)
ಕನ್ನಡಪ್ರಭ ವಾರ್ತೆ ವಿಧಾನಸಭೆ
ಗುರುವಾರ ಗಮನ ಸೆಳೆಯುವ ಸೂಚನೆಯಡಿ ಬಿಜೆಪಿ ಸದಸ್ಯ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ಬೆಂಗಳೂರಿಗೆ ಸುತ್ತಲಿನ ಪ್ರದೇಶಗಳಿಂದ ಪೂರೈಕೆಯಾಗುತ್ತಿರುವ ಆಹಾರ ಉತ್ಪನ್ನಗಳಲ್ಲಿ ಭಾರಿ ಲೋಹಗಳು ಸೇರಿದಂತೆ ಹಾನಿಕಾರಕ ಅಂಶಗಳು ಪತ್ತೆಯಾಗಿರುವುದು ಅತ್ಯಂತ ಕಳವಳಕಾರಿ ಸಂಗತಿ. ಇದನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಲಿದೆ. ಈ ಸಂಬಂಧ ಶೀಘ್ರದಲ್ಲೇ ಸಭೆ ನಡೆಸಿ ಸೂಕ್ತ ಮಾರ್ಗಸೂಚಿಸಿ ರೂಪಿಸಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ನೀರು, ಮಣ್ಣು, ಆಹಾರ ಹೀಗೆ ಎಲ್ಲವೂ ಮಲೀನ ಆಗುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲಿ ಮಾಲಿನ್ಯದ ಪ್ರಮಾಣ ಜಾಸ್ತಿ ಇದೆ. ತ್ಯಾಜ್ಯನೀರು ಶುದ್ಧೀಕರಣ ಘಟಕಗಳು (ಎಸ್‌ಟಿಪಿ) ಕಾಲಮಿತಿಯಲ್ಲಿ ಆಗುತ್ತಿಲ್ಲ. ಈಗಾಗಲೇ ಇರುವ ಎಸ್‌ಟಿಪಿಗಳು ಸಂಪೂರ್ಣ ಸಾಮರ್ಥ್ಯದಲ್ಲಿ ಶುದ್ಧೀಕರಿಸುತ್ತಿಲ್ಲ. ನಗರದ ಕೆರೆಗಳಿಗೆ ಕೊಳಚೆ ನೀರು ಸೇರಿ ನೀರಿ ಮಲಿನವಾಗುತ್ತಿದೆ. ಈ ಎಲ್ಲ ಹಿನ್ನೆಲೆಯಲ್ಲಿ ದೀರ್ಘಕಾಲದ ಯೋಜನೆ ರೂಪಿಸುವ ಅಗತ್ಯವಿದೆ ಎಂದು ಹೇಳಿದರು.ಅಂತರ ಸಚಿವಾಲಯ ಸಮಿತಿ ಅಗತ್ಯ: ಆರೋಗ್ಯ ಸಚಿವರ ಪರವಾಗಿ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ ಖರ್ಗೆ, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ. ನಗರಕ್ಕೆ ಪೂರೈಕೆಯಾಗುತ್ತಿರುವ ಹಣ್ಣು, ತರಕಾರಿ, ಹಾಲು, ಸೊಪ್ಪು ಸೇರಿದಂತೆ ಆಹಾರ ಪದಾರ್ಥಗಳ ಗುಣಮಟ್ಟ ಕಾಯ್ದುಕೊಳ್ಳಲು ಪಶು ಸಂಗೋಪನೆ, ತೋಟಗಾರಿಕೆ, ಅರಣ್ಯ, ಆಹಾರ ಇಲಾಖೆ ಸೇರಿದಂತೆ ಸಂಬಂಧಿತ ಇಲಾಖೆಗಳನ್ನು ಸೇರಿಸಿಕೊಂಡು ‘ಅಂತರ ಸಚಿವಾಲಯ ಸಮಿತಿ’ ರಚನೆ ಸೇರಿದಂತೆ ಸೂಕ್ತ ಕ್ರಮಗಳ ಅಗತ್ಯವಿದೆ ಎಂದರು.
ಇದಕ್ಕೂ ಮುನ್ನ ಮಾತನಾಡಿ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ, ಬೆಂಗಳೂರು ಸುತ್ತ ಬೆಳೆಯುವ ತರಕಾರಿ ಮತ್ತು ಸೊಪ್ಪುಗಳಲ್ಲಿ ಸೀಸ ಸೇರಿದಂತೆ ಭಾರಿ ಲೋಹಗಳು ಪತ್ತೆಯಾಗಿವೆ. ಅದು ನಿಗದಿತ ಮಟ್ಟಕ್ಕಿಂತ ಹತ್ತಾರು ಪಟ್ಟು ಹೆಚ್ಚಿವೆ. ಬೀದಿಬದಿ ಫಾಸ್ಟ್‌ಫುಡ್ ಅಂಗಡಿಗಳು ಮತ್ತು ಕೆಲವು ಹೋಟೆಲ್‌ಗಳಲ್ಲಿ ನಿಷೇಧಿತ ರಾಸಾಯನಿಕಗಳನ್ನು ಬಳಕೆ ಮಾಡಲಾಗುತ್ತಿದೆ. ಕೊಳಚೆ ನೀರನ್ನು ಕೇವಲ ಎರಡು ಹಂತದಲ್ಲಿ ನೀರು ಶುದ್ಧೀಕರಿಸಿ ಕಾಲುವೆಗಳಿಗೆ ಬಿಡಲಾಗುತ್ತಿದೆ. ಈ ನೀರನ್ನೇ ಕೃಷಿಗೆ ಬಳಸುತ್ತಿರುವುದರಿಂದ ಆಹಾರ ಪದಾರ್ಥಗಳ ಮಾಲಿನ್ಯಕ್ಕೆ ಕಾರಣವಾಗಿದೆ ಎಂದು ಸದನದ ಗಮನಸೆಳೆದರು. ಆರೋಗ್ಯದ ಮೇಲೆ ದುಷ್ಪರಿಣಾಮ:
ಮುಂದುವರಿದು, ನಗರದಲ್ಲಿರುವ ಪ್ರತಿ ಇಬ್ಬರಲ್ಲಿ ಒಬ್ಬರಿಗೆ ಯಕೃತ್ತಿನಲ್ಲಿ ಕೊಬ್ಬಿನಾಂಶ ಹೆಚ್ಚಿರುವುದು ಪತ್ತೆಯಾಗುತ್ತದೆ. ಹೆಚ್ಚಿನ ಜನರಲ್ಲಿ ಹೊಟ್ಟೆನೋವಿನ ಸಮಸ್ಯೆಗಳು ಕಂಡುಬರುತ್ತಿವೆ. ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಸೂಚನೆ ಮೇರೆಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ ಅಧ್ಯಯನ ವರದಿಯಲ್ಲಿ ಬೆಂಗಳೂರು ಸುತ್ತ ಬೆಳೆದ 70ಕ್ಕೂ ಹೆಚ್ಚು ತರಕಾರಿಗಳಲ್ಲಿ ಭಾರಿ ಲೋಹದ ಅಂಶಗಳು ಇರುವುದು ಬೆಳಕಿಗೆ ಬಂದಿದೆ. ವಿದೇಶಗಳಲ್ಲಿ ಆಹಾರ ಪದಾರ್ಥಗಳ ಮೇಲೆ ನಿಗಾವಹಿಸಲಾಗುತ್ತಿದೆ. ಇಲ್ಲಿ ಕೇಳುವವರೇ ಇಲ್ಲದಂತಾಗಿದೆ. ಹೀಗಾಗಿ ನಮ್ಮಲ್ಲಿ ಮೇಲುಸ್ತುವಾರಿಗೊಂದು ಇಂಟರ್ ಮಿನಿಸ್ಟ್ರೀ ಕಮಿಟಿ ರಚಿಸುವ ಅಗತ್ಯವಿದೆ ಎಂದು ಹೇಳಿದರು. ಹಾಲು, ಕೋಳಿ ಸಹ ವಿಷಕಾರಿಇದಕ್ಕೆ ದನಿಗೂಡಿಸಿದ ಪ್ರತಿಪಕ್ಷ ನಾಯಕ ಆರ್.ಅಶೋಕ, ಬೆಂಗಳೂರಿಗೆ ಬರುವ ಹೆಚ್ಚಿನ ತರಕಾರಿ, ಸೊಪ್ಪು, ಹಾಲು, ಕೋಳಿ, ಮೊಟ್ಟೆ ವಿಷಕಾರಿಯಾಗಿದೆ. ಮೂರು ತಿಂಗಳ ಕೋಳಿಗೆ ಸ್ಟೇರಾಯ್ಡ್ ಕೊಟ್ಟು ಆರು ತಿಂಗಳ ಕೋಳಿಯಂತೆ ದಟ್ಟಪುಷ್ಠವಾಗಿ ಬೆಳೆಯುವಂತೆ ಮಾಡಲಾಗುತ್ತಿದೆ. ಬೀದಿಬದಿ ಮಾರಾಟ ಮಾಡುವ ತರಕಾರಿ, ಆಹಾರಗಳು ಗುಣಮಟ್ಟದ ಬಗ್ಗೆ ಯಾರೋ ತಲೆಕಡೆಸಿಕೊಳ್ಳುವುದಿಲ್ಲ. ಹೀಗಾಗಿ ಗುಣಮಟ್ಟದ ಮೇಲೆ ನಿಗಾವಹಿಸಲು ಸರ್ಕಾರ ಸಮಿತಿ ರಚನೆ ಜೊತೆಗೆ ಸೂಕ್ತ ಮಾರ್ಗಸೂಚಿ ರೂಪಿಸಬೇಕು ಎಂದು ಆಗ್ರಹಿಸಿದರು.