ಆತ್ಮಭೂಷಣ್
ಕಳೆದ ಲೋಕಸಭಾ ಚುನಾವಣೆಯಲ್ಲಿ ಸಾಧಾರಣ ದಾಖಲೆ ಅಂತರದಲ್ಲಿ ಬಿಜೆಪಿಗೆ ಗೆಲುವು ತಂದುಕೊಟ್ಟ ಕರಾವಳಿ ಮೂಲದ ನಾಲ್ವರು ಸಂಸದರ ಪೈಕಿ ಮೂರು ಮಂದಿ ಈ ಬಾರಿ ಟಿಕೆಟ್ ವಂಚಿತರಾಗಿದ್ದಾರೆ. ಒಬ್ಬ ಸಂಸದರ ಕ್ಷೇತ್ರವನ್ನೇ ಬದಲಾವಣೆ ಮಾಡಲಾಗಿದೆ.
ಸಂಸದರಾದ ಡಿ.ವಿ.ಸದಾನಂದ ಗೌಡ, ನಳಿನ್ ಕುಮಾರ್ ಕಟೀಲ್ ಹಾಗೂ ಮುಂಬೈ ಉತ್ತರ ಸಂಸದ ಗೋಪಾಲ ಶೆಟ್ಟಿ ಈ ಬಾರಿ ಟಿಕೆಟ್ ವಂಚಿತರು. ಗೋಪಾಲ ಶೆಟ್ಟಿ ಅವರು ಪಡುಬಿದ್ರೆಯ ಸಾಂತೂರು ಮೂಲದವರು. ಸಂಸದೆ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಿದರೂ ಅವರ ಕ್ಷೇತ್ರ ಬದಲಾಯಿಸಲಾಗಿದೆ. ಡೀವಿ ಹೊರತುಪಡಿಸಿ ಬೇರೆಲ್ಲರೂ ದಾಖಲೆ ಮತಗಳ ಅಂತರದಿಂದ ಕಳೆದ ಬಾರಿ ಗೆಲವು ಕಂಡಿದ್ದರೂ ಈ ಬಾರಿ ಟಿಕೆಟ್ ಪಡೆಯಲು ಮಾತ್ರ ಸಾಧ್ಯವಾಗಿಲ್ಲ.ದಾಖಲೆ ಗೆಲವು:
ಗೋಪಾಲ ಶೆಟ್ಟಿ ಅವರು ಮುಂಬೈ ಉತ್ತರದಲ್ಲಿ ಎರಡು ಬಾರಿ ಸಂಸದರಾಗಿದ್ದಾರೆ. 2019ರಲ್ಲಿ ಕಾಂಗ್ರೆಸ್‌ನ ಊರ್ಮಿಳಾ ಮಾತೋಂಡ್ಕರ್ ವಿರುದ್ಧ 4,65,247 ಭಾರಿ ಮತಗಳ ಅಂತರದಿಂದ ಗೆದ್ದಿದ್ದರು. ಅಲ್ಲಿ ಸ್ಥಳೀಯಾಡಳಿತ ಸದಸ್ಯರಾಗಿ, ಶಾಸಕರಾಗಿದ್ದರು. ಮಂಗಳೂರು ಸಮೀಪದ ಪಡುಬಿದ್ರಿ ಮೂಲದ ಗೋಪಾಲ ಶೆಟ್ಟಿ ಅವರಿಗೆ ಈ ಬಾರಿ ಟಿಕೆಟ್ ಸಿಕ್ಕಿಲ್ಲ. ಅವರ ಕ್ಷೇತ್ರದಲ್ಲಿ ಪಿಯೂಷ್ ಗೋಯಲ್‌ಗೆ ಟಿಕೆಟ್ ಲಭಿಸಿದೆ.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಎರಡನೇ ಬಾರಿ ಸಂಸದೆಯಾಗಿರುವ ಶೋಭಾ ಕರಂದ್ಲಾಜೆಗೆ ಮೂರನೇ ಬಾರಿಗೆ ಇಲ್ಲಿ ಅವಕಾಶ ಸಿಕ್ಕಿಲ್ಲ. ಕ್ಷೇತ್ರದಲ್ಲಿ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರಿಗೆ ಹಾಲಿ ಸಂಸದ ಡಿ.ವಿ.ಸದಾನಂದ ಗೌಡರ ಕ್ಷೇತ್ರವಾದ ಬೆಂಗಳೂರು ಉತ್ತರದಲ್ಲಿ ಟಿಕೆಟ್ ನೀಡಲಾಗಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಕಣಕ್ಕೆ ಇಳಿಸಲಾಗಿದೆ.ವರಿಷ್ಠರ ಸೂಚನೆ
ಈ ಬಾರಿ ಟಿಕೆಟ್ ವಂಚಿತ ಈ ಮೂವರು ಸಂಸದರಿಗೆ ಮುಂದೇನು ಎಂಬ ಪ್ರಶ್ನೆ ಸದ್ಯ ಪ್ರಶ್ನೆಯಾಗಿಯೇ ಉಳಿದಿದೆ.ಹಾಲಿ ಸಂಸದರು ಸದ್ಯ ಲೋಕಸಭಾ ಚುನಾವಣೆಯಲ್ಲಿ ತಮ್ಮ ಕ್ಷೇತ್ರದ ಅಭ್ಯರ್ಥಿಗಳ ಗೆಲವಿಗೆ ಶ್ರಮಿಸಲಿದ್ದಾರೆ. ಈ ಮೂವರ ಕ್ಷೇತ್ರಗಳಲ್ಲಿ ಈ ಬಾರಿ ಹೊಸ ಅಭ್ಯರ್ಥಿಗಳು ಕಣಕ್ಕೆ ಇಳಿದಿರುವುದರಿಂದ ಹಿಂದಿನ ಗೆಲವಿಗಿಂತಲೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಿಕೊಡುವಂತೆ ಪಕ್ಷದ ವರಿಷ್ಠರು ಸೂಚನೆ ನೀಡಿದ್ದಾರೆ. ಮುಂದೆ ಯಾವುದೇ ಅಧಿಕಾರ ನೀಡುವುದಿದ್ದರೂ ಕ್ಷೇತ್ರದಲ್ಲಿ ಅಭ್ಯರ್ಥಿ ಗೆಲ್ಲಿಸಿಕೊಡುವ ಸವಾಲನ್ನು ಇವರು ಎದುರಿಸಲೇ ಬೇಕಾಗಿದೆ.