ಉದ್ಯೋಗಮುಖಿ ಬದಲು ಜ್ಞಾನಮುಖಿ ಶಿಕ್ಷಣ ವ್ಯವಸ್ಥೆ ಬರಲಿ

KannadaprabhaNewsNetwork |  
Published : Aug 31, 2024, 01:32 AM IST
1 | Kannada Prabha

ಸಾರಾಂಶ

ಡಾ.ಪಿ.ವಿ. ನಾಗರಾಜ ಅವರ ಎರಡು ಕೃತಿಗಳ ಲೋಕಾರ್ಪಣೆ

ಕನ್ನಡಪ್ರಭ ವಾರ್ತೆ ಮೈಸೂರು

ಉದ್ಯೋಗಮುಖಿ ಬದಲು ಜ್ಞಾನಮುಖಿ ಶಿಕ್ಷಣ ವ್ಯವಸ್ಥೆ ಬರಬೇಕು ಎಂದು ಖ್ಯಾತ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಪಡುವಾರಹಳ್ಳಿಯ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ತನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಪಿ.ವಿ. ನಾಗರಾಜ ಅವರ ಗುರುವೇ ನಿಮಗೆ ಶರಣು ಹಾಗೂ ಹಚ್ಚೇವು ಕನ್ನಡದ ದೀಪ ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಯಾವುದೇ ಪಕ್ಷದ ಸರ್ಕಾರಗಳಿದ್ದರೂ ಈ ಬಗ್ಗೆ ಚಿಂತಿಸಿಲ್ಲ. ಈವರೆಗೂ ಸಮಾನ ಶಿಕ್ಷಣ ನೀತಿ ಬಂದಿಲ್ಲ. ಶಿಶುವಿಹಾರಕ್ಕೆ ಹೋಗುವವರು ಇದ್ದಾರೆ. ಎಲ್ಕೆಜಿಗೆ ಸೇರುವವರು ಇದ್ದಾರೆ. ಮೊದಲೆಲ್ಲಾ ಶಿಕ್ಷಣ ಸೇವೆಯಾಗಿತ್ತು. ಈಗ ಉದ್ಯಮವಾಗಿದೆ. ಶಿಕ್ಷಣ ತಜ್ಞರ ಜಾಗವನ್ನು ಶಿಕ್ಷಣೋದ್ಯಮಿಗಳು ಅತಿಕ್ರಮಿಸಿಕೊಂಡಿದ್ದಾರೆ. ಗುರುಗಳು ಮತ್ತು ವಿದ್ಯಾರ್ಥಿಗಳ ನಡುವೆ ಸಂಬಂಧ ಹದಗೆಡಲು ಇದು ಒಂದು ಕಾರಣ ಎಂದು ಅವರು ಹೇಳಿದರು.

ಅತಿರೇಕದ ತಂತ್ರಜ್ಞಾನ ಅಳವಡಿಕೆಯಿಂದ ಶಿಕ್ಷಣದ ತತ್ವಜ್ಞಾನ ಕಡಿಮೆಯಾಗುತ್ತಿದೆ. ವಿವೇಚನೆ ಇಲ್ಲದ ತಂತ್ರಜ್ಞಾನ ಬಳಕೆ ಗುರು- ಶಿಷ್ಯರ ಸಂಬಂಧವನ್ನು ಕೆಡಿಸುತ್ತಿದೆ ಎಂದ ಅವರು, ತರಗತಿಗಳಲ್ಲಿ ಗುರು- ಶಿಷ್ಯರ ನಡುವೆ ಸಂವಾದ ನಡೆಯಬೇಕು. ಪ್ರಸ್ತುತ ಪ್ರಾಧ್ಯಾಪಕರು ಜಾಸ್ತಿಯಾಗಿದ್ದಾರೆ. ಮೇಷ್ಟ್ರುಗಳು ಕಡಿಮೆಯಾಗಿದ್ದಾರೆ ಎಂದರು.

ಅದೇ ರೀತಿ ವಿವಾದ ಇಲ್ಲದ ವಿವಿಯನ್ನು ನೋಡುವುದು, ಸಾವಿಲ್ಲದ ಮನೆಯಿಂದ ಸಾಸುವೆ ತರುವುದು ಎರಡೂ ಒಂದೇ ಆಗಿದೆ ಎಂದು ಅವರು ವಿಷಾದಿಸಿದರು. ಇವತ್ತು ಹೆಣ್ಣು ಮಕ್ಕಳು ಅಕ್ಷರ ಕಲಿತಿದ್ದರೆ ಅದಕ್ಕೆ ಸಾವಿತ್ರಿಬಾಯಿ ಫುಲೆ ಹಾಗೂ ಫಾತಿಮಾ ಶೇಖ್ ಕಾರಣ. ಅವರು ಅವತ್ತು ಶಿಕ್ಷಣ ಕಲಿಸಲು ಹೊರಟಾಗ ಕಲ್ಲು ತೂರಿದರು. ಅವು ಈಗ ಹೂವುಗಳಾಗಿ ಪರಿವರ್ತನೆಯಾಗಿವೆ.

ನೇತ್ರದಾನ ಆಂದೋಲನ ಆಗಬೇಕು

ಡಾ.ರಾಜಕುಮಾರ್ ಅವರು ನೇತ್ರದಾನದ ಪ್ರತಿಪಾದನೆ ಮಾಡಿದರು. ನೇತ್ರದಾನ ಒಂದು ಚಳವಳಿಯ ರೀತಿಯಾದರೆ ವಿಶೇಷ ಕಣ್ಣುಗಳಿಗೆ ಬದಲಾಗಿ ಡಾ.ಪಿ.ವಿ. ನಾಗರಾಜ ಅಂಥವರಿಗೆ ನಿಜವಾದ ಕಣ್ಣುಗಳು ಬರುತ್ತವೆ ಎಂದು ಅವರು ಹೇಳಿದರು.

ಶಿಕ್ಷಣ ಮೂಲಶಕ್ತಿ, ಸಿನಿಮಾ ಮಾಧ್ಯಮ ಶಕ್ತಿ. ಒಂದು ಅಕ್ಷರ ಮಾಧ್ಯಮ, ಮತ್ತೊಂದು ದೃಶ್ಯ ಮಾಧ್ಯಮ. ಇವರೆರಡರ ಬಗೆಯೂ ಡಾ.ಪಿ.ವಿ. ನಾಗರಾಜ ಅವರ ಕೃತಿ ರಚಿಸಿದ್ದಾರೆ. ಗುರುಗಳನ್ನು ಸ್ಮರಿಸಿ, ಕೃತಿ ರಚಿಸಿದ್ದಾರೆ. ಇವರೊಂದು ರೀತಿಯಲ್ಲಿ ಜನಪದ ಸಾಧಕರು ಎಂದು ಅವರು ಬಣ್ಣಿಸಿದರು.

ಸಾಹಿತಿಗಳಾದ ಓ.ಎಲ್. ನಾಗಭೂಷಣಸ್ವಾಮಿ, ರಾಜಪ್ಪ ದಳವಾಯಿ ಮುಖ್ಯಅತಿಥಿಗಳಾಗಿದ್ದರು. ಪ್ರಾಂಶುಪಾಲ ಪ್ರೊ. ಸೋಮಣ್ಣ ಅಧ್ಯಕ್ಷತೆ ವಹಿಸಿದ್ದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕೆ.ಇ. ಗೋವಿಂದೇಗೌಡ ಸ್ವಾಗತಿಸಿದರು. ಸರ್ಜಾಶಂಕರ್ ಹರಳಿಮಠ ನಿರೂಪಿಸಿದರು. ಎಂ. ಮಹಾಲಿಂಗು ಮತ್ತು ತಂಡದವರು ಹಚ್ಚೇವು ಕನ್ನಡದ ದೀಪ ಗೀತೆ ಹಾಡಿದರು. ಬಿ ಸುಜಾತಾ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!