮಣ ಶಿರಕೋಳ, ಡಿವೈಎಸ್‌ಪಿ ಲೋಕೇಶ ಜೆ. ಮಾರ್ಗದರ್ಶನದಲ್ಲಿ ಶಹರ ಸಿಪಿಐ ನೇತೃತ್ವದಡಿ ಪಿಎಸ್‌ಐಗಳಾದ ಪರಮೇಶ ಡಿ.ಜಿ., ಎಚ್.ಎನ್. ದೊಡ್ಡಮನಿ, ಎಎಸ್‌ಐಗಳಾದ ಬಿ.ಎಸ್. ಮಡ್ಡರ, ಡಿ.ಜಿ. ಇಂಗಳಗುಂದಿ ಹಾಗೂ ಸಿಬ್ಬಂದಿ ಪಿ.ಕೆ. ಸನದಿ, ಪಿ.ಕೆ. ಲಮಾಣಿ, ಮಂಜುನಾಥ ರೊಟ್ಟಿಯವರ, ಎಚ್.ಎಲ್. ದನವಿನಮನಿ, ಎಚ್.ಟಿ. ನಾಗಾವತ್, ಎಲ್.ಬಿ. ಕರಿಗಾರ, ಶಿವಲೀಲಾ ಡೊಂಬರ, ಚಾಲಕ ಶ್ರೀಕಾಂತ ಕೊರವರ, ತಾಂತ್ರಿಕ ಸಿಬ್ಬಂದಿಯವರನ್ನು ಒಳಗೊಂಡ ಒಂದು ವಿಶೇಷ ತಂಡವನ್ನು ರಚಿಸಿದ್ದರು.

ಈ ತಂಡ ಘಟನೆ ನಡೆದ 24 ಗಂಟೆಯ ಅವಧಿಯಲ್ಲಿ ಕ್ಷಿಪ್ರ ಕಾರ್ಯಾಚರಣೆ ಕೈಗೊಂಡು ವೈಜ್ಞಾನಿಕ ಹಾಗೂ ಸಿಸಿಟಿವಿ ದೃಶ್ಯಾವಳಿಗಳ ವ್ಯಾಪಕ ಪರಿಶೀಲನೆ ಕೈಗೊಂಡು ನಗರದ ದುರ್ಗಾ ಮಾರ್ಕೇಟ್ ಬಳಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಆಕೆ ಬಳಿಯಿಂದ ₹ 4,76,500 ಮೌಲ್ಯದ 610 ಗ್ರಾಂ ಬಂಗಾರದ ಆಭರಣಗಳು, 78 ಗ್ರಾಂ ತೂಕದ ಬೆಳ್ಳಿಯ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಅಧಿಕಾರಿ ಮತ್ತು ಸಿಬ್ಬಂದಿ ತಂಡದ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.