ಚಳ್ಳಕೆರೆ: ಬೆಲೆ ಏರಿಕೆ ನಡುವೆಯೂ ನಾಡಹಬ್ಬ ದಸರಾಗೆ ವ್ಯಾಪಾರ, ವಹಿವಾಟು ಭರದಿಂದ ಸಾಗಿತು. ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬಕ್ಕಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಬಂದಿದ್ದ ಬಾಳೆಎಲೆ, ಬೂದುಗುಂಬಳ, ಹೊಸಬಟ್ಟೆ ಖರೀದಿ ಭರಾಟೆ ಜೋರಾಗಿ ನಡೆಯುತ್ತಿದೆ.
ನಗರದ ಪಾವಗಡ, ಚಿತ್ರದುರ್ಗ, ಬೆಂಗಳೂರು ರಸ್ತೆಗಳಲ್ಲಿ ಬಾಳೆಕಂದು, ಹೂವು, ಬೂದುಗುಂಬಳ ಕಾಯಿ ವ್ಯಾಪಾರ ಸೇರಿದಂತೆ ಬಟ್ಟೆ ಅಂಗಡಿ ಹಾಗೂ ದಿನಸಿ ಅಂಗಡಿಗಳಲ್ಲಿ ಖರೀದಿಸಲು ಜನರು ಮುಗಿಬಿದಿದ್ದು ಕಂಡುಬಂತು. ಆಯುಧ ಪೂಜೆಯ ದಿನದಂದು ವಾಹನಗಳು, ಸಣ್ಣಫ್ಯಾಕ್ಟರಿ, ವಾಹನ ಶೋರೂಂಗಳು, ಗ್ಯಾರೇಜ್ ಅಂಗಡಿಗಳು, ಮನೆಗಳಲ್ಲಿ ಸೇರಿದಂತೆ ಮತ್ತಿತರರ ಕಡೆಗಳಲ್ಲಿ ಪೂಜಾ ಕಾರ್ಯಕ್ಕಾಗಿ ಬೆಲೆ ಏರಿಕೆಯ ನಡುವೆಯೂ ಹೂ, ಹಣ್ಣ, ಬಾಳೆಕಂದು ಖರೀದಿಸಿದರು.ವಿವಿಧ ತಾಲ್ಲೂಕುಗಳಿಂದಲ್ಲೂ ವ್ಯಾಪಾರಸ್ಥರು ಬಾಳೆಕಂದು, ಬೂದುಗುಂಬಳ ಕಾಯಿ, ಹೂವು ಸಾಕಷ್ಟು ಪ್ರಮಾಣದಲ್ಲಿ ಚಳ್ಳಕೆರೆ ಮಾರುಕಟ್ಟೆಗೆ ಬಂದಿದ್ದು ಕಂಡುಬಂತು. ಮಳೆಯಿಂದಾಗಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆಯಿಲ್ಲದ ಕಾರಣ ವ್ಯಾಪಾರಸ್ಥರು ಪರದಾಡಿದರು. ಮಳೆಯಿಂದ ತಮ್ಮ ವಸ್ತುಗಳನ್ನು ರಕ್ಷಿಸಿಕೊಳ್ಳಲು ಹರಸಾಹಸಪಟ್ಟರು. ಜಿಲ್ಲೆಯಲ್ಲಿ ದಸರಾ ಹಬ್ಬಕ್ಕೆ ಒಂದು ಕೆ.ಜಿ ಬೂದುಗುಂಬಳ 35 ರು.ನಿಂದ 60, 70 ರು.ವರೆಗೆ ಮಾರಾಟಗಾರರು ಹೇಳುತ್ತಿದ್ದರೆ ಗ್ರಾಹಕರು ಕೇಳಿ ದಂಗಾದರು.
ಶುಕ್ರವಾರದ ಆಯುಧ ಪೂಜೆ ಹಿನ್ನೆಲೆಯಲ್ಲಿ ಒಂದು ಮಾರು ಸೇವಂತಿಗೆ ಹೂವು 80-100, 120 ರು., ಮಲ್ಲಿಗೆ ಹೂವು 100- 120 ರು., ಕನಕಾಂಬರ 100- 120 ರು., ಚೆಂಡು ಹೂವು 100 ರು. ಒಂದು ಮಾರಿಗೆ ಮಾರಾಟ ಮಾಡುತ್ತಿದ್ದಾರೆ. ಒಂದು ಸುಗಂಧರಾಜ ಹೂವಿನ ಹಾರ 100, 150, 200, 500 ರು. ವರೆಗೆ ಮಾರಾಟ ನಡೆಯಿತು.ಒಂದು ಕೆಜಿ ಬಾಳೆ ಹಣ್ಣಿಗೆ 50- 80 ರು.ವರೆಗೆ ಇದ್ದರೆ, ಪಚ್ಚಬಾಳೆ 50 ರು. ಇದೆ. ವಿವಿಧ ಹಣ್ಣುಗಳು ವ್ಯಾಪಾರ ವಹಿವಾಟು ಭಾರಿ ಜೋರಾಗಿಯೇ ಜರುಗಿತು. ಒಟ್ಟಾರೆ ನಾಡಹಬ್ಬ ದಸರಾ, ವಿಜಯದಶಮಿ ಹಬ್ಬಕ್ಕೆ ಜನರು ಸಲಕಸಿದ್ಧತೆ ನಡೆಸಿದ್ದಾರೆ.