ಉಪ ಲೋಕಾಯುಕ್ತರಿಂದ ಬಳ್ಳಾರಿ ಜಿಲ್ಲಾ ಆಸ್ಪತ್ರೆ, ಬಿಮ್ಸ್ ಗೆ ಭೇಟಿ, ಪರಿಶೀಲನೆ

KannadaprabhaNewsNetwork |  
Published : Jan 18, 2025, 12:46 AM IST
ಬಳ್ಳಾರಿಯ ಆರ್‌ಟಿಒ ಕಚೇರಿಗೆ ದಿಢೀರ್ ಭೇಟಿ ನೀಡಿದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಹಾಗೂ ಬಳ್ಳಾರಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ತಂಡವು ಸಿಬ್ಬಂದಿಗಳ ಹಾಜರಾತಿ ಪುಸ್ತಕ, ಚಲನ-ವಲನ ವಹಿ ಹಾಗೂ ನಗದು ಘೋಷಣಾ ವಹಿ ಪುಸ್ತಕಗಳನ್ನು ಪರಿಶೀಲಿಸಿತು.  | Kannada Prabha

ಸಾರಾಂಶ

ತುರ್ತು ಚಿಕಿತ್ಸಾ ವಿಭಾಗ, ಔಷಧಿ ವಿತರಣಾ ವಿಭಾಗ, ಓಬಿಜಿ ವಾರ್ಡ್ ಸೇರಿದಂತೆ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿ-ಗತಿ ಪರಿಶೀಲಿಸಿದರು.

ಬಳ್ಳಾರಿ: ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ ನಗರದ ಜಿಲ್ಲಾ ಆಸ್ಪತ್ರೆ ಮತ್ತು ಬಿಮ್ಸ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತುರ್ತು ಚಿಕಿತ್ಸಾ ವಿಭಾಗ, ಔಷಧಿ ವಿತರಣಾ ವಿಭಾಗ, ಓಬಿಜಿ ವಾರ್ಡ್ ಸೇರಿದಂತೆ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿ-ಗತಿ ಪರಿಶೀಲಿಸಿದರು. ವಿವಿಧ ವಾರ್ಡ್ ಗಳಲ್ಲಿ ದಾಖಲಾಗಿದ್ದ ರೋಗಿಗಳ ಆರೋಗ್ಯ ವಿಚಾರಿಸಿದರು. ರೋಗಿಗಳಿಗೆ ಗುಣಮಟ್ಟ ಸೇವೆ ನೀಡಬೇಕು ಎಂದು ಅಲ್ಲಿನ ಕರ್ತವ್ಯ ನಿರತ ವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅವಧಿ ಮೀರಿದ ಔಷಧಿಗಳನ್ನು ವಿತರಿಸುವಂತಿಲ್ಲ.

