ಬಂಟ್ವಾಳ: ನೀರಿನ ಸಮಸ್ಯೆಯಿಂದ ಕೃಷಿ ನಾಶವಾಯ್ತು ಎಂದು ಮನನೊಂದ ಕೃಷಿಕರೊಬ್ಬರು ನೀರು ಸೇದುವ ಹಗ್ಗದಿಂದ ಬಾವಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಮುಂಜಾನೆ ವೇಳೆ ನಡೆದಿದೆ.
ಪುತ್ತೂರು ಕೆದಂಬಾಡಿ ಗ್ರಾಮದ ಮಿತ್ರಂಪಾಡಿ ನಿವಾಸಿ ಭಾಸ್ಕರ್ ರೈ ( 53) ಆತ್ಮಹತ್ಯೆ ಮಾಡಿದವರು. ಭಾಸ್ಕರ್ ರೈ ಪುದು ಗ್ರಾಮದ ಪೆಲಪಾಡಿ ಎಂಬಲ್ಲಿ ಪತ್ನಿಯ ತಮ್ಮನ ಮನೆಯ ಬಾವಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುತ್ತೂರಿನ ಕೆದಂಬಾಡಿ ಗ್ರಾಮದಲ್ಲಿ ವಾಸವಾಗಿದ್ದು, ಬಂಟ್ವಾಳ ತಾಲೂಕಿನ ಪುದು ಗ್ರಾಮದ ಪೆಲಪಾಡಿಯಿಂದ ಮದುವೆಯಾಗಿದ್ದರು.ಕೃಷಿಯನ್ನು ನಂಬಿ ಬದುಕುತ್ತಿದ್ದ ಇವರಿಗೆ ಇತ್ತೀಚಿನ ದಿನಗಳಲ್ಲಿ ಕೃಷಿಗೆ ನೀರಿನ ಸಮಸ್ಯೆ ಉಂಟಾಗಿ,ಕೃಷಿಗೆ ಹಾನಿಯಾಗಿತ್ತು. ಕೃಷಿಯೇ ಮೂಲಾಧಾರವಾಗಿದ್ದ ಇವರಿಗೆ ನೀರಿನ ಸಮಸ್ಯೆಯಿಂದ ಕೃಷಿ ಹಾಳಾದ ಕಾರಣ ಮನನೊಂದಿದ್ದರು. ಇದರಿಂದ ನಿದ್ರಾಹೀನತೆಗೆ ಒಳಗಾಗಿದ್ದರು. ಇದೇ ಕಾರಣದಿಂದ ಪತ್ನಿಯ ತಮ್ಮನ ಮನೆ ಪುದುವಿಗೆ ಬಂದಿದ್ದರು. ಅಲ್ಲಿಂದ ನಿದ್ರಾಹೀನತೆ ಸಮಸ್ಯೆಗೆ ಪರಿಹಾರಕ್ಕಾಗಿ ಮಂಗಳೂರಿನ ವೈದ್ಯರ ಬಳಿಗೆ ಚಿಕಿತ್ಸೆಗೆ ತೆರಳಿ ವಾಪಸ್ ಬಾವನ ಮನೆಯಲ್ಲಿ ಉಳಿದುಕೊಂಡಿದ್ದರು.
ಮಂಗಳವಾರ ರಾತ್ರಿ ಊಟ ಮಾಡಿ ಹಾಲ್‌ನಲ್ಲಿ ಮಲಗಿದ್ದು, ಮ ರಾತ್ರಿ ಇವರು ಮಲಗಿದ್ದಲ್ಲಿ ಇಲ್ಲದೆ ಕಾಣೆಯಾಗಿದ್ದರು. ಮನೆಯವರು ಹುಡುಕಾಡಿದಾಗ ಮನೆಯ ಪಕ್ಕದ ಬಾವಿಯಲ್ಲಿ ನೀರು ಎಳೆಯಲು ಹಾಕಿರುವ ರಾಟೆಯ ಕಬ್ಬಿಣದ ಕೊಂಡಿಗೆ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ತಮ್ಮಶುಭಕರ ರೈ ದೂರಿನಲ್ಲಿ ತಿಳಿಸಿದ್ದಾರೆ.ಕೃಷಿ ಹಾನಿಯ ಬಗ್ಗೆ ಚಿಂತೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು, ಬಂಟ್ವಾಳ ಗ್ರಾಮಾಂತರ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ.ಕ್ರೀಯಾಶೀಲ ವ್ಯಕ್ತಿತ್ವ: ಕೆದಂಬಾಡಿ ಪಂಚಾಯಿತಿ ಸದಸ್ಯರಾಗಿದ್ದ ಭಾಸ್ಕರ ರೈ ಮಿತ್ರಂಪಾಡಿಯವರು, ಕಳೆದ ಅವಧಿಯಲ್ಲಿ ಗ್ರಾ.ಪಂ. ಉಪಾಧ್ಯಕ್ಷರಾಗಿದ್ದರು. ಶ್ರೀಕೃಷ್ಣ ಮಿತ್ರವೃಂದದ ಮಾಜಿ ಅಧ್ಯಕ್ಷರಾಗಿದ್ದ ಇವರು, ಶ್ರೀ ಕೃಷ್ಣ ಕಲಾವಿದೆರ್ ತಂಡದಲ್ಲಿಯೂ ಹಾಸ್ಯ ಕಲಾವಿದರಾಗಿ ಕ್ರಿಯಾಶೀಲ ವ್ಯಕ್ತಿತ್ವ ಹೊಂದಿದವರು. ----