ಕನ್ನಡಪ್ರಭ ವಾರ್ತೆ ಮೈಸೂರುಇತ್ತೀಚಿನ ದಿನಗಳಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದು ಹೆಚ್ಚು ರಾರಾಜಿಸುತ್ತಿದೆ. ವಿವೇಕಕ್ಕಿಂತ ಅವಿವೇಕವೇ ಗೋಚರಿಸುತ್ತದೆ ಎಂದು ಸಾಹಿತಿ ಪ್ರೊ. ಕಾಳೇಗೌಡ ನಾಗವಾರ ಹೇಳಿದರು.ದೇಸಿರಂಗ ಸಾಂಸ್ಕೃತಿಕ ಟ್ರಸ್ಟ್ ಕಲಾಮಂದಿರ ಎದುರಿನ ಚಿಂತನಾ ಚಾವಡಿಯಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ರಂಗ ಮತ್ತು ನೃತ್ಯ ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ವೈಚಾರಿಕ ಹಿನ್ನೆಲೆ ರಾಜ್ಯಕ್ಕೆ ಇದೆ. ಜಾತ್ಯತೀತ ತತ್ವಕ್ಕೆ ಮೊದಲಿನಿಂದಲೂ ಹೆಸರಾಗಿದೆ. ಸಂವೇದನಾಶೀಲತೆಯೂ ಇದೆ. ಹಗಲು ದುಡಿಮೆ ನಂತರ ಕಲೆ ಕೇಂದ್ರೀಕರಣಗೊಂಡಿರುವ ನಾಡು ನಮ್ಮದು. ಆದರೀಗ ಒಳ್ಳೆಯದಕ್ಕಿಂತ ಕೆಟ್ಟದ್ದು ಹೆಚ್ಚು ರಾರಾಜಿಸುತ್ತಿದೆ. ವಿವೇಕಕ್ಕಿಂತ ಅವಿವೇಕವೇ ಗೋಚರವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.ಬುದ್ಧ, ಅಂಬೇಡ್ಕರ್ ಕುರಿತು ಓದಿಕೊಂಡು ಅವರ ವಿಚಾರಧಾರೆಯನ್ನು ಪ್ರತಿಯೊಬ್ಬರೂ ಅರ್ಥೈಸಿಕೊಳ್ಳಬೇಕು. ಬುದ್ಧನ ಉಪದೇಶಗಳು ಸರಳ ಭಾಷೆಯಲ್ಲಿ ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಇದೆ. ಶಾಂತಿಯುತ ಮತ್ತು ನೈತಿಕ ಜೀವನಕ್ಕೆ ದಾರಿದೀಪವಾಗಿದೆ ಎಂದು ಹೇಳಿದರು.ದೇಶಕ್ಕೆ ಶ್ರೇಷ್ಠ ಸಂವಿಧಾನ ನೀಡಿದ ಅಂಬೇಡ್ಕರ್ ಅವರನ್ನು ಇಡೀ ಜಗತ್ತು ಗೌರವಿಸುತ್ತದೆ. ಅವರ ವಿದ್ವತ್, ಜ್ಞಾನಕ್ಕೆ ತಲೆದೂಗುತ್ತದೆ. ವಿಶ್ವ ಸಂಸ್ಥೆ ಘೋಷಿಸಿರುವಂತೆ ಅವರ ಜಯಂತಿಯನ್ನು ವಿಶ್ವ ಜ್ಞಾನ ದಿನವಾಗಿ ಎಲ್ಲೆಡೆ ಆಚರಣೆ ಮಾಡಲಾಗುತ್ತದೆ. ಆದರೆ, ನಮ್ಮಲ್ಲಿ ಈಗಲೂ ಅವರಿಗೆ ದೊರೆಯಬೇಕಾದ ಗೌರವ ದೊರೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಮುಖ್ಯಸ್ಥೆ ಡಾ.ಬಿ. ಸುಜಾತಾ, ಅಖಿಲ ಕರ್ನಾಟಕ ಮಹಿಳಾ ನೌಕರರ ಸಂಘದ ಅಧ್ಯಕ್ಷೆ ಡಾ. ಕಾವೇರಿ ಪ್ರಕಾಶ್, ಪ್ರಾಧ್ಯಾಪಕಿ ಪ್ರೊ.ವಿಜಯಲಕ್ಷ್ಮೀ ಮನಾಪುರ, ಟ್ರಸ್ಟ್ ಅಧ್ಯಕ್ಷ ಕೃಷ್ಣ ಜನಮನ ಇದ್ದರು.