ಕನ್ನಡಪ್ರಭ ವಾರ್ತೆ ಮೇಲುಕೋಟೆ
ನೀಲಗಿರಿ ಮರಗಳು ಹೆಚ್ಚು ಬೆಳೆದ ರಸ್ತೆ ಬದಿಯ ಜಮೀನು ಸರ್ಕಾರಿಗೆ ಶಾಲೆಗೆ ಸೇರಿದ್ದರೆ, ಹಿಂಭಾಗದ ಜಮೀನು ಯದುಶೈಲಾ ಪ್ರೌಢ ಶಾಲೆಗೆ ಸೇರಿದೆ ಎಂಬುದು ಜಂಟಿ ಸರ್ವೇಯಲ್ಲಿ ಮತ್ತೊಮ್ಮೆ ಖಚಿತವಾದಂತಾಯಿತು.ನ್ಯಾಯಾಲಯ ಆದೇಶದಂತೆ ಬೆಳಗ್ಗೆ ಸ್ಥಳಕ್ಕಾಗಮಿಸಿದ ಪಾಂಡವಪುರ ತಾಲೂಕು ಸರ್ವೇಯರ್ ಭಾಸ್ಕರ್ ಯದುಶೈಲ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಕೆ.ಬಿ.ನರಸಿಂಹೇಗೌಡ ಮತ್ತು ಟ್ರಸ್ಟಿಗಳು, ಪ್ರತಿವಾದಿಯಾದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ಮುಖ್ಯಶಿಕ್ಷಕ ಸಂತಾನರಾಮನ್, ಎಸ್.ಡಿಎಂಸಿ ಅಧ್ಯಕ್ಷ ಮಹೇಶ್ ಸದಸ್ಯ ರಮೇಶ್ ಮತ್ತವರ ಕಡೆಯವರಿಗೆ ನ್ಯಾಯಾಲಯದ ಆದೇಶದ ಮಾಹಿತಿ ನೀಡಿ ಜಮೀನುಗಳನ್ನು ಅಳತೆ ಮಾಡುವ ಕಾರ್ಯ ಆರಂಭಿಸಿ ಎರಡೂ ಶಾಲೆಗಳಿಗೆ ಸೇರಿದ ಜಮೀನುಗಳ ಸಂಪೂರ್ಣ ಗಡಿ ಗುರುತಿಸುವ ಕಾರ್ಯ ಮಾಡಿದರು.
ನ್ಯಾಯಾಲಯದ ಆದೇಶದಂತೆ ಅಳತೆ ಮಾಡಿ ವಿಸ್ತೀರ್ಣ ಗುರುತಿಸುವ ಕಾರ್ಯ ಮುಕ್ತಾಯಗೊಳಿಸಿದ ತಾಲೂಕು ಸರ್ವೇಯರ್ ಮಹಜರ್‌ಗೆ ವಾದಿ ಮತ್ತು ಪ್ರತಿವಾದಿ ಹಾಗೂ ಗ್ರಾಮಸ್ಥರು ಸಹಿ ಮಾಡಲು ಕೋರಿದಾಗ ವಾದಿ ಯದುಶೈಲ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಕೆ.ಬಿ.ನರಸಿಂಹೇಗೌಡ ವಾದ ಮಾಡಿ ಮಹಜರ್‌ಗೆ ಸಹಿ ಹಾಕಲು ನಿರಾಕರಿಸಿದರು.ಆದರೆ, ಪ್ರತಿವಾದಿ ಮುಖ್ಯಶಿಕ್ಷಕ ಸಂತಾನರಾಮನ್, ಹಿರಿಯ ಸಹ ಶಿಕ್ಷಕಿ ಜಯಂತಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹೇಶ್, ಸದಸ್ಯ ರಮೇಶ್ ಸಿಆರ್‌ಪಿ ಬೆಟ್ಟಸ್ವಾಮಿಗೌಡ ಹಿರಿಯ ವಿದ್ಯಾರ್ಥಿಗಳೂ ಆದ ಈಶಮುರುಳಿ, ಅಹೋಬಿಲ ಮಠದ ಶಶಿಕುಮಾರ್, ಕೆ.ಎನ್ ಸುಬ್ರಮಣ್ಯ, ಸಿದ್ದರಾಮು, ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ, ಸರ್ಕಾರದ ಪರವಾಗಿ ಸಹಿ ಮಾಡಿದರು.
ಹಿರಿಯ ವಿದ್ಯಾರ್ಥಿ, ಸಾಮಾಜಿಕ ಹೋರಾಟಗಾರ ಈಶಮುರುಳಿ ಮಾತನಾಡಿ, ಸರ್ವೇ ಕಾರ್ಯದಲ್ಲಿ ಶಾಲೆಗೆ ಸೇರಿದ ಜಾಗದಲ್ಲೇ ಹೆಚ್ಚು ನೀಲಗಿರಿ ಮರಗಳಿರುವುದು ಕಂಡು ಬಂದಿದೆ. ಶಾಲೆ ಹಾಗೂ ಇತರೆ ಇಲಾಖೆಗೆ ಸೇರಿದ ಜಮೀನಿನಲ್ಲಿ ಬೆಳೆದ ನೀಲಗಿರಿ ಮರಗಳನ್ನು ಶ್ರೀಯದು ಶೈಲ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಕೆ.ಬಿ.ನರಸಿಂಹೇಗೌಡ ಈ ಜಾಗವೂ ನಮಗೇ ಸೇರಿದ್ದು ಎಂದು ಹೇಳುತ್ತಾ ಹಲವು ಬಾರಿ ಮರಕಡಿದು ಸಾಗಿಸಿದ್ದಾರೆ. ಅಸಂಬದ್ಧ ವಾದ ಮಾಡುತ್ತಾರೆ ಎಂದು ದೂರಿದರು.
ನ್ಯಾಯಾಲಯದ ಆದೇಶದಂತೆ ಜಂಟಿ ಸರ್ವೇ ಕಾರ್ಯ ನಡೆದಿದ್ದರೂ ಮಹಜರ್‌ಗೆ ಸಹಿ ಮಾಡದೆ ತಿರಸ್ಕರಿಸಿದ ಯದು ಶೈಲ ಪ್ರೌಢಶಾಲೆ ಕಾರ್ಯದರ್ಶಿ ನರಸಿಂಹೇಗೌಡ ಆದೇಶಕ್ಕೆ ಅಗೌರವ ತೋರಿದ್ದಾರೆ ಎಂದು ದೂರಿದರು.