ಹದಗೆಟ್ಟ ಮುಳಗುಂದ ಗದಗ ರಸ್ತೆ, ದುರಸ್ತಿಗೆ ಆಗ್ರಹ

KannadaprabhaNewsNetwork | Published : Aug 3, 2024 12:44 AM

ಸಾರಾಂಶ

ರಾತ್ರಿ ಸಮಯದಲ್ಲಿ ಭಾರೀ ವಾಹನಗಳ ಲೈಟ್‌ನ ಬೆಳಕಿಗೆ ರಸ್ತೆ ಕಾಣದೇ ಬೈಕ್ ಸವಾರರು ತಗ್ಗು ಗುಂಡಿಗಳಲ್ಲಿ ಬಿದ್ದು ಎಷ್ಟೋ ಜನ ಕೈ ಕಾಲು ಮುರಿದು ಕೊಂಡಿದ್ದಾರೆ

ಮುಳಗುಂದ: ಮುಳಗುಂದದಿಂದ ಜಿಲ್ಲಾ ಕೇಂದ್ರ ಗದಗಕ್ಕೆ ಮಾರ್ಗ ಕಲ್ಪಿಸುವ ಪಾಲಾ-ಬಾದಾಮಿ ರಾಜ್ಯ ಹೆದ್ದಾರಿ ರಸ್ತೆ ನಿರಂತರ ಮಳೆಯಿಂದ ಸಂಪೂರ್ಣ ಹದಗೆಟ್ಟಿದ್ದು, ರಸ್ತೆಯೂದ್ದಕ್ಕು ತಗ್ಗು ಗುಂಡಿಗಳದೇ ಕಾರುಬಾರು.

ಈ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು ಕೈಯಲ್ಲಿ ಜೀವ ಹಿಡಿದು ಸಂಚರಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಸ್ವಲ್ಪ ಆಯ ತಪ್ಪಿದರೂ ಶಿವನ ಪಾದವೇ ಗ್ಯಾರಂಟಿ ಎನ್ನುತ್ತಾರೆ ಬೈಕ್ ಸವಾರರು. ಮಳೆ ಬಂದಾಗಲಂತೂ ಈ ರಸ್ತೆ ಸ್ಥಿತಿ ಹೇಳ ತೀರಲಾರದೂ ರಸ್ತೆಗಳಲ್ಲಿ ಮೊಣಕಾಲುದ್ದದ ತಗ್ಗು ಗುಂಡಿಗಳು ಬಿದ್ದು, ಮಳೆ ನೀರು ಗುಂಡಿಗಳಲ್ಲಿ ನಿಂತು ತಗ್ಗು ಯಾವುದು ರಸ್ತೆ ಯಾವುದು ಎಂದು ತಿಳಿಯದೇ ವಾಹನ ಸವಾರರು ಪರದಾಡುವಂತಾಗಿದೆ.

ಕೈ ಕಾಲು ಮುರಿದುಕೊಂಡ ಸವಾರರು:

ರಾತ್ರಿ ಸಮಯದಲ್ಲಿ ಭಾರೀ ವಾಹನಗಳ ಲೈಟ್‌ನ ಬೆಳಕಿಗೆ ರಸ್ತೆ ಕಾಣದೇ ಬೈಕ್ ಸವಾರರು ತಗ್ಗು ಗುಂಡಿಗಳಲ್ಲಿ ಬಿದ್ದು ಎಷ್ಟೋ ಜನ ಕೈ ಕಾಲು ಮುರಿದು ಕೊಂಡಿದ್ದಾರೆ. ಜನ ಪ್ರತಿನಿಧಿಗಳು ಈ ರಸ್ತೆ ಮಾರ್ಗವಾಗಿ ಸಂಚರಿಸಲಿ ಆಗ ತಿಳಿಯುತ್ತೇ ಜನ ಸಮಾನ್ಯರ ಗೋಳು ಏನೂ ಎನ್ನುವುದು ಎಂದು ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು, ಪ್ರಜ್ಞಾವಂತರು ಈ ಭಾಗದ ಜನಪ್ರತಿನಿಧಿಗಳಿಗೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಕಳೆದೆರಡು ವರ್ಷಗಳ ಹಿಂದೆ ಗದಗ ನಾಗಾವಿ ಕ್ರಾಸ್‌ನಿಂದ ಮುಳಗುಂದ ಬಸಾಪುರ ಕ್ರಾಸ್‌ವರೆಗೆ ಲೋಕೋಪಯೋಗಿ ಇಲಾಖೆಯಿಂದ ಅಂದಾಜು ₹ 8.40 ಕೋಟಿ ವೆಚ್ಚದಲ್ಲಿ ದುರಸ್ತಿಗೊಳಿಸಿದ ರಸ್ತೆಯೂ ಸದ್ಯ ಹರ್ತಿಯಿಂದ ನಾಗಾವಿ ಕ್ರಾಸ್‌ ವರೆಗೂ ಸಂಪೂರ್ಣವಾಗಿ ಕಿತ್ತು ಹೋಗಿದ್ದು, ಮೊಣಕಾಲುದ್ದದ ತೆಗ್ಗು ಗುಂಡಿಗಳು ನಿರ್ಮಾಣವಾಗಿವೆ.

ಮಳೆಗಾಲದಲ್ಲಿ ಮುಳಗುಂದ-ರಸ್ತೆ ಹದೆಗೆಡುವುದು ಸಾಮಾನ್ಯವಾಗಿದೆ. ಸಂಬಂಧ ಪಟ್ಟ ಇಲಾಖೆ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು, ಸರ್ವ ಋುತುವಿಗೂ ಬಾಳಿಕೆ ಬರುವಂತಹ ರಸ್ತೆ ನಿರ್ಮಾಣ ಮಾಡಿ, ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಬೈಕ್‌ ಸವಾರರಾದ ಫಕ್ಕೀರೇಶ ಕತ್ತಿ, ಬಸವರಾಜ ಪಾಟೀಲ ತಿಳಿಸಿದ್ದಾರೆ.

Share this article