ಕಲ್ಯಾಣ ಕರ್ನಾಟಕ ನಾಡು ಈಗ ಗಾಂಜಾ ನೆಲೆವೀಡು

KannadaprabhaNewsNetwork |  
Published : Dec 14, 2025, 03:00 AM IST
ಗಾಂಜಾ | Kannada Prabha

ಸಾರಾಂಶ

ಕಲಬುರಗಿ ಕೇಂದ್ರವಾಗಿರುವ ರಾಜ್ಯದ ಈಶಾನ್ಯದಲ್ಲಿರುವ ಕಲ್ಯಾಣ ಕರ್ನಾಟಕದಲ್ಲಿ ವರ್ಷದಿಂದ ವರ್ಷಕ್ಕೆ ಗಾಂಜಾ ಘಾಟು ಹೆಚ್ಚುತ್ತಿದೆ.

ಶೇಷಮೂರ್ತಿ ಅವಧಾನಿಕನ್ನಡಪ್ರಭ ವಾರ್ತೆ ಕಲಬುರಗಿಕಲಬುರಗಿ ಕೇಂದ್ರವಾಗಿರುವ ರಾಜ್ಯದ ಈಶಾನ್ಯದಲ್ಲಿರುವ ಕಲ್ಯಾಣ ಕರ್ನಾಟಕದಲ್ಲಿ ವರ್ಷದಿಂದ ವರ್ಷಕ್ಕೆ ಗಾಂಜಾ ಘಾಟು ಹೆಚ್ಚುತ್ತಿದ್ದು, ಕಲ್ಯಾಣ ನಾಡಿನ ಜಿಲ್ಲೆಗಳು ‘ಗಾಂಜಾ ಹಾಟ್‌ಸ್ಪಾಟ್‌’ ಎನಿಸುತ್ತಿವೆ. ಸ್ಥಳೀಯವಾಗಿ ಯುವಜನಾಂಗದಲ್ಲಿ ಗಾಂಜಾ ಬಳಕೆ ಹೆಚ್ಚುತ್ತಿರೋದು ಒಂದೆಡೆಯಾದರೆ, ಕಲ್ಯಾಣದ ಹೆಬ್ಬಾಗಿಲು ಕಲಬುರಗಿ ಹಾಗೂ ಬೀದರ್‌, ಗಾಂಜಾ ಕಳ್ಳಸಾಗಾಟಕ್ಕೆ ಸ್ಲೀಪಿಂಗ್‌ ಸೆಲ್‌ ರೀತಿಯಲ್ಲಿ ಕೆಲಸ ಮಾಡುತ್ತಿರೋದು ಬಹುದೊಡ್ಡ ಆತಂಕ ಹುಟ್ಟು ಹಾಕಿದೆ.ಅನ್ಯರಾಜ್ಯಗಳಿಂದ ಬರುವ ಗಾಂಜಾ ಕಲಬುರಗಿ, ಬೀದರ್‌ನಲ್ಲಿ ರಹಸ್ಯವಾಗಿ ಹಲವು ಹತ್ತು ರೂಪಗಳಲ್ಲಿ ದಾಸ್ತಾನುಗೊಂಡು ಇಲ್ಲಿಂದ ಆಂಧ್ರ, ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳಿಗೆ ಪೂರೈಕೆಯಾಗುತ್ತಿದೆ.2020ರಲ್ಲಿ ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸರು ಕಲಬುರಗಿ ಜಿಲ್ಲೆಯ ಕಾಳಗಿ ಠಾಣೆ ವ್ಯಾಪ್ತಿಯಲ್ಲಿನ ತಾಂಡಾವೊಂದರ ಕೋಳಿ ಶೆಡ್‌ನಲ್ಲಿ ಪತ್ತೆಮಾಡಿದ ಸುಮಾರು 6 ಕೋಟಿ ಮೌಲ್ಯದ ಸಾವಿರ ಕೆಜಿಗೂ ಅಧಿಕ ಗಾಂಜಾ ದಾಸ್ತಾನಿಂದಲೇ ಕಲಬುರಗಿ, ಬೀದರ್‌ ಸೇರಿದಂತೆ ಬಿಸಿಲೂರಲ್ಲಿನ ಗಾಂಜಾ ಕಳವಿನ ದಾಸ್ತಾನು ಬಗ್ಗೆ ಹೊರಜಗತ್ತಿಗೆ ಮೊದಲ ಬಾರಿಗೆ ಗೊತ್ತಾಗಿದ್ದು ಎನ್ನಬಹುದು.