ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಅಮಿತ್ ಶಾ ಭಾವಚಿತ್ರವನ್ನು ರಸ್ತೆಯಲ್ಲಿ ಎಸೆದು ಕಾಲಿನಲ್ಲಿ ತುಳಿಯುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ನಡೆದ ಧರಣಿಯಲ್ಲಿ ಮಾತನಾಡಿದ ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಮಾತನಾಡುವ ವೇಳೆ ಅಂಬೇಡ್ಕರ್ ಬಗ್ಗೆ ಕೀಳು ಮಟ್ಟದಲ್ಲಿ ಅವಹೇಳನ ಮಾಡಿದ್ದಾರೆ. ದೇಶದ ಸಂವಿಧಾನ ಒಪ್ಪಿಕೊಂಡು, ಸಂವಿಧಾನದ ಪ್ರಕಾರ ಅಮಿತ್ ಶಾ ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗಿದ್ದಾರೆ. ಸಂವಿಧಾನ ಮೂಲಕ ಅಧಿಕಾರ ಅನುಭವಿಸಿ ಸಂವಿಧಾನ ಕೊಟ್ಟ ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವುದು ಖಂಡನೀಯ. ಕೂಡಲೇ ಪ್ರಧಾನಿ ಅವರು ಅಮಿತ್ ಶಾರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ ಮಾತನಾಡಿ, ದೇವರ ಸ್ಮರಣೆಯಿಂದ ದಲಿತರಿಗೆ ನ್ಯಾಯ ಸಿಕ್ಕಿಲ್ಲ, ಸಂವಿಧಾನ ಇಲ್ಲದಿದ್ದರೆ ದಲಿತರು ಮತ್ತು ಹಿಂದುಳಿದ ಜನ ಇವತ್ತಿಗೂ ಗೃಹ ಬಂಧನದಲ್ಲಿಯೇ ಇರಬೇಕಿತ್ತು. ದೇಶದ ಪ್ರತಿಯೊಬ್ಬ ಪ್ರಜೆಗೂ ಸ್ವಾತಂತ್ರ್ಯ, ಸಮಾನತೆ ಕೊಟ್ಟ ಅಂಬೇಡ್ಕರ್ ಅವರ ಬಗ್ಗೆ ಲಘುವಾಗಿ ಮಾತನಾಡುವುದು ಅಹಸನೀಯ. ಬೇಷರತ್ತಾಗಿ ದೇಶದ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚುಂಚೇಗೌಡ, ಸದಸ್ಯ ಅಂಜನಮೂರ್ತಿ, ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಸಂಚಾಲಕ ಆದಿತ್ಯ ನಾಗೇಶ್, ನಗರಸಭಾ ಸದಸ್ಯ ಆನಂದ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎಚ್.ಎಸ್.ರೇವತಿ, ಮುಖಂಡರಾದ ಬಿ.ಜಿ.ಹೇಮಂತ್‌ಕುಮಾರ್, ಅಖಿಲೇಶ್, ಮಂಜುನಾಥ್, ಬಷೀರ್, ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಮುಖಂಡರು ಭಾಗವಹಿಸಿದ್ದರು. ತಹಶೀಲ್ದಾರ್ ಮೂಲಕ ಹಕ್ಕೊತ್ತಾಯ ಪತ್ರವನ್ನು ಕೇಂದ್ರ ಸರ್ಕಾರ ಹಾಗೂ ರಾಷ್ಟ್ರಪತಿಗಳಿಗೆ ಸಲ್ಲಿಸಲಾಯಿತು.