ಸೌಲಭ್ಯ ಇದ್ದರೂ ಹೈಟೆಕ್‌ ಸರ್ಕಾರಿ ಕಾಲೇಜು ದಾಖಲಾತಿ ಕುಸಿತ

KannadaprabhaNewsNetwork |  
Published : Jun 21, 2026, 02:30 AM IST
ರುದ್ರಾಂಬಾ ಎಂ.ಪಿ. ಪ್ರಕಾಶ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ | Kannada Prabha

ಸಾರಾಂಶ

ಪದವಿ ಕಾಲೇಜಿಗೆ ಸರ್ಕಾರದಿಂದ ಪ್ರಾಚಾರ್ಯ ಹುದ್ದೆ ಸೇರಿ 19 ಉಪನ್ಯಾಸಕರ ಹುದ್ದೆಗಳು ಮಂಜೂರಾಗಿವೆ.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ಪಟ್ಟಣದ ಶ್ರೀಮತಿ ರುದ್ರಾಂಬಾ ಎಂ.ಪಿ. ಪ್ರಕಾಶ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡಕ್ಕೆ ಹೈಟೆಕ್‌ ಸ್ಪರ್ಶ ನೀಡಿ ಎಲ್ಲ ರೀತಿಯ ಸೌಲಭ್ಯಗಳಿದ್ದರೂ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಮಾತ್ರ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಈ ಕಾಲೇಜಿನಲ್ಲಿ ಬಿಎ, ಬಿಕಾಂ, ಬಿಎಸ್ಸಿ, ಬಿಸಿಎ ಕೋರ್ಸ್‌ಗಳಿವೆ, ಉಳಿದಂತೆ ಇದೇ ಶೈಕ್ಷಣಿಕ ವರ್ಷಕ್ಕೆ ಬಿಬಿಎಂ, ಸಿಬಿಜೆಡ್‌ ಮತ್ತು ಮೈಕ್ರೊ ಬಯಾಲಜಿ ಕೋರ್ಸ್‌ ಮಂಜೂರಾಗುವ ಲಕ್ಷಣವಿದೆ. ಈ ಕಾಲೇಜಿನಲ್ಲಿ ಬಿಎ 142, ಬಿಕಾಂ 54, ಬಿಎಸ್ಸಿ 12, ಬಿಸಿಎ 2 ಸೇರಿ ಒಟ್ಟು 210 ವಿದ್ಯಾರ್ಥಿಗಳಿದ್ದಾರೆ. ಕಳೆದ ವರ್ಷ ಮೂರು ವಿಭಾಗಗಳು ಸೇರಿ 1130 ವಿದ್ಯಾರ್ಥಿಗಳಿದ್ದರು.

ಈ ಪದವಿ ಕಾಲೇಜಿಗೆ ಸರ್ಕಾರದಿಂದ ಪ್ರಾಚಾರ್ಯ ಹುದ್ದೆ ಸೇರಿ 19 ಉಪನ್ಯಾಸಕರ ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ ಪ್ರಾಚಾರ್ಯರ ಹುದ್ದೆ ಸೇರಿ ಭೌತಶಾಸ್ತ್ರ, ಶಿಕ್ಷಣ ಶಾಸ್ತ್ರ, ಅರ್ಥಶಾಸ್ತ್ರ ಮತ್ತು ಸಮಾಜ ಶಾಸ್ತ್ರ ಉಪನ್ಯಾಸಕ ಹುದ್ದೆಗಳು ಖಾಲಿ ಇವೆ. 16 ಬೋಧಕೇತರ ಸಿಬ್ಬಂದಿ ಹುದ್ದೆ ಮಂಜೂರಾಗಿದ್ದು, ಇದರಲ್ಲಿ ವ್ಯವಸ್ಥಾಪಕರು 1, ಅಧೀಕ್ಷಕರು 1, ಪ್ರಥಮ ದರ್ಜೆ ಗುಮಾಸ್ತ 1, ದ್ವಿತೀಯ ದರ್ಜೆ ಗುಮಾಸ್ತ 1, ಬೆರಳಚ್ಚುಗಾರ1, ಗ್ರಂಥಾಲಯ ಸಹಾಯಕ 1, ಅಟೆಂಡರ್‌ 5, ಪರಿಚಾರಕರು 5 ಸೇರಿ 15 ಹುದ್ದೆಗಳು ಖಾಲಿ ಇವೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಂಡಿದ್ದು, 29 ಅತಿಥಿ ಉಪನ್ಯಾಸಕರಿದ್ದಾರೆ. ಕಾಲೇಜಿನಲ್ಲಿ ತರಗತಿ ನಡೆಸಲು 28 ಕೊಠಡಿಗಳಿವೆ, ವಿವಿಧ ವಿಷಯಗಳಿಗೆ ಒಟ್ಟು 9 ಪ್ರಯೋಗಾಲಯಗಳಿವೆ. ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲೇ ಇಲ್ಲದಂತಹ ಸುಸಜ್ಜಿತ ಹೈಟೆಕ್‌ ಸಭಾಂಗಣ ವ್ಯವಸ್ಥೆ ಮಾಡಲಾಗಿದೆ. ಇಡೀ ಕಾಲೇಜಿಗೆ ಹೈಟೆಕ್‌ ಸ್ಪರ್ಶ ನೀಡಲಾಗಿದೆ. ಉತ್ತಮ ಗ್ರಂಥಾಲಯ, ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ ಸೇರಿದಂತೆ ಎಲ್ಲ ಮೂಲಭೂತ ಸೌಲಭ್ಯ ಕಲ್ಪಿಸಲಾಗಿದೆ.

