ಸಚಿವ ಪ್ರಿಯಾಂಕ್‌ ಖರ್ಗೆ ರಾಜಿನಾಮೆಗೆ ಶಾಸಕ ಡಾ.ಭರತ್‌ ಶೆಟ್ಟಿ ಆಗ್ರಹ

KannadaprabhaNewsNetwork |  
Published : Jul 19, 2025, 01:00 AM IST
ಶಾಸಕ ಡಾ.ಭರತ್‌ ಶೆಟ್ಟಿ ಸುದ್ದಿಗೋಷ್ಠಿ | Kannada Prabha

ಸಾರಾಂಶ

ನಿಷೇಧಿತ ಡ್ರಗ್ಸ್‌ ಪೂರೈಕೆ ಮಾಡಿ ಸಿಕ್ಕಿಬಿದ್ದಿರುವ ಆಪ್ತ ಬಗ್ಗೆ ಸಚಿವ ಪ್ರಿಯಾಂಕ್‌ ಖರ್ಗೆ ಸ್ಪಷ್ಟೀಕರಣ ನೀಡಬೇಕು, ಇಲ್ಲವೇ ರಾಜಿನಾಮೆ ನೀಡಿ ತನಿಖೆಗೆ ಸಹಕರಿಸಬೇಕು ಎಂದು ಮಂಗಳೂರು ಉತ್ತರ ಶಾಸಕ ಡಾ. ಭರತ್‌ ಶೆಟ್ಟಿ ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರುಡ್ರಗ್ಸ್‌ ಪೂರೈಕೆ ಪ್ರಕರಣದಲ್ಲಿ ಕಲಬುರಗಿ ದಕ್ಷಿಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಲಿಂಗರಾಜ್‌ ಕಣ್ಣಿ ಅವರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದು, ಬಂಧಿತ ಆರೋಪಿ ಸಚಿವ ಪ್ರಿಯಾಂಕ್‌ ಖರ್ಗೆ ಆಪ್ತ. ಜಗತ್ತಿನ ಎಲ್ಲ ವಿಷಯಗಳ ಬಗ್ಗೆ ಮಾತನಾಡುವ ಪ್ರಿಯಾಂಕ್‌ ಖರ್ಗೆ ತನ್ನ ಆಪ್ತನ ಬಂಧನದ ಬಗ್ಗೆ ಇದುವರೆಗೆ ಮಾತನಾಡಿಲ್ಲ. ನಿಷೇಧಿತ ಡ್ರಗ್ಸ್‌ ಪೂರೈಕೆ ಮಾಡಿ ಸಿಕ್ಕಿಬಿದ್ದಿರುವ ಆಪ್ತ ಬಗ್ಗೆ ಪ್ರಿಯಾಂಕ್‌ ಖರ್ಗೆ ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕು, ಇಲ್ಲವೇ ರಾಜಿನಾಮೆ ನೀಡಿ ತನಿಖೆಗೆ ಸಹಕರಿಸಬೇಕು ಎಂದು ಮಂಗಳೂರು ಉತ್ತರ ಶಾಸಕ ಡಾ. ಭರತ್‌ ಶೆಟ್ಟಿ ಒತ್ತಾಯಿಸಿದ್ದಾರೆ.

ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಒಂದೂವರೆ ವರ್ಷದಿಂದ ಕಲಬುರಗಿಯಲ್ಲಿ ಡ್ರಗ್ಸ್‌ ಪೂರೈಕೆ ಹೆಚ್ಚಾಗಿದೆ. ಈ ಹಿಂದೆ ಡ್ರಗ್ಸ್‌ ಸರಬರಾಜು ಪತ್ತೆಯಾಗಿದ್ದರೂ, ರಾಜ್ಯದ ಪೊಲೀಸರು ತನಿಖೆ ನಡೆಸಿಲ್ಲ. ಈಗ ಮಹಾರಾಷ್ಟ್ರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕರ್ನಾಟಕ ಪೊಲೀಸರು ಇದುವರೆಗೆ ಏನು ಮಾಡುತ್ತಿದ್ದರು? ಆರೋಪಿಗಳಿಗೆ ರಾಜಕೀಯವಾಗಿ ಯಾರ ಆಶೀರ್ವಾದ ಇತ್ತು? ಸ್ಥಳೀಯರಾದ ಅಲ್ಲಮ ಪ್ರಭು ಪಾಟೀಲ್‌ ಮತ್ತು ಪ್ರಿಯಾಂಕ್‌ ಖರ್ಗೆ ಆಪ್ತನಾದ ಆರೋಪಿ ವಿರುದ್ಧ ರಾಜ್ಯ ಪೊಲೀಸರು ಏಕೆ ಕ್ರಮ ಕೈಗೊಂಡಿರಲಿಲ್ಲ ಎಂದು ಪ್ರಶ್ನಿಸಿದರು.

ಈ ವಿಚಾರವನ್ನು ವಿಧಾನಸಭೆ ಅಧಿವೇಶನದಲ್ಲೂ ಪ್ರಸ್ತಾಪಿಸಲಾಗುವುದು ಎಂದು ಡಾ. ಭರತ್‌ ಶೆಟ್ಟಿ ಹೇಳಿದರು.

ಕೋಮು ನಿಗ್ರಹ ದಳಕ್ಕೆ ಜಿಲ್ಲೆಯಲ್ಲಿ ಕೆಲಸವಿಲ್ಲ. ಕೋಮು ನಿಗ್ರಹ ದಳ(ಎಸಿಎಫ್‌) ಪೊಲೀಸರನ್ನು ಡ್ರಗ್ಸ್‌ ವಿರುದ್ಧ ಬಳಕೆ ಮಾಡಲಿ ಎಂದು ಅವರು ಒತ್ತಾಯಿಸಿದರು.ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಮುಖಂಡ ವಿಕಾಸ್‌ ಪುತ್ತೂರು, ಜಿಲ್ಲಾ ವಕ್ತಾರ ರಾಜಗೋಪಾಲ ರೈ, ಕಾರ್ಯಾಲಯ ಕಾರ್ಯದರ್ಶಿ ಗುರುಚರಣ್‌ ಇದ್ದರು.

ಕಾಂಗ್ರೆಸಿಗರೇ ಸಮಸ್ಯೆ ಬಗೆಹರಿಸಿಕೊಳ್ಳಲಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಹಾಗೂ ಕೆಂಪುಕಲ್ಲು ಸಮಸ್ಯೆಗೆ ಬಿಜೆಪಿ ಕಾರಣ, ಬಿಜೆಪಿ ಶಾಸಕರು ಸರ್ಕಾರ ಜತೆ ಮಾತನಾಡಿ ಸಮಸ್ಯೆ ಬಗೆಹರಿಸಬೇಕು ಎಂಬ ಮಾಜಿ ಸಚಿವ ರಮಾನಾಥ ರೈ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ಡಾ. ಭರತ್‌ ಶೆಟ್ಟಿ, ರಮಾನಾಥ ರೈ ಅವರ ಈ ಹೇಳಿಕೆಯೇ ದೊಡ್ಡ ಜೋಕ್‌. ಕಾಂಗ್ರೆಸ್‌ ಸರ್ಕಾರದಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ. ಸರ್ಕಾರದ ಬಳಿ ದುಡ್ಡೂ ಇಲ್ಲ. ಮರಳು, ಕೆಂಪುಕಲ್ಲು ಪ್ರತಿಭಟನೆಯಲ್ಲಿ ಕಾಂಗ್ರೆಸ್‌ನವರೂ ಪಾಲ್ಗೊಂಡಿದ್ದರು. ಸ್ಪೀಕರ್‌ ಸಹಿತ ಜಿಲ್ಲೆಯ ಕಾಂಗ್ರೆಸ್‌ನ ಘಟಾನುಘಟಿ ಶಾಸಕರು ಈ ಬಗ್ಗೆ ಸರ್ಕಾರದ ಬಳಿ ಮಾತನಾಡಿ ಸಮಸ್ಯೆ ಬಗೆಹರಿಸಲಿ. ಬಿಜೆಪಿ ಸರ್ಕಾರ ಇದ್ದಾಗ ಅರ್ಜಿ ಸಲ್ಲಿಸಿದ ವಾರದೊಳಗೆ 272 ಪರವಾನಗಿ ನೀಡಲಾಗಿತ್ತು ಎಂದು ನೆನಪಿಸಿದರು.

PREV

Recommended Stories

ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ
ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು