ಪಾಲಾಕ್ಷ ಬಿ. ತಿಪ್ಪಳ್ಳಿ
ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಶಾಲೆ- ಕಾಲೇಜುಗಳ ಸಂಖ್ಯೆ ಹೆಚ್ಚಿದ್ದರೂ ಅದಕ್ಕೆ ಅನುಗುಣವಾಗಿ ಶಾಲಾ-ಕಾಲೇಜು ಕೊಠಡಿ ಮತ್ತು ಹಾಸ್ಟೆಲ್ ಇಲ್ಲದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ಸರ್ಕಾರ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ವಸತಿ ನಿಲಯಗಳ ಹೆಚ್ಚಳ ಮತ್ತು ಈಗ ಇರುವ ಹಾಸ್ಟೆಲ್‌ಗಳಲ್ಲಿ ಹೆಚ್ಚುವರಿ ಕೊಠಡಿಗಳ ಬೇಡಿಕೆಯಂತೆ ನಿರ್ಮಿಸಬೇಕಿದೆ. ಯಲಬುರ್ಗಾ ಹಾಗೂ ಕುಕನೂರು ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ೧೬ ವಸತಿ ನಿಲಯಗಳಿವೆ. ಈ ಪೈಕಿ ೧೧ ಮೆಟ್ರಿಕ್ ಪೂರ್ವ ವಸತಿ ನಿಲಯಗಳಿಗೆ ಪ್ರವೇಶ ಪಡೆಯಲು ೧೦೪೮ ಅರ್ಜಿ ಬಂದಿವೆ. ಆ ಪೈಕಿ ೪೮೧ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ. ಇದರ ಹೊರತಾಗಿಯೂ ಎಸ್‌ಸಿ ವರ್ಗದ ೩೧೮, ಎಸ್ಟಿ ವರ್ಗದ ೧೧೬ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಸಿಕ್ಕಿಲ್ಲ. ಮೆಟ್ರಿಕ್ ನಂತರದ ೪ ಹಾಸ್ಟೆಲ್‌ಗಳಿಗೆ ೪೪೦ ಅರ್ಜಿ ಬಂದಿದ್ದು, ೨೪೯ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ. ೧೦೪ ವಿದ್ಯಾರ್ಥಿಗಳಿಗೆ ಪ್ರವೇಶ ಭಾಗ್ಯ ಸಿಕ್ಕಿಲ್ಲ. ಅರ್ಜಿ ಸಲ್ಲಿಸಿದ ಎಲ್ಲ ಎಸ್‌ಸಿ, ಎಸ್ಟಿ ಮಕ್ಕಳಿಗೆ ಪ್ರವೇಶಾತಿ ಕೊಡುವ ನಿಯಮವಿದ್ದರೂ ಹೆಚ್ಚುವರಿ ನಿಲಯ ಮತ್ತು ಕೊಠಡಿಗಳ ಸಮಸ್ಯೆಯಿಂದ ಸಾಧ್ಯವಾಗುತ್ತಿಲ್ಲ.ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಮತ್ತು ನಂತರದ ೨೦ ವಸತಿ ನಿಲಯಗಳಿಗೂ ವಿದ್ಯಾರ್ಥಿಗಳಿಂದ ಸಾವಿರಾರು ಅರ್ಜಿ ಬಂದಿವೆ. ವಸತಿ ನಿಲಯಗಳ ಕೊರತೆ, ಹೆಚ್ಚುವರಿ ಕೊಠಡಿ ಇಲ್ಲದಿರುವ ಪರಿಣಾಮ ವಿದ್ಯಾರ್ಥಿಗಳು ವಸತಿ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.
ಶಿಥಿಲಾವಸ್ಥೆಯಲ್ಲಿ ಹಾಸ್ಟೆಲ್:
ಯಲಬುರ್ಗಾ ಪಟ್ಟಣದಲ್ಲಿ ಮೆಟ್ರಿಕ್ ಪೂರ್ವ ಬಾಲಕಿಯರ ಅಂಬೇಡ್ಕರ್ ವಸತಿ ನಿಲಯ ನಿರ್ಮಿಸಬೇಕಿದೆ. ಈಗಿರುವ ಹಳೆಯ ಕಟ್ಟಡ ಶಿಥಿಲಗೊಂಡಿದ್ದು ಬೇರೆಡೆ ನಡೆಸಲಾಗುತ್ತಿದೆ. ಕುಕನೂರು ತಾಲೂಕಿನ ಮಂಗಳೂರು ಗ್ರಾಮದಲ್ಲಿ ಮೆಟ್ರಿಕ್ ಪೂರ್ವ ಬಾಲಕಿಯರ ಅಂಬೇಡ್ಕರ್ ವಸತಿ ನಿಲಯ ಹಳೆಯದಾಗಿದ್ದು, ನೂತನ ಕಟ್ಟಡವಾಗಬೇಕು. ಹಿರೇವಂಕಲಕುಂಟಾ ಭಾಗದಲ್ಲಿ ಹೆಚ್ಚುವರಿ ವಸತಿ ನಿಲಯಗಳ ಅವಶ್ಯಕತೆ ಇದೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಯಲಬುರ್ಗಾ ಹಾಗೂ ಕುಕನೂರು ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಿಗೆ ಹೆಚ್ಚುವರಿ ಕೊಠಡಿ, ಶೌಚಾಲಯ ನಿರ್ಮಿಸಬೇಕಿದೆ. ಕೆಕೆಆರ್‌ಡಿಬಿ ಅನುದಾನದಲ್ಲಿ ಶಿಥಿಲಗೊಂಡ ಹಳೆಯ ಕಟ್ಟಡ ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು, ಶಾಸಕ ಬಸವರಾಜ ರಾಯರಡ್ಡಿ ಅವರಿಗೆ ಮನವಿ ಸಲ್ಲಿಸಲಾಗಿದೆ.
ಮಲ್ಲನಗೌಡ ಕೋನನಗೌಡ್ರ, ಜೆಡಿಎಸ್ ಜಿಲ್ಲಾ ವಕ್ತಾರ, ಕೊಪ್ಪಳ