ಕಳೆದ 2022-23ನೇ ಸಾಲಿನ ಶೈಕ್ಷಣದ ವರ್ಷದಲ್ಲಿ 2400 ವಿದ್ಯಾರ್ಥಿಗಳ ದಾಖಲಾತಿ ಇತ್ತು. ಆದರೆ, ಈಚಿಗೆ ಗಣನೀಯ ಪ್ರಮಾಣದಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕುಸಿತ ಕಾಣುತ್ತಿದೆ. ಉಪನ್ಯಾಸಕರು ತರಗತಿಗಳಿಗೆ ಸರಿಯಾಗಿ ಹೋಗುವುದಿಲ್ಲ. ಪಾಠ ಸರಿಯಾಗಿ ಮಾಡುತ್ತಿಲ್ಲ. ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವ ವಿದ್ಯಾಲಯದ ಅವೈಜ್ಞಾನಿಕ ಶೈಕ್ಷಣಿಕ ವೇಳಾಪಟ್ಟಿಯ ಕಾರಣ, ಸಾಕಷ್ಟು ವಿದ್ಯಾರ್ಥಿಗಳು ಬೇರೆ ಬೇರೆ ವಿವಿಗಳ ಕಾಲೇಜುಗಳಿಗೆ ದಾಖಲಾತಿ ಪಡೆಯುತ್ತಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ.

ವಿದ್ಯಾರ್ಥಿಗಳಿಗೆ ಆಟದ ಮೈದಾನವಿಲ್ಲ. ಪೀಠೋಪಕರಣಗಳು ಸಮರ್ಪಕವಾಗಿಲ್ಲ. ವಿದ್ಯಾರ್ಥಿಗಳಿಗೆ ರೀಡಿಂಗ್‌ ಡೆಸ್ಕ್‌ಗಳು ಇಲ್ಲ. ಕಾಲೇಜು ಕೊಠಡಿ ಮತ್ತು ಸಭಾಂಗಣಕ್ಕೆ ಸಮರ್ಪಕ ವಿದ್ಯುತ್‌ ಪೂರೈಕೆ ಮಾಡಲು 100 ಕೆವಿ ವಿದ್ಯುತ್‌ ಪರಿವರ್ಧಕ ಅಗತ್ಯವಿದೆ. ಕಾಲೇಜು ಪಟ್ಟಣದ ಹೊರ ವಲಯದಲ್ಲಿದ್ದು ಸಾರಿಗೆ ವ್ಯವಸ್ಥೆ ಇಲ್ಲ.

ಕಾಲೇಜಿನಲ್ಲಿ ಎಲ್ಲ ಮೂಲಭೂತ ಸೌಲಭ್ಯಗಳಿವೆ. ಸಿಡಿಎಂಸಿ ಮತ್ತು ಕಾಲೇಜು ಉಪನ್ಯಾಸಕರು ವಿವಿಧ ಕಾಲೇಜುಗಳಿವೆ ಹೋಗಿ, ದಾಖಲಾತಿ ಪ್ರಚಾರ ಮಾಡಿದ್ದೇವೆ. ವಿದ್ಯಾರ್ಥಿಗಳು ಹೆಚ್ಚು ವೃತ್ತಿ ಪರ ಕೋರ್ಸ್‌ಗಳತ್ತ ವಾಲುತ್ತಿದ್ದಾರೆ ಎನ್ನುತ್ತಾರೆ ಎಸ್‌ಆರ್‌ಎಂಪಿಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ವಿಜಯಕುಮಾರ.

ಕಾಲೇಜಿನ ಉಪನ್ಯಾಸಕರು ಸರಿಯಾಗಿ ಪಾಠ ಮಾಡುತ್ತಿಲ್ಲ. ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ಫಲಿತಾಂಶ ವಿಳಂಬ ಮತ್ತು ಗೊಂದಲ ಇರುವ ಕಾರಣ ವಿದ್ಯಾರ್ಥಿಗಳು ಬೇರೆ ವಿವಿಯ ಕಾಲೇಜುಗಳಿಗೆ ಹೋಗುತ್ತಿದ್ದಾರೆ ಎನ್ನುತ್ತಾರೆ ವಿದ್ಯಾರ್ಥಿಗಳು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಪಯೋಗ ಮಾಡದೆ ಪಾಳಬಿದ್ದ ಶೌಚಾಲಯಗಳು
ಭಟ್ಕಳ ಜಲದುರಂತದ ಸಂತ್ರಸ್ತ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣೆ