ಚುನಾವಣೆ ಪ್ರಚಾರ ಸಾಮಗ್ರಿ ಮೇಲೆ ಮುದ್ರಕರ ವಿವರ ಕಡ್ಡಾಯ

KannadaprabhaNewsNetwork |  
Published : Mar 22, 2024, 01:01 AM IST
ಫೋಟೋ- ಪ್ರಿಂಟ್‌ 1 | Kannada Prabha

ಸಾರಾಂಶ

ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಮುದ್ರಣವಾಗುವ ಪ್ರತಿ ಚುನಾವಣಾ ಪ್ರಚಾರ ಸಾಮಗ್ರಿಗಳ ಮೇಲೆ ಮುದ್ರಕರ ಮತ್ತು ಪ್ರಕಾಶರ ಹೆಸರು ಮತ್ತು ವಿಳಾಸ ಕಡ್ಡಾಯವಾಗಿ ನಮೂದಿಸಬೇಕು ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮುದ್ರಕರಿಗೆ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಲೋಕಸಭೆ ಚುನಾವಣೆ ಘೋಷಣೆಯಾಗಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಮುದ್ರಣವಾಗುವ ಪ್ರತಿ ಚುನಾವಣಾ ಪ್ರಚಾರ ಸಾಮಗ್ರಿಗಳ ಮೇಲೆ ಮುದ್ರಕರ ಮತ್ತು ಪ್ರಕಾಶರ ಹೆಸರು ಮತ್ತು ವಿಳಾಸ ಕಡ್ಡಾಯವಾಗಿ ನಮೂದಿಸಬೇಕು ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮುದ್ರಕರಿಗೆ ಹೇಳಿದರು.

ಗುರುವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಮುದ್ರಕರೊಂದಿಗೆ ಸಭೆ ನಡೆಸಿದ ಅವರು, ಪ್ರಜಾ ಪ್ರತಿನಿಧಿ ಕಾಯ್ದೆ-1951ರ ನಿಯಮ 127ಎ ಪ್ರಕಾರ ಚುನಾವಣೆ ಪ್ರಚಾರಕ್ಕೆ ಸಂಬಂಧಿಸಿದ ಪ್ರತಿ ಕರಪತ್ರ, ಹ್ಯಾಂಡ್ ಬಿಲ್, ಬಂಟಿಂಗ್, ಬ್ಯಾನರ್, ಪಾಂಫ್ಲೆಟ್ಸ್ ಮೇಲೆ ಮುದ್ರಕರ ಮತು ಪ್ರಕಾಶರ ವಿವರ ಮತ್ತು ಮುದ್ರಣ ಸಂಖ್ಯೆ ನಮೂದಿಸುವುದು ಕಡ್ಡಾಯವಾಗಿದೆ. ಇದನ್ನು ಎಲ್ಲಾ ಮುದ್ರಕರು ಪಾಲಿಸುವ ಮೂಲಕ ಚುನಾವಣಾ ಆಯೋಗಕ್ಕೆ ಸಹಕಾರ ನೀಡಬೇಕು ಎಂದರು.

