ಪಂಚಮಸಾಲಿಗಳಿಗೆ ಬಿಜೆಪಿ ಟೋಪಿ ಹಾಕಿದೆ

KannadaprabhaNewsNetwork |  
Published : Dec 14, 2024, 12:45 AM IST
ವಿಜಯಪುರದಲ್ಲಿ ಸಿಎಂ ಸಿದ್ಧರಾಮಯ್ಯ ಹೇಳಿಕೆ. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಪಂಚಮಸಾಲಿ ಹೋರಾಟಗಾರರಿಗೆ ಬಿಜೆಪಿ ಟೋಪಿ ಹಾಕಿದೆ. 2ಡಿ ಕೊಟ್ಟು ಬಳಿಕ ಹೈಕೋರ್ಟ್‌ಗೆ ಅಫಿಡವಿಟ್ ಹಾಕಿದವರು ಯಾರು? 2023 ಮಾರ್ಚ್ 23ರಂದು ಅಫಿಡವಿಟ್ ಹಾಕಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಪಂಚಮಸಾಲಿ ಹೋರಾಟಗಾರರಿಗೆ ಬಿಜೆಪಿ ಟೋಪಿ ಹಾಕಿದೆ. 2ಡಿ ಕೊಟ್ಟು ಬಳಿಕ ಹೈಕೋರ್ಟ್‌ಗೆ ಅಫಿಡವಿಟ್ ಹಾಕಿದವರು ಯಾರು? 2023 ಮಾರ್ಚ್ 23ರಂದು ಅಫಿಡವಿಟ್ ಹಾಕಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅವರು ಹೋರಾಟ ಮಾಡಲು ನಮ್ಮದೇನೂ ತಕರಾರಿಲ್ಲ. ಆದರೆ ಹೋರಾಟ ಸಂವಿಧಾನಬದ್ಧವಾಗಿರಬೇಕು. ಬಿಜೆಪಿ ಸರ್ಕಾರವಿದ್ದಾಗ 2023 ಮಾರ್ಚ್ 27ರಂದು 2ಡಿ ಮಾಡಿದಾರೆ. 3ಬಿನಲ್ಲಿ ಪಂಚಮಸಾಲಿಗಳಿದ್ದಾರೆ. ಹಿಂದುಳಿದ ವರ್ಗದಲ್ಲಿ ಎಷ್ಟು ಜಾತಿಗಳಿವೆ ಗೊತ್ತಾ ಎಂದು ಪ್ರಶ್ನಿಸಿದರು.

ಕೆಟಗರಿ 1ಎನಲ್ಲಿ ಅತಿಹೆಚ್ಚು ಹಿಂದುಳಿದವರು, 2ಎನಲ್ಲಿ ಅತೀ ಹಿಂದುಳಿದವರು, 3ಎ ನಲ್ಲಿ ಒಕ್ಕಲಿಗರು ಸೇರಿ ಹಲವರು, 3ಬಿನಲ್ಲಿ ಲಿಂಗಾಯತರು ಇತರೆ ಕೆಲವು ಲಿಂಗಾಯತರು ಬರುತ್ತಾರೆ. ಕಳೆದ 2002ರಲ್ಲಿ ಎಸ್.ಎಂ.ಕೃಷ್ಣ ಅವರು ಸಿಎಂ ಇದ್ದಾಗ ಇದೆಲ್ಲ ಮಾಡಲಾಗಿದೆ. ಇನ್ನು 1992ರಲ್ಲಿ ವೀರಪ್ಪ ಮೊಯ್ಲಿ ಸಿಎಂ ಇದ್ದಾಗ ಮುಸ್ಲಿಮರನ್ನು 2ಬಿಗೆ ಸೇರಿಸಿದರು. ಬಳಿಕ ಇದ್ಯಾವುದನ್ನೂ ಯೋಚನೆ ಮಾಡದೆ ಬಿಜೆಪಿಯವರು ಮುಸ್ಲಿಮರಿಗೆ ಕೊಟ್ಟಿದ್ದನ್ನು ರದ್ದು ಮಾಡಿ 2ಸಿ, 2ಡಿ ಅಂತ ಮಾಡಿ ಅದರಲ್ಲಿನ 4 ಪರ್ಸೆಂಟ್ ಮೀಸಲಾತಿ ತೆಗೆದು ಇವರಿಗೆ ಕೊಟ್ಟಿದಾರೆ ಎಂದು ತಿಳಿಸಿದರು.

