ಸಿರಿಧಾನ್ಯ ಬಳಸುವುದಕ್ಕೆ, ಬೆಳೆಯುವುದಕ್ಕೆ ಒತ್ತು ನೀಡಿ: ಡಿಸಿ ಡಾ. ಕೆ.ವಿದ್ಯಾಕುಮಾರಿ

KannadaprabhaNewsNetwork |  
Published : Dec 14, 2024, 12:45 AM IST
13ಸಿರಿ | Kannada Prabha

ಸಾರಾಂಶ

ರಜತಾದ್ರಿಯ ಜಂಟಿ ಕೃಷಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ ನಡೆಯಿತು.

ಜಿಲ್ಲಾಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ

ಕನ್ನಡಪ್ರಭ ವಾರ್ತೆ ಮಣಿಪಾಲ

ಸಿರಿಧಾನ್ಯಗಳನ್ನು ದೈನಂದಿನ ಆಹಾರ ಸೇವನೆಯಲ್ಲಿ ಬಳಕೆ ಮಾಡಿಕೊಂಡಲ್ಲಿ ಉತ್ತಮ ಆರೋಗ್ಯವನ್ನು ಹೊಂದಲು ಸಹಕಾರಿಯಾಗುವುದರಿಂದ ಅವುಗಳ ಬಳಕೆಗೆ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಕರೆ ನೀಡಿದರು.ಅವರು ಶುಕ್ರವಾರ ಇಲ್ಲಿನ ರಜತಾದ್ರಿಯ ಜಂಟಿ ಕೃಷಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.ಸಿರಿಧಾನ್ಯಗಳಾದ ರಾಗಿ, ನವಣೆ, ಸಾಮೆ, ಸಜ್ಜೆ, ಹಾರಕ, ಕೊರಲೆ, ಬರಗು, ಉದಲು ಹಾಗೂ ಜೋಳಗಳನ್ನು ನಮ್ಮ ಪೂರ್ವಜರು ಈ ಹಿಂದೆ ಪಾರಂಪರಿಕ ಕೃಷಿಯಾಗಿ ಸಾವಯವ ಗೊಬ್ಬರವನ್ನು ಉಪಯೋಗಿಸಿ, ಅಲ್ಪ ನೀರಿನ ಬಳಕೆಯೊಂದಿಗೆ ಬೆಳೆಯುತ್ತಿದ್ದರು. ಇವುಗಳಲ್ಲಿ ಪೌಷ್ಠಿಕತೆಯು ಸತ್ವಗಳು ಸಹ ಹೆಚ್ಚು ಇರುತ್ತದೆ. ಇಂದು ಆಧುನಿಕತೆಗೆ ಮಾರುಹೋಗಿ ಇವುಗಳ ಬಳಕೆ - ಉತ್ಪಾದನೆ ಕಡಿಮೆಯಾಗಿತ್ತು. ಇವುಗಳ ಬಳಕೆಯಿಂದ ಆರೋಗ್ಯದ ಜೊತೆಗೆ ಸಿರಿಧಾನ್ಯ ಕೃಷಿಕರಿಗೆ ಇನ್ನಷ್ಟು ಉತ್ತೇಜನ ನೀಡಿದಂತಾಗುತ್ತದೆ ಎಂದರು.ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್. ಮಾತನಾಡಿ, ಜೀವನಶೈಲಿ ಬದಲಾಗುತ್ತಿದ್ದಂತೆ ಆಹಾರ ಪದ್ಧತಿಯಲ್ಲಿಯೂ ಬದಲಾವಣೆಯಾಗಿ ಸಿರಿಧಾನ್ಯಗಳನ್ನು ಬಳಸುವವರ ಸಂಖ್ಯೆ ತೀರಾ ಇಳಿಕೆಯಾಗಿದೆ. ಸಿರಿಧಾನ್ಯಗಳಿಂದ ದೊರೆಯುವ ಪೌಷ್ಠಿಕಾಂಶಗಳನ್ನು ಅರಿತು ಬಳಸಬೇಕು ಎಂದು ಸಲಹೆ ನೀಡಿದರು.

ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕಿ ಪೂರ್ಣಿಮಾ ಜಿ.ಸಿ. ಸ್ವಾಗತಿಸಿದರು. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸತೀಶ್ ನಿರೂಪಿಸಿ, ವಂದಿಸಿದರು.------------3 ವಿಭಾಗಗಳಲ್ಲಿ 58 ಖಾದ್ಯಗಳ ಸ್ಪರ್ಧೆ

ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯಲ್ಲಿ ಮಹಿಳೆಯರು ಹಾಗೂ ಪುರುಷರು ಉತ್ಸಾಹದಿಂದ ಭಾಗವಹಿಸಿದರು. ಖಾರ ಸಿರಿಧಾನ್ಯ ಖಾದ್ಯಗಳು, ಸಿಹಿ ಸಿರಿಧಾನ್ಯ ಖಾದ್ಯಗಳು ಮತ್ತು ಮರೆತುಹೋದ ಸಿಹಿ ಸಿರಿಧಾನ್ಯ ಖಾದ್ಯಗಳು ಎಂಬ 3 ವಿಭಾಗಗಳಲ್ಲಿ ಒಟ್ಟು 31 ಮಂದಿ ಭಾಗವಹಿಸಿದ್ದರು.

ವಿಶೇಷವಾಗಿ ಕುಚ್ಚಲಕ್ಕಿ ಲಡ್ಡು, ಊದಲು ಪಾಯಸ, ರಾಗಿ ಹಲ್ವಾ, ಗೋಧಿ ಮೋದಕ, ಸಜ್ಜೆ ಉಂಡೆ, ನವಣೆ ಚಿತ್ರಾನ್ನ, ಸಿರಿಧಾನ್ಯ ಪಲಾವ್, ದಾಸವಾಳ ಜ್ಯೂಸ್, ಅಗಸೆ ಮಜ್ಜಿಗೆ, ಬಾಳೆದಿಂಡು ಮೊಸರು ಬಜ್ಜಿ, ಅತ್ರಾಸ್, ಚಕ್ಕುಲಿ ಸೇರಿದಂತೆ 58 ವಿವಿಧ ಬಗೆಯ ಸಿರಿಧಾನ್ಯಗಳ ಖಾದ್ಯಗಳು ನೋಡುಗರನ್ನು ಸೆಳೆಯುತ್ತಿದ್ದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