ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ತಾಲೂಕು ಕಚೇರಿ ನ್ಯಾಯಾಲಯದ ಸಭಾಂಗಣದಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಪಲ್ಸ್ ಪೋಲಿಯೋ ಚಾಲನಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತ ಪೋಲಿಯೋ ಮುಕ್ತ ದೇಶವಾಗಿದೆ. ಆದರೆ ಕೆಲ ದೇಶಗಳಲ್ಲಿ ಪೋಲಿಯೋ ಇನ್ನೂ ಭೀತಿಯನ್ನುಂಟುಮಾಡುತ್ತಿದ್ದು, ನಮ್ಮ ದೇಶದಲ್ಲೂ ಮರುಕಳಿಸುವ ಸಾಧ್ಯತೆ ಇದೆ. ಆದ್ದರಿಂದ ಐದು ವರ್ಷದೊಳಗಿನ ಯಾವುದೇ ಮಗು ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಆಶಾಲತಾ ಮಾತನಾಡಿ, ತಾಲೂಕಿನಾದ್ಯಂತ ಐದು ವರ್ಷದೊಳಗಿನ 9,764 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಡಿ.21 ರಂದು ಬೂತ್ ಮಟ್ಟದಲ್ಲಿ ಮಕ್ಕಳಿಗೆ ಲಸಿಕೆ ಹಾಕಲಾಗುತ್ತದೆ. ನಂತರ ಡಿ. 22 ರಿಂದ 23ರವರೆಗೆ ಗ್ರಾಮೀಣ ಪ್ರದೇಶದಲ್ಲಿ ಹಾಗೂ ಡಿ.22 ರಿಂದ 24ರವರೆಗೆ ನಗರ ಪ್ರದೇಶಗಳಲ್ಲಿ ಪಲ್ಸ್ ಪೋಲಿಯೋ ತಂಡ ಮನೆ ಮನೆ ಭೇಟಿ ನೀಡಿ ಲಸಿಕೆಯಿಂದ ಹೊರಗುಳಿದ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಗುತ್ತದೆ ಎಂದರು.ಶ್ರೀರಂಗನಾಥ ದೇವಸ್ಥಾನ, ನಿಮಿಷಾಂಭೆ ದೇವಸ್ಥಾನ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ರೈಲು ನಿಲ್ದಾಣ, ರಂಗನತಿಟ್ಟು, ಕೆ ಆರ್ ಎಸ್ ಬೃಂದಾವನ ಗಾರ್ಡನ್, ಗಣಂಗೂರ್ ಟೋಲ್ ಸೇರಿದಂತೆ ಪಲ್ಸ್ ಪೋಲಿಯೋ ಬೂತ್ ಗಳನ್ನು ತೆರೆಯಲಾಗಿದೆ. ಆದ್ದರಿಂದ ಪಾಲಕರು ನಿಗದಿತ ದಿನದಂದು ತಮ್ಮ ಐದು ವರ್ಷದವರೆಗಿನ ಮಕ್ಕಳಿಗೆ ತಪ್ಪದೇ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಬೇಕೆಂದು ಮನವಿ ಮಾಡಿದರು.
ಈ ವೇಳೆ ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ವಿಜಯಲಕ್ಷ್ಮೀ, ತಾಪಂ ಪ್ಲಾನಿಂಗ್ ಆಫೀಸರ್ ಎಂ.ಎಂ ತ್ರಿವೇಣಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಬಿ ಹೇಮಣ್ಣ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಅಭಿನಂದನ್, ನಮ್ಮ ಕ್ಲಿನಿಕ್ ಆರೋಗ್ಯ ನಿರೀಕ್ಷಣಾಧಿಕಾರಿ ಮೇಘ, ಸ್ನೇಹ ಸೇರಿ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.