ಯುವ ಸಮೂಹವೇ ಗುರಿ:ಯುವ ಸಮೂಹವೇ ಗಾಂಜಾ ಪೂರೈಕೆದಾರರ ಗುರಿ. ಜೊತೆಗೆ, ಇಲ್ಲಿಂದ ಸಾಗಾಟವಾಗುವ ಗಾಂಜಾ, ಪಕ್ಕದ ಮಹಾರಾಷ್ಟ್ರ, ತೆಲಂಗಾಣ, ಆಂಧ್ರ, ದೂರದ ಓಡಿಶಾ ರಾಜ್ಯಗಳಿಗೂ ರವಾನೆಯಾಗುತ್ತಿದೆ. ಕುರಿದೊಡ್ಡಿ, ತಲೆದಿಂಬು, ಔಷಧಿ ಪ್ಯಾಕೇಟ್‌ ಗಳಲ್ಲಿ ಮಾದಕ ವಸ್ತುವನ್ನು ದಾಸ್ತಾನು ಮಾಡಲಾಗುತ್ತದೆ. ಅದಾಗಲೇ ಉತ್ತರ ಭಾರತದ ರಾಜ್ಯಗಳಲ್ಲಿ ಸುದ್ದಿಯಾಗಿರುವ ಗಾಂಜಾ ಮಿಶ್ರಿತ ಚಾಕೋಲೇಟ್‌ಗಳು ಇದೀಗ ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಗಳ ಯುವಕರ ಕೈ ಸೇರಿವೆ. ಕಳೆದ 2 ವರ್ಷದಿಂದ ಗಾಂಜಾ ಲೇಪಿತ ಚಾಕೋಲೇಟ್‌ಗಳ ಪ್ರಕರಣಗಳಲ್ಲಿ ಹೆಚ್ಚಳವಾಗುತ್ತಿದೆ.ಉತ್ತರ ಪ್ರದೇಶದಿಂದ ಗಾಂಜಾವನ್ನು ತಂದು ಚಾಕೋಲೇಟ್‌ ಮಾಡಿ ಇಲ್ಲಿ ಮಾರಾಟ ಮಾಡುತ್ತಿರುವ ಸಂಗತಿ ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಜಾಲಕ್ಕೆ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಬಲಿಯಾಗುತ್ತಿದ್ದಾರೆ. ಮಕ್ಕಳು ತಿನ್ನುವ ಚಾಕೋಲೇಟ್ ಮಾದರಿಯಲ್ಲಿಯೇ ಗಾಂಜಾ ಚಾಕೋಲೇಟ್ ಸಿದ್ಧಪಡಿಸಿ ಪ್ರತಿ ಚಾಕೋಲೇಟ್ಗೆ 50 ರಿಂದ 60 ರೂ.ಯಂತೆ ಮಾರಾಟ ಮಾಡಲಾಗುತ್ತಿದೆ.ನಶೆಯಲ್ಲಿ ತೇಲುತ್ತಿರೋ ಕಲಬುರಗಿ!:ಸುಲಭದಲ್ಲಿ ಯುವಕರು, ಹೈಸ್ಕೂಲ್‌ ಮಕ್ಕಳ ಕೈಗೆ ಗಾಂಜಾ ದೊರಕುತ್ತಿರೋದರಿಂದ ಇಲ್ಲಿ ಗಾಂಜಾ ಸೇವನೆ ವ್ಯಸನಿಗಳ ಸಂಖ್ಯೆ ಹೆಚ್ಚುತ್ತಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದಲ್ಲಿ ಕಲಬುರಗಿ ನಗರ ಹಾಗೂ ಜಿಲ್ಲೆಯಲ್ಲಿ ಕಳೆದ 8 ತಿಂಗಳಲ್ಲಿ ಗಾಂಜಾ ಮಾರಾಟ, ಸೇವನೆಯ ಪ್ರಕರಣಗಳು ನಾಲ್ಕು ಪಟ್ಟು ಹೆಚ್ಚಿವೆ. ಕಲಬುರಗಿಯಲ್ಲಿ 2023ರಲ್ಲಿ 51, 2024ರಲ್ಲಿ 53 ಹಾಗೂ 2025ರ ಏಪ್ರಿಲ್‌ವರೆಗೆ 183 ಪ್ರಕರಣಗಳು ದಾಖಲಾಗಿದ್ದು, ಮಾದಕ ವಸ್ತುಗಳ ಜಪ್ತಿಯಲ್ಲೂ ಏರುಗತಿ ಕಂಡಿದೆ. 400ಕ್ಕೂ ಹೆಚ್ಚು ಗಾಂಜಾ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ.2022ರಲ್ಲಿ ಕಲಬುರಗಿ ಪೊಲೀಸರು ಮಹಾರಾಷ್ಟ್ರ ಗಡಿಯಲ್ಲಿರುವ ಉಮ್ಮರ್ಗಾ ತಾಲೂಕಿನ ತರೂರಿ ಎಂಬಲ್ಲಿರುವ ಗಾಂಜಾ ಮಾಫಿಯಾ ಮಟ್ಟ ಹಾಕಲು ತೆರಳಿದ್ದಾಗ ಅಲ್ಲಿನ ಗಾಂಜಾ ಗ್ಯಾಂಗ್‌, ಪೊಲೀಸರ ಮೇಲೆಯೇ ದಾಳಿ ಮಾಡಿತ್ತು. ಆ ಸಂದರ್ಭದಲ್ಲಿ ಡಿವೈಎಸ್ಪಿ ಶ್ರೀಮಂತ ಇಲ್ಲಾಳ್‌ ತೀವ್ರವಾಗಿ ಗಾಯಗೊಂಡು 6 ತಿಂಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ್ದರು......ಬಾಕ್ಸ್‌......ಅನ್ಯ ರಾಜ್ಯಗಳಿಂದ ಬರುವ ಗಾಂಜಾ ಕಲ್ಯಾಣದ ಜಿಲ್ಲೆಗಳಲ್ಲಿ ಸ್ಟಾಕ್‌ ಕಲಬುರಗಿ, ಬೀದರ್‌, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳು ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಗಡಿ ಹಂಚಿಕೊಂಡಿರುವುದರಿಂದ ಇಲ್ಲಿ ಡ್ರಗ್ಸ್‌ ಮಾಫಿಯಾ ಸಲೀಸಾಗಿ ಚಿಗುರುತ್ತಿದೆ. ಅದರಲ್ಲೂ ಕಲಬುರಗಿ ಜಿಲ್ಲೆಯ ಚಿಂಚೋಳಿ, ಕಾಳಗಿ, ಕಲಬುರಗಿ, ಬೀದರ್‌ನ ಔರಾದ್ ಸೇರಿ ಗಡಿ ತಾಲೂಕುಗಳು, ಯಾದಗಿರಿ, ರಾಯಚೂರಿನ ಸಿಂಧನೂರ, ರಾಯಚೂರ ಇಲ್ಲೆಲ್ಲಾ ಗಾಂಜಾ ಮಾಫಿಯಾದ ರಹಸ್ಯ ಕಾರ್ಯಾಚರಣೆಗೆ ನಿಯಂತ್ರಣವೇ ಇಲ್ಲದಂತಾಗಿದೆ. ಗಾಂಜಾ ದಾಸ್ತಾನು ಸಾಗಿಸಲು ರಸ್ತೆ, ರೈಲು ಸಂಪರ್ಕ ಯಥೇಚ್ಛವಾಗಿರುವ ಕಲಬುರಗಿ, ಬೀದರ್‌ ಜಿಲ್ಲೆಗಳು ಗಾಂಜಾ ಮಾಫಿಯಾಕ್ಕೆ ಹಾಟ್‌ ಫೆವರೀಟ್‌ ಆಗಿವೆ.ಇಲ್ಲಿನ ಗುಡ್ಡಗಾಡಲ್ಲೇ ಗಾಂಜಾ ಬೆಳೆದು ಮಾರಾಟ ಮಾಡುತ್ತಿರುವ ಗುಮಾನಿಯೂ ಇದೆ. ಪೊಲೀಸರ ಪ್ರಕಾರ, ಕಲ್ಯಾಣದ ಜಿಲ್ಲೆಗಳಲ್ಲಿ ಪತ್ತೆಯಾಗಿರುವ ಗಾಂಜಾ ಪ್ರಕರಣಗಳ ಮೂಲ ಓಡಿಶಾ, ಮಹಾರಾಷ್ಟ್ರ, ಈಶಾನ್ಯದ ರಾಜ್ಯಗಳಲ್ಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