ಕನ್ನಡಪ್ರಭ ವಾರ್ತೆ ಸಂಟಿಕೊಪ್ಪ
ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಸೇರಿದಂತೆ ರಾಜ್ಯಾದ್ಯಂತ ತಮ್ಮ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಈಡೇರಿಸುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಿಬ್ಬಂದಿ ಕಳೆದ 10 ದಿನಗಳಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಈ ಮುಷ್ಕರದಿಂದ ಜನಸಾಮಾನ್ಯರು ಇಕ್ಕಟಿಗೆ ಸಿಲುಕಿದ್ದಾರೆ.ಈಗಾಗಲೇ ವರದಿಯಾಗಿರುವಂತೆ ಅಕ್ಟೋಬರ್ ತಿಂಗಳ ಆರಂಭದಿಂದಲೇ ವಿವಿಧ ಹಂತಗಳಲ್ಲಿ ಬೆಂಗಳೂರು, ಜಿಲ್ಲಾ ಮಟ್ಟದಲ್ಲಿ ಮತ್ತು ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿಭಟನೆಗಳನ್ನು ಹಮ್ಮಿಕೊಂಡು ಬರಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ಎಲ್ಲಾ ವೃಂದ ಸಂಘಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ವತಿಯಿಂದ ಪ್ರತಿಭಟನೆಗಳು ನಡೆಯುತ್ತಿದ್ದು ಇದೀಗ ಅ.7ರಿಂದ ಪ್ರತಿದಿನ ಪೂರ್ವಾಹ್ನ 11 ಗಂಟೆಯಿಂದ ಮಡಿಕೇರಿ ಜಿಲ್ಲಾ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಯುತ್ತಿದೆ.
ಈ ಸಂಘಟನೆಗಳು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅ.4 ರಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾವನದಲ್ಲಿ ಹೋರಾಟ ನಡೆಸಿದ್ದರು. ಆದರೆ ಇಂದಿನವರೆಗೂ ಇಲಾಖೆ ಸಭೆಯನ್ನು ಕರೆದು ಮುಖಂಡರೊಂದಿಗೆ ಚರ್ಚಿಸಿ ಅಗತ್ಯ ಆದೇಶ ಮಾಡಲು ಮೀನಮೇಷ ಎಣಿಸುತ್ತಿದೆ. ಈ ಹಿನ್ನಲೆ ಪ್ರತಿಭಟನೆ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸೇವೆಗಳು ಸ್ಥಗಿತಗೊಳ್ಳಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಜಿಲ್ಲಾಧ್ಯಕ್ಷ ರವೀಶ್ ತಿಳಿಸಿದ್ದಾರೆ.ಆದರೆ ಕಳೆದ 8 ದಿನಗಳಿಂದ ಜಿಲ್ಲೆಯ ಗ್ರಾಮ ಪಂಚಾಯಿತಿ ಕಚೇರಿಗಳು ಮುಚ್ಚಿದ್ದು, ಪ್ರತಿದಿನವೂ ಬೀಗದ ದರ್ಶನ ಆಗುತ್ತಿದೆಯೇ ಹೊರತು ‘ನಾಳೆ ಪ್ರತಿಭಟನೆ ಕೊನೆಗೊಳ್ಳಬಹುದು’ ಎಂಬ ನಾಗರಿಕರ ನಿರೀಕ್ಷೆ ಪ್ರತಿದಿನವೂ ಹುಸಿಯಾಗುತ್ತಿದೆ.
ದಾಖಲೆ ಹೊಂದಲು ಅನಾನುಕೂಲ:ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಸರ್ಕಾರಿ ದಾಖಲಾತಿಗಳನ್ನು ಗ್ರಾಮ ಪಂಚಾಯಿತಿ ಮಟ್ಟದಿಂದ ನೀಡಲಾಗುತ್ತಿದೆ. ಹೆಚ್ಚಿನ ನಿರಾಕ್ಷೇಪಣಾ ಪತ್ರಗಳು ವಾಸದ ದೃಢೀಕರಣ ಪತ್ರ ಕಂದಾಯ ಪಾವತಿ ಸೇರಿದಂತೆ ಇತರ ವಿಷಯಗಳಿಗೆ ಪಂಚಾಯಿತಿ ಮೂಲ ದಾಖಲೆ ಪಡೆಯುವುದು ಅಗತ್ಯವಾಗಿದೆ. ಈ ಎಲ್ಲಾ ಕಾರ್ಯಕ್ರಗಳು ಮುಷ್ಕರದಿಂದಾಗಿ ನಿಂತಿದ್ದು, ಜನಸಾಮಾನ್ಯರ ಗೋಳು ಕೇಳುವವರು ಇಲ್ಲ
ಪಂಚಾಯಿತಿಗೆ ಸಂಬಂಧಿಸಿದಂತೆ ಇಡೀ ಆಡಳಿತ ವ್ಯವಸ್ಥೆಗೆ ಮುಷ್ಕರ ನಿರಂತವಾಗಿರುವುದರಿಂದ ಚುನಾಯಿತ ಪ್ರತಿನಿಧಿಗಳು ಆಡಳಿತದ ಏರುಪೇರನ್ನು ಸಾರ್ವಜನಿಕರ ಗೋಳನ್ನು ಕೇಳುವವರು ಇಲ್ಲಾದಂತಾಗಿದೆ. ಇದರೊಂದಿಗೆ, ಸಾರ್ವಜನಿಕರಿಂದ ಮಾತು ನಿಂದನೆ ಕೇಳುವಂತಾಗಿದೆ ಎಂದು ಪಂಚಾಯಿತಿ ಸದಸ್ಯರು ಅಲವತ್ತುಕೊಂಡಿದ್ದಾರೆ.............................ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೌಕರರ ಸಂಘಟನೆಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಯುತ್ತಿದೆ. ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿಯಲ್ಲಿ ಕಳೆದ 10 ದಿನಗಳಿಂದ ಸಿಬ್ಬಂದಿ ಮುಷ್ಕರದಲ್ಲಿ ತೊಡಗಿರುವುದರಿಂದ ಸುಂಟಿಕೊಪ್ಪ ವ್ಯಾಪ್ತಿಯ ಕೂಲಿ ಕಾರ್ಮಿಕರಿಗೆ ಸಂಕಷ್ಟವಾಗಿದೆ. ವಿವಿಧ ದಾಖಲಾತಿ ಪತ್ರಗಳಿಗಾಗಿ ನಿತ್ಯ ಕಚೇರಿಗೆ ಅಲೆದು ಬಸವಳಿದಿದ್ದಾರೆ. ಸಂಬಂಧಿಸಿದ ಇಲಾಖೆಯವರು ತಕ್ಷಣ ಸಮಸ್ಯೆ ಪರಿಹರಿಸಬೇಕಾಗಿದೆ.
-ಪಿ.ಆರ್.ಸುನಿಲ್‌ಕುಮಾರ್, ಸುಂಟಿಕೊಪ್ಪ ಗ್ರಾ.ಪಂ. ಅಧ್ಯಕ್ಷ.