ಕುದುರೆಡವು ಗ್ರಾಮದಲ್ಲಿ ಓಬವ್ವಳ ವಂಶಸ್ಥರು

KannadaprabhaNewsNetwork |  
Published : Feb 25, 2024, 01:47 AM IST
 ಒನಕೆ ಓಬವ್ವಳ ವಂಶಸ್ಥರು ಇರುವ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಸಮೀಪದ ಕುದುರೆಡವು ಗ್ರಾಮದ ನೋಟ | Kannada Prabha

ಸಾರಾಂಶ

ವೀರ ಮಹಿಳೆ ಒನಕೆ ಓಬವ್ವಳ ತವರುಮನೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ. ಪಾಳೇಗಾರರ ಆಳ್ವಿಕೆ ಆನಂತರ ಒನಕೆ ಓಬವ್ವನ ವಂಶಸ್ಥರು ಕುದುರೆಡವು ಎನ್ನುವ ಗ್ರಾಮಕ್ಕೆ ಹೋಗಿ ನೆಲೆಸಿದ್ದಾರೆ. ಗುಡೇಕೋಟೆ ಉತ್ಸವದ ಹಿನ್ನೆಲೆಯಲ್ಲಿ ಒನಕೆ ಓಬವ್ವ ವಂಶಸ್ಥರ ಕುರಿತು ಮಾಹಿತಿ ಇಲ್ಲಿದೆ.

ಭೀಮಣ್ಣ ಗಜಾಪುರ

ಕೂಡ್ಲಿಗಿ: ನಾಡು ಕಂಡ ವೀರ ಮಹಿಳೆ ಒನಕೆ ಓಬವ್ವಳ ತವರುಮನೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ. ಪಾಳೇಗಾರರ ಆಳ್ವಿಕೆ ಆನಂತರ ಗುಡೇಕೋಟೆಯಲ್ಲಿದ್ದ ಒನಕೆ ಓಬವ್ವನ ವಂಶಸ್ಥರು ಕಾಲಕ್ರಮೇಣ ಗುಡೇಕೋಟೆಯಿಂದ 5 ಕಿ.ಮೀ. ದೂರ ಇರುವ ಕುದುರೆಡವು ಎನ್ನುವ ಗ್ರಾಮಕ್ಕೆ ಹೋಗಿ ನೆಲೆಸಿದ್ದಾರೆ.

15ಕ್ಕೂ ಹೆಚ್ಚು ಜನರು ಈಗಲೂ ಕೖಷಿಯ ಜತೆಗೆ ಕಹಳೆ ಊದುವ ಕಾಯಕ ಮಾಡುತ್ತಿದ್ದಾರೆ. ಪಾಳೆಗಾರರು ನೀಡಿದ ಜಮೀನಲ್ಲಿ ಉಳುಮೆ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಪಾಳೇಗಾರರ ಕುದುರೆ ಮೇಯಿಸುವ, ಕುದುರೆ ಕಟ್ಟುವ ಸ್ಥಳ ಇದಾಗಿತ್ತು. ಹೀಗಾಗಿ ಕುದುರೆಡವು ಗುಡೇಕೋಟೆ ಪಾಳೆಗಾರರ ಒಂದು ಭಾಗವಾಗಿತ್ತು.

ಗುಡೇಕೋಟೆಯಿಂದ ಕೂಡ್ಲಿಗಿಗೆ ಬರುವ ರಸ್ತೆಯಲ್ಲಿ 5 ಕಿ.ಮೀ. ಕ್ರಮಿಸಿದರೆ ಬಲಗಡೆಗೆ ರಾಮದುರ್ಗದ ಕೆರೆ ಕಾಣುತ್ತದೆ. ಕೆರೆಯ ಅಂಚಿನಲ್ಲಿಯೇ ಬಲಗಡೆಗೆ ಕ್ರಾಸ್ ಬರುತ್ತದೆ ಅದೇ ಕುದುರೆಡವು ಕ್ರಾಸ್. ಅಲ್ಲಿಂದ 2 ಕಿ.ಮೀ. ಕ್ರಮಿಸಿದರೆ ಕುದುರೆಡವು ಗ್ರಾಮ ಸಿಗುತ್ತದೆ. ಈಗಾಗಲೇ ಓಬವ್ವಳ ನಂತರ 6-7 ತಲೆಮಾರು ಕಳೆದಿದ್ದರಿಂದ ಇವರ ವಂಶಸ್ಥರಿಗೆ ಓಬವ್ವಳ ವಂಶವೃಕ್ಷದ ಬಗ್ಗೆಯೂ ಮಾಹಿತಿ ಸಿಗುವುದು ಕಷ್ಟಸಾಧ್ಯ. ಕುದುರೆಡವು ಸೇರಿದಂತೆ ಈ ಊರಿನ ಸುತ್ತಮುತ್ತಲ ಹಳ್ಳಿಗಳಿಗೆ ಹೆಣ್ಣುದೇವರ ಜಾತ್ರೆ, ಉತ್ಸವಗಳಿಗೆ ಕಹಳೆ ಊದಲೂ ಹೋಗುತ್ತಾರೆ. ಅವರು ಕೊಟ್ಟ ಪುಡಿಗಾಸಿನಿಂದಲೇ ಇವರು ಈಗಲೂ ಜೀವನ ಮಾಡುತ್ತಿದ್ದಾರೆ. ಗ್ರಾಮದಲ್ಲಿ ಓಬವ್ವನ ಒಂದು ಮೂರ್ತಿಯೂ ಇಲ್ಲ. ಓಬವ್ವನ ತವರುಮನೆ ವಂಶಸ್ಥರ ಬದುಕಿಗೆ ಬೆಳಕು ನೀಡುವಂತ ಗುಡೇಕೋಟೆ ಉತ್ಸವ ಇದೇ ಮೊದಲ ಬಾರಿಕೆ ಸರ್ಕಾರ ಆಚರಿಸಲು ಮುಂದಾಗಿರುವುದು ಒನಕೆ ಓಬವ್ವಳ ವಂಶಸ್ಥರೊಬ್ಬರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಸನ್ಮಾನಿಸುತ್ತಿರುವುದರಿಂದ ಇವರ ಜೀವನದಲ್ಲಿ ಆಶಾಭಾವನೆ ಮೂಡಿದೆ.

ವೃತ್ತಕ್ಕೆ ಓಬವ್ವನ ಹೆಸರಿಡಿ: ಚಿತ್ರದುರ್ಗದಲ್ಲಿ ಓಬವ್ವಳಿಗೆ ಮುಖ್ಯಸ್ಥಳದಲ್ಲಿಯೇ ಗೌರವ ಸಲ್ಲಿಸಲಾಗಿದೆ. ಅದೇ ರೀತಿ ಕೂಡ್ಲಿಗಿ ತಾಲೂಕಿನ ಮನೆಮಗಳಾಗಿರುವ ಓಬವ್ವಳಿಗೆ ಗುಡೇಕೋಟೆ ಹಾಗೂ ಕೂಡ್ಲಿಗಿ ತಾಲೂಕು ಕೇಂದ್ರದಲ್ಲಿ ಒಂದು ವೃತ್ತಕ್ಕೆ ಹೆಸರನ್ನು ಇಟ್ಟು, ಅಲ್ಲಿ ಓಬವ್ವಳ ಮೂರ್ತಿ ಮಾಡುವ ಮೂಲಕ ಇಂದಿನ ಯುವಪೀಳಿಗೆಗೆ ವಿದ್ಯಾರ್ಥಿಗಳಿಗೆ ಒನಕೆ ಓಬವ್ವನ ಇತಿಹಾಸವನ್ನು ನೆನಪು ಮಾಡುವ ಕಾರ್ಯ ಆಗಬೇಕಿದೆ ಎನ್ನುತ್ತಾರೆ ಗುಡೇಕೋಟೆಯ ಉಪನ್ಯಾಸಕ ಡಾ. ಎಂ. ರಾಜಣ್ಣ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