ಜಿಲ್ಲೆಯ ಪ್ರತಿ ಮುದ್ರಕರು ತಮ್ಮ ಬಳಿಗೆ ಮುದ್ರಣಕ್ಕೆ ಬರುವ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳಿಂದ ಪ್ರತಿ ಚುನಾವಣಾ ಸಾಮಗ್ರಿಗೆ ಪ್ರತ್ಯೇಕವಾಗಿ ಅಪೆಂಡಿಕ್ಸ್ “ಎ” ನಲ್ಲಿ ದೃಢೀಕರಣ ಪಡೆಯಬೇಕು. ಈ ದೃಢೀಕರಣಕ್ಕೆ ಪ್ರಕಾಶಕರನ್ನು ಚೆನ್ನಾಗಿ ಬಲ್ಲ ಇಬ್ಬರು ಪ್ರತಿ ಸಹಿ ಮಾಡಬೇಕು. ಚುನಾವಣಾ ಪ್ರಚಾರ ಸಾಮಗ್ರಿ ಮುದ್ರಿಸಿದ ಮೂರು ದಿನದೊಳಗೆ ಅಪೆಂಡಿಕ್ಸ್ “ಬಿ” ನಲ್ಲಿ ಮುದ್ರಕರು ಮುದ್ರಣ ಸಾಮಗ್ರಿ ವಿವರ, ಪ್ರತಿ, ವೆಚ್ಚ ಒಳಗೊಂಡಂತೆ ಮಾಹಿತಿ ಭರ್ತಿ ಮಾಡಿ ಅದರೊಂದಿಗೆ ಪ್ರಚಾರ ಸಾಮಗ್ರಿ ಮೂರು ಪ್ರತಿ ಹಾಗೂ ಪ್ರಕಾಶಕರು ನೀಡಿರುವ ಅಪೆಂಡಿಕ್ಸ್ ‘ಎ’ ನಮೂನೆ ಲಗತ್ತಿಸಿ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿಗೆ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಚುನಾವಣಾ ಪ್ರಚಾರ ಸಾಮಗ್ರಿ ಹೊರತಾಗಿ ಇತರೆ ಮುದ್ರಣ ಕಾರ್ಯದ ಬಗ್ಗೆ ಯಾವುದೇ ಮಾಹಿತಿ ನೀಡಬೇಕಿಲ್ಲ ಎಂದು ಡಿ.ಸಿ. ಸ್ಪಷ್ಟಪಡಿಸಿದರು.

ಜಾತಿ, ಧರ್ಮ, ಪಂಗಡ, ಭಾಷೆ, ಜನಾಂಗ ಆಧಾರದ ಮೇಲೆ ಮತ ಕೇಳುವ, ಎದುರಾಳಿಯ ವೈಯಕ್ತಿಕ ಚಾರಿತ್ರ್ಯ ಹರಣ ಮಾಡುವ, ದೇಶದ ಏಕತೆಗೆ ಧಕ್ಕೆ ತರುವ ಸೇರಿದಂತೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಮುದ್ರಣ ಕಾರ್ಯ ಮಾಡಬೇಕು ಎಂದರು.

ಒಂದು ವೇಳೆ ಪ್ರಜಾ ಪ್ರತಿನಿಧಿ ಕಾಯ್ದೆ-1951ರ 127ಎ ನಿಯಮ ಉಲ್ಲಂಘಿಸಿದಲ್ಲಿ 6 ತಿಂಗಳ ಶಿಕ್ಷೆ ಅಥವಾ 2,000 ರೂ. ದಂಡ ಅಥವಾ ಎರಡು ವಿಧಿಸುವ ಅವಕಾಶವಿದೆ. ಇದಲ್ಲದೆ ಇತರೆ ಕಾಯ್ದೆಯನ್ವಯ ಲೈಸೆನ್ಸ್ ವಾಪಸ್ ಪಡೆಯುವ ಅಧಿಕಾರ ಸಹ ಹೊಂದಲಾಗಿದೆ ಎಂದು ಮುದ್ರಕರಿಗೆ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಮಾಹಿತಿ ನೀಡಿದರು.

ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರು ಚುನಾವಣೆಯ ಮಾದರಿ ನೀತಿ ಸಂಹಿತೆ ಅವಧಿಯ ಸಂದರ್ಭದಲ್ಲಿ ಮುದ್ರಕರು ಅನುಸರಿಸಬೇಕಾದ ಕ್ರಮಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು. ಸಭೆಯಲ್ಲಿ ಜಿಲ್ಲೆಯ ಮುದ್ರಕರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲವು ಜಿಲ್ಲೆಗಳಲ್ಲಿ ಶೀತಗಾಳಿ ತಾಪಮಾನ 5-7 ಡಿಗ್ರಿ ಇಳಿಕೆ
‘ಬಾಡಿಗೆ ತಾಯ್ತನ’ದಿಂದ ಮಗು : ವೃದ್ಧ ದಂಪತಿಯಿಂದ ಕೋರ್ಟ್‌ ಮೊರೆ