ಬೆಂಗಳೂರು : ಉಪನಗರ ರೈಲ್ವೆ ಯೋಜನೆಗಾಗಿ (ಬಿಎಸ್‌ಆರ್‌ಪಿ) ನಗರದಲ್ಲಿ 32,500ಕ್ಕೂ ಹೆಚ್ಚಿನ ಮರಗಳ ಹನನ ವಿರೋಧಿಸಿ ಸಾವಿರಾರು ಪರಿಸರ ಪ್ರೇಮಿಗಳು ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆ-ರೈಡ್) ಹಾಗೂ ಬಿಬಿಎಂಪಿಗೆ ಹೆಚ್ಚಿನ ಆಕ್ಷೇಪಣೆ ಸಲ್ಲಿಸಿದ್ದಾರೆ.
ಯೋಜನೆಯಾಗಿ ಕಡಿಯಬೇಕಾದ ಮರಗಳ ಸಂಖ್ಯೆಯನ್ನು ಆದಷ್ಟು ಕಡಿಮೆಗೊಳಿಸಬೇಕು ಎಂದು ಒತ್ತಾಯಿಸಿರುವ ಜನತೆ, ಈ ಸಂಬಂಧ ಇದೇ ಜೂ.14ರಂದು ಕೆ-ರೈಡ್ ಕರೆದಿರುವ ಜನಸಂಪರ್ಕ ಸಭೆಯಲ್ಲಿ ಚರ್ಚಿಸಲು ನಿರ್ಧರಿಸಿದ್ದಾರೆ. ಪುನಃ ಸರ್ವೆ ನಡೆಸಿ ಆದಷ್ಟು ಮರಗಳನ್ನು ಉಳಿಸುವಂತೆ ಆಗ್ರಹಿಸಿದ್ದಾರೆ.
ಬಿಎಸ್‌ಆರ್‌ಪಿ ಯೋಜನೆಯ 148 ಕಿ.ಮೀ. ಮಾರ್ಗ ಸೇರಿ 32,572 ಮರಗಳನ್ನು ಕಡಿಯುವುದು ಅನಿವಾರ್ಯವಾಗಿದೆ. ಈ ಪೈಕಿ ಹೆಚ್ಚಿನದಾಗಿ ನೀಲಗಿರಿ, ಅಕೇಸಿಯಾ ಸೇರಿ 17,505 ಮರಗಳು ದೇವನಹಳ್ಳಿಯ ಅಕ್ಕುಪೇಟ್ ಡಿಪೋದಲ್ಲೇ ಇವೆ. ಉಳಿದಂತೆ 15,067 ಮರಗಳು ಕಾರಿಡಾರ್‌ನಲ್ಲಿ ಬರುತ್ತವೆ ಎಂದು ಕೆ-ರೈಡ್ ತಿಳಿಸಿದೆ. ಹೆಚ್ಚಿನ ಮರಗಳು ಬಿಬಿಎಂಪಿ ವ್ಯಾಪ್ತಿಯಲ್ಲೇ ಇದ್ದು, ಈವರೆಗೆ 2098 ಮರಗಳನ್ನು ಕಡಿಯಲು ಹಾಗೂ 178 ಮರಗಳ ಸ್ಥಳಾಂತರಕ್ಕೆ ಬಿಬಿಎಂಪಿ ಪರವಾನಗಿ ನೀಡಿದೆ.
ನಮ್ಮ ಬೆಂಗಳೂರು ಪ್ರತಿಷ್ಠಾನ ಹಾಗೂ ಜಟಕಾ.ಒಆರ್‌ಜಿ ಸಹಯೋಗದಲ್ಲಿ ಇ-ಮೇಲ್ ಅಭಿಯಾನ ನಡೆಸಿ ಮರಗಳ ಮಾರಣಹೋಮ ವಿರೋಧಿಸಿವೆ. ಇದರಡಿ ಕೆ-ರೈಡ್, ಬಿಬಿಎಂಪಿ, ಅರಣ್ಯ ಇಲಾಖೆಗೆ ಆಕ್ಷೇಪಣೆ ಸಲ್ಲಿಸಲಾಗಿದೆ. ಬೆಂಗಳೂರಿನ ಹಸಿರು ಹೊದಿಕೆಯನ್ನು ಕಾಪಾಡಬೇಕು ಎಂದು ಒತ್ತಾಯಿಸಲಾಗಿದೆ.
ಈ ಸಂಬಂಧ ಮಾತನಾಡಿದ ನಮ್ಮ ಬೆಂಗಳೂರು ಪ್ರತಿಷ್ಠಾನದ ವಿನೋದ್ ಜಾಕೋಬ್, ನಾವು ಉಪನಗರ ರೈಲ್ವೆ ಯೋಜನೆ ವಿರೋಧ ಮಾಡುತ್ತಿಲ್ಲ. ಆದರೆ, ಕಳೆದ ಒಂದೆರಡು ವರ್ಷದಲ್ಲಿ ರಾಜಧಾನಿ ಬೆಂಗಳೂರು ವಿಪರೀತ ಹವಾಮಾನ ವೈಪರೀತ್ಯ ಎದುರಿಸುತ್ತಿದೆ. ಕಳೆದ ಬೇಸಿಗೆಯಲ್ಲಿ ಅತ್ಯಧಿಕ ತಾಪಮಾನ ದಾಖಲಾಗಿದೆ. ಹೀಗಿರುವಾಗ ಮತ್ತೆ ಬೆಂಗಳೂರಿನಲ್ಲಿ ಸಾವಿರಾರು ಮರಗಳನ್ನು ನಾಶಪಡಿಸಲು ಮುಂದಾಗಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಮರ ಸಂರಕ್ಷಣಾ ಕಾಯ್ದೆ ಪಾಲಿನೆ ಆಗಲಿ: ಜಾಕೋಬ್
ಯೋಜನೆ ಸಂಬಂಧ ಸಾವಿರಾರು ಮರಗಳ ತೆರವು ವಿರೋಧಿಸಿ 2 ಸಾವಿರಕ್ಕೂ ಅಧಿಕ ಆಕ್ಷೇಪಣೆಗಳನ್ನು ಸಲ್ಲಿಸಲಾಗಿದೆ. ಕೆ-ರೈಡ್, ಬಿಬಿಎಂಪಿ ಪರ್ಯಾಯವಾಗಿ ಎಷ್ಟು ಮರಗಳನ್ನು ಎಲ್ಲೆಲ್ಲಿ ನೆಡಲಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು. 1976ರ ಮರ ಸಂರಕ್ಷಣಾ ಕಾಯ್ದೆ ಪಾಲನೆಯಾಗಬೇಕು ಎಂದು ವಿನೋದ್ ಜಾಕೋಬ್ ಒತ್ತಾಯಿಸಿದರು.
ಬಿಎಸ್‌ಆರ್‌ಪಿ ಯೋಜನೆಗಾಗಿ ಕಡಿಯಲಾಗುವ ಮರಗಳಿಗೆ ಪರ್ಯಾಯವಾಗಿ 1ಕ್ಕೆ 10ರಷ್ಟು ಸಸಿಗಳನ್ನು ನೆಡಲಾಗುವುದು. ಈ ಸಂಬಂಧ ಬಿಬಿಎಂಪಿಗೆ ₹8.7 ಕೋಟಿ ಪಾವತಿಸಲಾಗಿದೆ. ಬಿಬಿಎಂಪಿ 22760 ಸಸಿಗಳನ್ನು ನೆಡಲು ಕ್ರಮ ವಹಿಸಿದೆ ಎಂದು ಕೆ-ರೈಡ್ ತಿಳಿಸಿತ್ತು.