)
ಆತ್ಮಭೂಷಣ್‌ಕನ್ನಡಪ್ರಭ ವಾರ್ತೆ ಮಂಗಳೂರು
ಉನ್ನತ ಶಿಕ್ಷಣ ಇಲಾಖೆಯಲ್ಲಿ ಸರ್ಕಾರಿ ನೌಕರರು ವ್ಯಾಸೆಕ್ಟಮಿ ಹಾಗೂ ಟ್ಯುಬೋಕ್ಟ್ಯಮಿಯಂತಹ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಗಾದರೆ ಅವರಿಗೆ ಪ್ರತ್ಯೇಕ ಸೌಲಭ್ಯ ನೀಡುವುದು ಕ್ರಮ. ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಿದವರಿಗೆ ಶೇ.3ರಷ್ಟು ಸಣ್ಣ ಕುಟುಂಬ ನಿಯಂತ್ರಣ ಭತ್ಯೆ/ವಿಶೇಷ ವೇತನ ಬಡ್ತಿಯನ್ನು ನೀಡಲಾಗುತ್ತಿತ್ತು. ಆದರೆ, ಕಳೆದ 9 ವರ್ಷಗಳಿಂದ ಈ ಸೌಲಭ್ಯಕ್ಕೆ ಕೊಕ್ಕೆ ಹಾಕಲಾಗಿದೆ.
ಉನ್ನತ ಶಿಕ್ಷಣ ನೌಕರರಲ್ಲಿ ಯುಜಿಸಿ ವೇತನ ಪಡೆಯುವವರೂ ಇದ್ದಾರೆ. ಇವರೆಲ್ಲರಿಗೆ 2015ರ ವರೆಗೆ ಈ ಪ್ರತ್ಯೇಕ ಸೌಲಭ್ಯ ನೀಡಲಾಗುತ್ತಿತ್ತು. ಹೀಗಾಗಿಯೇ ಅನೇಕ ಮಂದಿ ಪುರುಷ ಹಾಗೂ ಮಹಿಳಾ ನೌಕರರು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿ ಸೌಲಭ್ಯ ಪಡೆದುಕೊಂಡಿದ್ದರು. ಸಣ್ಣ ಕುಟುಂಬ ನಿಯಂತ್ರಣ ಭತ್ಯೆ/ವಿಶೇಷ ವೇತನ ಬಡ್ತಿಯನ್ನು ನಿಯಮಿತವಾಗಿ ಪಡೆದುಕೊಳ್ಳುತ್ತಿದ್ದರು.ಗೊಂದಲ ಮಾಡಿಕೊಂಡ ಇಲಾಖೆ:
2015ರ ವರೆಗೂ ನಿಯಮಿತವಾಗಿ ಈ ಪ್ರತ್ಯೇಕ ಸೌಲಭ್ಯವನ್ನು ನೀಡುತ್ತಿದ್ದ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು 2016ರಲ್ಲಿ ಏಕಾಏಕಿ ಗೊಂದಲಕ್ಕೆ ಬಿದ್ದಿದ್ದಾರೆ. ಉನ್ನತ ಶಿಕ್ಷಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರ್ಹ ಅಧ್ಯಾಪಕರಿಗೆ ಈ ಯೋಜನೆಯನ್ನು ಹೇಗೆ ಜಾರಿಗೊಳಿಸಬೇಕು ಎಂದು ಬೆಂಗಳೂರಿನ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯಿಂದ ರಾಜ್ಯದ ಎಲ್ಲ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರಿಗೆ ಪತ್ರ ಬರೆದು ಮಾಹಿತಿ ಕೇಳಿದ್ದಾರೆ.ಹಾಲಿ ಜಾರಿಯಲ್ಲಿರುವ ಯುಜಿಸಿ ನಿಯಮಗಳಲ್ಲಿ ನೀಡಿರುವ ಸೂಚನೆಯ ಅನ್ವಯ ಜಾರಿಗೊಳಿಸಬೇಕೇ ಅಥವಾ ಕೇಂದ್ರ ಸರ್ಕಾರಿ ನೌಕರರಿಗೆ ಮಂಜೂರು ಮಾಡುವ ಸಣ್ಣ ಕುಟುಂಬ ವಿಶೇಷ ವೇತನ ಬಡ್ತಿಯ ದರಗಳಲ್ಲಿ ಮಂಜೂರು ಮಾಡಬೇಕೇ ಅಥವಾ ಈ ಹಿಂದೆ ಇಲಾಖೆಯಲ್ಲಿ ಈ ಭತ್ಯೆಯನ್ನು ಮಂಜೂರು ಮಾಡುತ್ತಿರುವ ಕ್ರಮವನ್ನು ಮುಂದುವರಿಸಬೇಕೇ ಎಂದು ಸರ್ಕಾರದ ಮಾರ್ಗದರ್ಶನ ಕೋರಲಾಗಿದೆ. ಈ ಬಗ್ಗೆ ಇಲಾಖೆಯ ಅಧಿಕಾರಿಗಳು 2022ರಲ್ಲಿ ರಾಜ್ಯದ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರುಗಳಿಗೆ ಪತ್ರ ಬರೆದು ಕೋರಿದ್ದರು. ಅಲ್ಲದೆ, ಈ ಕುರಿತು ಸಿಬ್ಬಂದಿಗಳ ಮನವಿ ಪತ್ರ ಹಾಗೂ ಅಫಿಡವಿಟ್ ಸಲ್ಲಿಸುವಂತೆಯೂ ಸೂಚಿಸಿದ್ದರು.
9 ವರ್ಷವಾದರೂ ನಿರ್ಧಾರ ಇಲ್ಲ:ಸಣ್ಣ ಕುಟುಂಬ ನಿಯಂತ್ರಣ ಭತ್ಯೆ/ವಿಶೇಷ ವೇತನ ಬಡ್ತಿಯನ್ನು ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದೆ. ಕಳೆದ 9 ವರ್ಷಗಳಿಂದ ನಡೆಸುತ್ತಿದ್ದ ಹೋರಾಟಕ್ಕೆ ಇನ್ನೂ ಫಲ ಸಿಕ್ಕಿಲ್ಲ.
ಯುಜಿಸಿ ನಿಯಮಾವಳಿಯಲ್ಲಿ ಕೂಡ ವಿಶೇಷ ಸೌಲ್ಯ ನೀಡುವಂತೆ ಸೂಚನೆ ಇದ್ದರೂ ಇಲಾಖೆಯಿಂದ ಪಾಲನೆಯಾಗುತ್ತಿಲ್ಲ. ಈ ಬಗ್ಗೆ ಸೂಕ್ತ ದಾಖಲೆಗಳನ್ನು ನೀಡಿ ಸರ್ಕಾರಕ್ಕೆ ಮನವಿ ಮಾಡಿದರೂ ನಿರಾಕರಿಸಲಾಗುತ್ತಿದೆ. ಆದರೆ, ಸರ್ಕಾರದ ಇತರ ಇಲಾಖೆಗಳಲ್ಲಿ ಈ ಬಡ್ತಿ ಅಥವಾ ಭತ್ಯೆಯನ್ನು ನೀಡುವುದರಲ್ಲಿ ಯಾವುದೇ ತೊಂದರೆಯಾಗಿಲ್ಲ ಎಂದು ನೊಂದ ನೌಕರರು ಹೇಳುತ್ತಿದ್ದಾರೆ.----ಸಿಗದ ಉತ್ತರ
ಸರ್ಕಾರದ ಮಾರ್ಗದರ್ಶನ ಪಡೆಯುವಂತೆ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಪತ್ರ ಬರೆದು ವರ್ಷಗಳೇ ಕಳೆದರೂ ಉತ್ತರ ಪಡೆಯದೆ, ಇತ್ತ ಬಡ್ತಿಯನ್ನೂ ನೀಡದೆ ಕಾಲಹರಣ ಮಾಡುತ್ತಿದ್ದಾರೆ.- ನೊಂದ ನೌಕರರು, ಬೆಂಗಳೂರು.