ಕನ್ನಡಪ್ರಭವಾರ್ತೆ ತೀರ್ಥಹಳ್ಳಿಭಾರತದಲ್ಲಿ ಸಾಕ್ಷರತೆ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಿದ್ದರೂ ಇನ್ನೂ ನೈತಿಕತೆಯ ಕೊರತೆಯಿದೆ. ಧರ್ಮಾಂಧತೆ ಸೇರಿದಂತೆ ಭ್ರಷ್ಟಾಚಾರ ಮುಂತಾದ ಸಮಾಜಕ್ಕೆ ಮಾರಕವಾಗಿರುವ ಬೆಳವಣಿಗೆ ವಿದ್ಯಾವಂತರಿಂದಲೇ ನಡೆಯುತ್ತಿದ್ದು, ಈ ಕುರಿತಂತೆ ಶಿಕ್ಷಣ ಸಂಸ್ಥೆಗಳು ಕಾಳಜಿ ವಹಿಸುವ ಅಗತ್ಯವಿದೆ ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅಭಿಪ್ರಾಯಪಟ್ಟರು.ಪಟ್ಟಣದ ಬೆಟ್ಟಮಕ್ಕಿ ಬಡಾವಣೆಯಲ್ಲಿ ಗುರುವಾರ ಸಂಜೆ ನಡೆದ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಸಹ್ಯಾದ್ರಿ-ಸಂಭ್ರಮದ ಸಾಂಸ್ಕೃತಿಕ ಸಂಜೆ ಸಮಾರಂಭವನ್ನು ಉದ್ಘಾಟಿಸಿ, ಮಕ್ಕಳ ಮನಸ್ಸನ್ನು ಕೆಡಿಸದಂತೆ ಜಾತಿಮತ ಭೇದವಿಲ್ಲದೇ ಹೃದಯವನ್ನು ಜೋಡಿಸುವ ಶಿಕ್ಷಣ ಅಗತ್ಯವಾಗಿದೆ. ಮಕ್ಕಳಿಗೆ ಹಿರಿಯರಾದ ನಾವುಗಳೇ ಮಾದರಿಯಾಗಬೇಕು. ವಿದ್ಯಾರ್ಥಿಗಳಿಗೆ ಪಾಠ ಹೇಳುವ ಶಿಕ್ಷಕರುಗಳು ಮಾತ್ರವಲ್ಲದೇ ಪೋಷಕರು ಕೂಡಾ ತಮ್ಮ ಮಕ್ಕಳಿಗೆ ಹಿತವಚನ ಹೇಳುವ ಜೊತೆಗೆ ಅವರ ನಡೆನುಡಿಯ ಬಗ್ಗೆ ತೀವ್ರ ಎಚ್ಚರಿಕೆ ವಹಿಸುವ ಅಗತ್ಯವೂ ಇದೆ ಎಂದು ಹೇಳಿದರು.ಪಪಂ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ ಮಾತನಾಡಿ, ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ನಡೆಯುತ್ತಿರುವ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಲಭಿಸುತ್ತಿದೆ. ಈ ಸಮುದಾಯದ ಕುವೆಂಪು ಕಡಿದಾಳು ಮಂಜಪ್ಪರಂತಹ ಮಹಾನ್ ವ್ಯಕ್ತಿಗಳು ಜನಿಸಿರುವ ಈ ನೆಲದ ಸಂಸ್ಕೃತಿಗೆ ಚ್ಯುತಿಯಾಗದಂತೆ ಮಾನವೀಯ ಕಳಕಳಿಯೊಂದಿಗೆ ಇತರರಿಗೆ ನಾವುಗಳು ಮಾದರಿಯಾಗಬೇಕಿದೆ. ಪಪಂ ವತಿಯಿಂದ ಪ್ರತಿಭಾವಂತರನ್ನು ಪುರಸ್ಕರಿಸಲಾಗುವುದು ಎಂದರು.ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಬಾಳೇಹಳ್ಳಿ ಪ್ರಭಾಕರ್ ಮಾತನಾಡಿ, ಕಳೆದ 35 ವರ್ಷಗಳಿಂದ ತಾಲೂಕಿನ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಹಿರಿಮೆಯನ್ನು ಮೆರೆದಿರುವ ಸಹ್ಯಾದ್ರಿ ಶಿಕ್ಷಣ ಸಂಸ್ಥೆ ಜಾತಿ ಮತದ ಭೇದವಿಲ್ಲದೇ ಗುಣಾತ್ಮಕ ಶಿಕ್ಷಣ, ಕ್ರೀಡೆ ಸಾಂಸ್ಕೃತಿಕ ಚಟುವಟಿಕೆ ಸೇರಿದಂತೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಜಿಲ್ಲೆಯನ್ನು ಮೀರಿ ತನ್ನ ಸಾಧನೆಯನ್ನು ಮೆರೆದಿದೆ ಎಂದು ತಿಳಿಸಿದರು.ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೆಶಕ ಚಂದ್ರಪ್ಪ ಎಸ್. ಗುಂಡಪಲ್ಲಿ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಪಂಡರಿನಾಥ್, ಜಿ.ಎನ್. ಪ್ರಕಾಶ್, ಪ್ರಾಂಶುಪಾಲರಾದ ಎಚ್.ಜಿ. ಗುರುರಾಜ್, ಆಗ್ನೆಸ್ ಮೆಂಡೋನ್ಸಾ ಇದ್ದರು. ಸಂಘದ ಉಪಾಧ್ಯಕ್ಷ ಚಂದವಳ್ಳಿ ಸೋಮಶೇಕರ್ ಸ್ವಾಗತಿಸಿದರು. ಸಹಕಾರ್ಯದರ್ಶಿ ಧನ್ಯಾ ಅಶ್ವಲ್ ವಂದಿಸಿದರು. ಮಳೆಯ ಆತಂಕದ ನಡುವೆಯೂ ಇಡೀ ಕ್ರೀಡಾಂಗಣ ಕಿಕ್ಕಿರಿದು ಜನರಿಂದ ತುಂಬಿದ್ದು, ಸುಮಾರು ನಾಲ್ಕೂವರೆ ಗಂಟೆಗಳ ಅವಧಿಯ ಕಾರ್ಯಕ್ರಮದಲ್ಲಿ ಸಹ್ಯಾದ್ರಿ ಶಾಲೆಯ ವಿದ್ಯಾರ್ಥಿಗಳು ಭಾರತೀಯ ಸಾಂಸ್ಕೃತಿಕ ಪರಂಪರೆಯ ಕಲಾ ಪ್ರಕಾರಗಳಾದ ಕೂಚುಪುಡಿ, ಮೋಹಿನಿಯಾಟ್ಟಂ, ಕಲೈರಿಫೈಟ್, ಒಡಿಸ್ಸಿ, ಬಂಜಾರ ಮುಂತಾದವುಗಳನ್ನು ಲೀಲಾಜಾಲವಾಗಿ ಪ್ರದರ್ಶಿಸುವ ಮೂಲಕ ಭಾರತೀಯ ಜಾನಪದ ಲೋಕದ ಶ್ರೀಮಂತ ಪರಂಪರೆಯನ್ನೇ ಅನಾವರಣಗೊಳಿಸಿದರು.