ಆಗ ಯಾಕೆ ಇವರು ಪ್ರತಿಭಟನೆ ಮಾಡಲಿಲ್ಲ? ಈಗ ಅದೇ ಸರ್ಕಾರದವರು ಇವರಿಗೆ ಸಪೋರ್ಟ್ ಮಾಡುತ್ತಿದ್ದಾರೆ. ಮುಸ್ಲಿಂ ಮೀಸಲಾತಿ ಕಸಿದುಕೊಂಡಿದ್ದನ್ನು ಪ್ರಶ್ನಿಸಿ ರಸೂಲ್ ಎಂಬುವರು ಸುಪ್ರೀಂಕೋರ್ಟ್‌ಗೆ ಹೋದರು. ಆಗ ಅಲ್ಲಿ ಇವರ ಪರ ಲಾಯರ್ ಅವರು ನಾವು ಯಾವ ಕಾರಣಕ್ಕೂ ಬದಲಾವಣೆ ಮಾಡಲ್ಲ ಎಂದು ಅಡ್ಮಿಟ್ ಮಾಡಿಕೊಂಡಿರುವವರು ಯಾರು?. ಈಗ ಯಾಕೆ ಸಪೋರ್ಟ್ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಪಂಚಮಸಾಲಿ ಹೋರಾಟದ ವಿಚಾರವಾಗಿ ನಾನು ಎರಡು ಬಾರಿ ಸಭೆ ಮಾಡಿದ್ದೇನೆ. ಕಾನೂನು ಪ್ರಕಾರ ಹೋಗೋಣ ಎಂದೆ. ಹಿಂದುಳಿದ ವರ್ಗಗಳ ಜೊತೆ ಹೋಗಿ ಎಂದರೂ ಅವರು ಕೇಳಲಿಲ್ಲ. ನಾವು ಚಳುವಳಿ ಮಾಡುತ್ತೇವೆ ಎಂದು ಹೇಳಿದರು. ಶಾಂತಿಯುತವಾಗಿ ಮಾಡಿ ಎಂದೆ. ಟ್ರ್ಯಾಕ್ಟರ್ ತರಲು ಮುಂದಾದರು. ಅವುಗಳಿಗೆ ಅವಕಾಶ ಕೊಡಲಿಲ್ಲ. ಆಗ ಅವರು ಕೋರ್ಟ್‌ಗೆ ಹೋಗಿ ಅನುಮತಿ ತಂದಿದ್ದು, ಕೋರ್ಟ್ ಕೂಡ ಶಾಂತಿಯುತವಾಗಿ ಹೋರಾಟ ಮಾಡಿ ಎಂದು ಹೇಳಿದೆ. ಅವರು ಶಾಂತಿಯಿಂದ ಹೋರಾಟ ಮಾಡುವ ಬದಲು ಕಾನೂನು ಕೈಗೆ ತೆಗೆದುಕೊಳ್ಳುವ ಕೆಲಸ ಮಾಡಿದ್ದಾರೆ. ನಾನು ಮೂವರು ಸಚಿವರಾದ ಮಹಾದೇವಪ್ಪ, ಸುಧಾಕರ, ವೆಂಕಟೇಶ ಅವರನ್ನು ಕಳಿಸಿದ್ದೆ. ಅವರು ಸಿಎಂ ಜೊತೆ ಮಾತಾಡಲು ಬನ್ನಿ ಎಂದು ಕರೆದರೂ ಇವರು ಬಂದಿಲ್ಲ ಎಂದು ಪುನರುಚ್ಚರಿಸಿದರು.

ಅಧಿವೇಶನದ ವೇಳೆ ಹೊರಗೆ ಹಲವಾರು ಗುಂಪುಗಳು ಚಳುವಳಿ ಮಾಡುತ್ತವೆ. ಸಿಎಂ ಎಲ್ಲಾಕಡೆ ಹೊಗೋಕೆ ಆಗುತ್ತಾ? ಸಚಿವರು ಕರೆದರೂ ಬರಲ್ಲ ಎಂದು ಸುವರ್ಣ ಸೌಧಕ್ಕೆ ನುಗ್ಗುವುದಕ್ಕೆ ಮುಂದಾದರು. ಕಲ್ಲು ಹೊಡೆದರು. ಆಗ ತಡೆಯಬೇಕು ಅಲ್ವಾ? ಅವರು ಕಲ್ಲು ಹೊಡೆದಿದ್ದು, ನುಗ್ಗಿದ್ದು ನಾನು ಫೋಟೋ ತೋರಿಸುತ್ತೇನೆ. ನನ್ನ ಬಳಿ ಫೋಟೊಗಳಿವೆ. ಅವರು ಕಲ್ಲು ಹೊಡೆಯದಿದ್ದರೆ 20 ಜನ ಪೊಲೀಸರಿಗೆ ಹೇಗೆ ಏಟು ಬಿತ್ತು? ಹೇಗೆ ಗಾಯ ಆಯ್ತು? ಪೊಲೀಸರು ತಾವೇ ಎಸೆದುಕೊಂಡ್ರಾ ಎಂದು ಪ್ರಶ್ನಿಸಿದರು. ಅಲ್ಲದೆ ಅವರು ಹೇಳಿದ್ದಕ್ಕೆ ಸಾಕ್ಷಿ ಇಲ್ಲ, ನಾನು ಹೇಳಿದ್ದಕ್ಕೆ ಎವಿಡೆನ್ಸ್ ಇದೆ ಎಂದು ಸ್ಪಷ್ಟಪಡಿಸಿದರು.