ಜಿಲ್ಲಾಸ್ಪತ್ರೆ, ಬಿಮ್ಸ್ ಸೇರಿದಂತೆ ಯಾವುದೇ ಆಸ್ಪತ್ರೆಗಳಲ್ಲಿ ಅವಧಿ ಮೀರಿದ ಔಷಧಿ, ಶಸ್ತ್ರಚಿಕಿತ್ಸಕ ವಸ್ತುಗಳನ್ನು ಯಾವುದೇ ಕಾರಣಕ್ಕೂ ವಿತರಿಸುವಂತಿಲ್ಲ ಮತ್ತು ಬಳಸುವಂತಿಲ್ಲ ಎಂದು ಜಿಲ್ಲಾ ಆಸ್ಪತ್ರೆ ಮತ್ತು ಬಿಮ್ಸ್ ಔಷಧಿ ವಿತರಣಾ ವಿಭಾಗದ ವೈದ್ಯಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳಿಗೆ ಔಷಧಿಯನ್ನು ಹೊರಗಡೆ ತರುವಂತೆ ಚೀಟಿ ಬರೆದುಕೊಡಲಾಗುತ್ತಿದೆ ಎಂದು ಅನೇಕ ರೋಗಿಗಳು ದೂರಿದ್ದಾರೆ. ಯಾವುದೇ ಕಾರಣಕ್ಕೂ ಹೊರಗಡೆ ತರಲು ಸೂಚನೆ ನೀಡಬಾರದು. ಆಸ್ಪತ್ರೆಯಿಂದಲೇ ವಿತರಿಸುವಂತೆ ಸರ್ಕಾರದ ಸುತ್ತೋಲೆ ಇದ್ದಾಗ್ಯೂ ಹೊರಗಡೆ ಔಷಧಿ ತರುವಂತೆ ಚೀಟಿ ಬರೆದುಕೊಡುವುದು ಏಕೆ ಎಂದು ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸರ್ಕಾರಿ ಆಸ್ಪತ್ರೆಗಳಿಗೆ ಶ್ರೀಮಂತರು ಬರುವುದಿಲ್ಲ. ಬಡವರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಅವರಿಗೆ ಸೂಕ್ತ ವೈದ್ಯಕೀಯ ಸೇವೆ ನೀಡುವುದು ನಿಮ್ಮ ಜವಾಬ್ದಾರಿ. ಆದರೆ, ನೀವು ರೋಗಿಗಳನ್ನು ನಿರ್ಲಕ್ಷ್ಯ ಮಾಡುತ್ತಿರುವುದು ಕಂಡು ಬರುತ್ತಿದ್ದು, ಹೊರಗಡೆ ಔಷಧಿ ತರಲು ಹೇಳುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನಿಮ್ಮಂದಾಗಿಯೇ (ವೈದ್ಯರು) ಬಿಮ್ಸ್ ಆಸ್ಪತ್ರೆಯ ಸುತ್ತ 20ಕ್ಕೂ ಹೆಚ್ಚು ಔಷಧಿ ಮಳಿಗೆಗಳು ಸುತ್ತುವರಿದಿವೆ ಎಂದು ಅಸಮಾಧಾನಗೊಂಡರು.

ಹೊರಗಡೆ ಔಷಧಿ ತರಲು ಶಿಫಾರಸು ಮಾಡಿದ ವೈದ್ಯಾಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಬೇಕು ಎಂದು ಉಪ ಲೋಕಾಯುಕ್ತರು ಇದೇ ವೇಳೆ ಬಿಮ್ಸ್ ನಿರ್ದೇಶಕರಿಗೆ ಸೂಚನೆ ನೀಡಿದರು.

ಆರ್‌ಟಿಒ ಕಚೇರಿಗೆ ದಿಢೀರ್ ಭೇಟಿ:

ನಗರದ ಸುಧಾ ಕ್ರಾಸ್ ಬಳಿಯ ಪ್ರಾದೇಶಿಕ ಸಾರಿಗೆ ಕಚೇರಿಗೆ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ, ಬಳ್ಳಾರಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ತಂಡವು ದಿಢೀರ್ ಭೇಟಿ ನೀಡಿ ಕಚೇರಿಯ ವಿವಿಧ ಕಡತಗಳನ್ನು ಪರಿಶೀಲನೆ ಮಾಡಿದರು. ಕಚೇರಿಯ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಹಾಜರಾತಿ ಪುಸ್ತಕ, ಚಲನ-ವಲನ ವಹಿ ಹಾಗೂ ನಗದು ಘೋಷಣಾ ವಹಿ ಪುಸ್ತಕಗಳನ್ನು ಪರಿಶೀಲಿಸಿದರು.

ಈ ವೇಳೆ ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ, ಎಸ್ಪಿ ಡಾ.ಶೋಭಾರಾಣಿ, ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ, ಎಡಿಸಿ ಮಹಮ್ಮದ್ ಝುಬೇರ್, ಲೋಕಾಯುಕ್ತದ ಅಪರ ನಿಬಂಧಕ ಕೆ.ಎಂ.ರಾಜಶೇಖರ್, ಸಹಾಯಕ ನಿಬಂಧಕ ಶುಭವೀರ್ ಜೈನ್.ಬಿ., ಉಪ ನಿಬಂಧಕ ಅರವಿಂದ.ಎನ್.ವಿ., ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ, ಬಳ್ಳಾರಿ ಲೋಕಾಯುಕ್ತ ಎಸ್ಪಿ ಸಿ.ಸಿದ್ದರಾಜು, ಡಿವೈಎಸ್ಪಿ ವಸಂತಕುಮಾರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''
ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