ಈಗ ಪಂಚಮಸಾಲಿಗಳು ಕಾಯಂ ಹಿಂದುಳಿದ ಕಮಿಷನ್ ಜೊತೆ ಹೋಗಬೇಕು. ಅವರಿಗೆ ಮೀಸಲಾತಿ ಸೌಲಭ್ಯದ ಕುರಿತು ಜಯಪ್ರಕಾಶ ಹೆಗಡೆ ಹೇಳಿದಂತೆ ಅವರು ಹೋಗಬೇಕಿದೆ. ಯಾರು ಕೂಡ ಕಾನೂನು ಕೈಗೆ ತೆಗೆದುಕೊಳ್ಳಬಾರದು. ಕಾಂತರಾಜು ವರದಿ ಸರ್ಕಾರ ತೆಗೆದುಕೊಂಡಿದೆ. ಕ್ಯಾಬಿನೆಟ್ ಮುಂದೆ ತಂದು ಚರ್ಚೆ ಮಾಡುತ್ತೇವೆ ಎಂದು ಹೇಳಿದರು.

ಕೋಟ್‌

ಸ್ವಾಮೀಜಿಗಳ ಬಗ್ಗೆ ನಾನು ಮಾತನಾಡಲ್ಲ. ಅದನ್ನು ಜನರು ತೀರ್ಮಾನ ಮಾಡುತ್ತಾರೆ. ಎಲ್ಲರಿಗೂ ಕಾನೂನು ಒಂದೇ. 2ಎ ನಲ್ಲಿರುವ ಕೆಲವರಿಂದ ಪಂಚಮಸಾಲಿಗಳನ್ನು 2ಎಗೆ ಸೇರಿಸಬೇಡಿ ಎಂದು ವಿರೋಧ ಮಾಡುತ್ತಿದ್ದಾರೆ. ಅವರವರ ಅಭಿಪ್ರಾಯ ಹೇಳೋಕೆ ಅವರಿಗೆ ಸ್ವಾತಂತ್ರ್ಯ ಇದೆ. ಸಂವಿಧಾನ ಏನು ಹೇಳುತ್ತದೆ ಅದನ್ನು ಸರ್ಕಾರ ಮಾಡುತ್ತದೆ.ಸಿದ್ದರಾಮಯ್ಯ, ಮುಖ್ಯಮಂತ್ರಿ

----------ಬಾಕ್ಸ್‌....

ಅನುದಾನದ ಬಗ್ಗೆ ಸೋಮವಾರ ಸಭೆ

ಯುಕೆಪಿ 3ನೇ ಹಂತದ ಯೋಜನೆ ವಿಚಾರಕ್ಕೆ ಸಂಬಂಧಿಸಿದಂತೆ ನಾವು ಆಲಮಟ್ಟಿ ಎತ್ತರ 519 ಮೀಟರ್‌ನಿಂದ 524 ಮೀಟರ್‌ ಎತ್ತರಿಸುವ ಪರವಿದ್ದೇವೆ. ಅದು ನಮ್ಮ ನಿಲುವು. ಆದರೆ ಆಂಧ್ರ ಪ್ರದೇಶ, ತೆಲಂಗಾಣದವರು ಸುಪ್ರೀಂ ಕೋರ್ಟ್‌ಗೆ ಅಪೀಲು ಹಾಕಿದ್ದಾರೆ. ಅದನ್ನು ಕೇಂದ್ರ ಸರ್ಕಾರ ಇತ್ಯರ್ಥ ಮಾಡುವ ಕೆಲಸ ಮಾಡಬೇಕು ಎಂದು ಸಿಎಂ ಸಿದ್ಧರಾಮಯ್ಯ ಹೇಳಿದರು. ಅಲ್ಲದೇ, ಆಲಮಟ್ಟಿಗೆ ಅನುದಾನ ನೀಡಿಕೆ ವಿಚಾರದ ಕುರಿತು ಸೋಮವಾರ ಮೀಟಿಂಗ್‌ ಕರೆದು ಚರ್ಚೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