ಹಾವೇರಿ: ದೇವನಹಳ್ಳಿ ಭೂಸ್ವಾಧೀನ ಪ್ರಕ್ರಿಯೆ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿದ್ದಕ್ಕೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಮುಖಂಡರು ಬುಧವಾರ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚುವ ಮೂಲಕ ವಿಜಯೋತ್ಸವವನ್ನು ಆಚರಿಸಿದರು.ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಭೂಸ್ವಾಧೀನ ಪ್ರಕ್ರಿಯೆ ವಿರೋಧದ ಹೋರಾಟದಲ್ಲಿ ಗಳಿಸಿರುವ ವಿಜಯವು ನಮಗೆಲ್ಲರಿಗೂ ಹೆಮ್ಮೆ, ಗೌರವ ಮತ್ತು ಶಕ್ತಿ ನೀಡಿದ ಸ್ಮರಣೀಯ ಕ್ಷಣವಾಗಿದೆ. ಈ ಜಯ ಕೇವಲ ಒಂದು ಹೋರಾಟದ ಅಂತ್ಯವಲ್ಲ, ಇದು ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ ಕನಸು, ತತ್ವ ಮತ್ತು ಹೋರಾಟದ ಪ್ರತ್ಯಕ್ಷ ಜೀವಂತ ಸಾಕ್ಷಿಯಾಗಿದೆ ಎಂದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ನಾವು ಇಂದು ಜಯ ಗಳಿಸಿದ್ದರೂ ಹೋರಾಟ ಇನ್ನೂ ಮುಕ್ತಾಯವಾಗಿಲ್ಲ. ಈ ವಿಜಯವು ಮುಂದಿನ ಹೋರಾಟಗಳಿಗೆ ದಾರಿದೀಪವಾಗಬೇಕಾಗಿದೆ ಎಂದರು.ರೈತ ಸಂಘದ ರಾಜ್ಯ ಮುಖಂಡ ಮಾಲತೇಶ ಪೂಜಾರ, ಮರಿಗೌಡ್ರ ಪಾಟೀಲ, ಪ್ರಭುಗೌಡ ಪ್ಯಾಟಿ, ಚನ್ನಪ್ಪ ಮರಡೂರ, ಮುತ್ತಣ್ಣ ಗುಡಗೇರಿ, ಶಿವಯೋಗಿ ಹೊಸಗೌಡ್ರ, ಶಾಂತನಗೌಡ ಪಾಟೀಲ, ಈರಣ್ಣ ಚಕ್ರಸಾಲಿ, ಮಲ್ಲನಗೌಡ ಮಾಳಗಿ, ಜಗದೀಶ ಮೂಲಿಮನಿ, ಸಿದ್ದಲಿಂಗಪ್ಪ ಬಳ್ಳಾರಿ, ಸೋಮಣ್ಣ ಜಡೆಗೊಂಡರ, ಶ್ರೀಕಾಂತ ದುಂಡಣ್ಣನವರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.ಶೀಘ್ರ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಬಿಡುಗಡೆ: ಬಿ.ಸಿ. ಪಾಟೀಲ
ರಟ್ಟೀಹಳ್ಳಿ: ಆ. 17ರಂದು ನಡೆಯುವ ಪಟ್ಟಣ ಪಂಚಾಯಿತಿ ಚುನಾವಣೆ ಹಿನ್ನೆಲೆ 15 ವಾರ್ಡ್‌ಗಳ ಮುಖಂಡರ ಹಾಗೂ ಟಿಕೆಟ್ ಆಕಾಂಕ್ಷಿಗಳ ಸಭೆ ನಡೆಸಿದ್ದು, ಎಲ್ಲರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದು, ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆಗೊಳಿಸಿ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರತಿ 15 ವಾರ್ಡ್‌ಗಳಲ್ಲೂ 5- 6 ಆಕಾಂಕ್ಷಿಗಳು ಟಿಕೆಟ್‍ಗಾಗಿ ಅರ್ಜಿ ಸಲ್ಲಿಸಿದ್ದು, ಅಲ್ಲಿನ ಮುಖಂಡರೆ ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಿ ಕಳಿಸಿದರೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು. ಆಗ ಉಳಿದೆಲ್ಲ ಅಭ್ಯರ್ಥಿಗಳು ಬಿಜೆಪಿ ಮುಖಂಡರ ಆಯ್ಕೆಗೆ ಮನ್ನಣೆ ನೀಡಿ ಎಲ್ಲರೂ ಒಗ್ಗಟ್ಟಿನಿಂದ ಅಭ್ಯರ್ಥಿ ಪರ ಕೆಲಸ ಮಾಡಿ 15 ವಾರ್ಡ್‌ಗಳಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವಂತ ಕಾರ್ಯವಾಗಬೇಕು ಎಂದರು.ಪಟ್ಟಣದ ಪ್ರಗತಿಗಾಗಿ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿದ್ದೇನೆ. ಅವುಗಳೇ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರೀರಕ್ಷೆಯಾಗಲಿವೆ. 110 ಕಿಲೋ ವ್ಯಾಟ್ ಗ್ರಿಡ್ ನಿರ್ಮಾಣ, ರಟ್ಟೀಹಳ್ಳಿಯನ್ನು ತಾಲೂಕನ್ನಾಗಿ ಮಾಡಿದ್ದೇನೆ, ಕಾರ್ಮಿಕರ ಭವನ, ಫೈರ್ ಎಂಜಿನ್ ಆಫೀಸ್, ಕೃಷಿ ಕಚೇರಿ, ಪ್ರವಾಸಿಮಂದಿರ, ರಾಷ್ಟ್ರೀಯ ಹೆದ್ದಾರಿ ಹೀಗೆ ಇನ್ನೂ ಅನೇಕ ಅಭಿವೃದ್ಧಿ ಕಾರ್ಯಗಳು ನನ್ನ ಅವಧಿಯಲ್ಲಿ ಮಾಡಲಾಗಿದೆ. ಕೃಷಿ ಇಲಾಖೆಯ 28 ಎಕರೆ ಜಾಗ ಅನ್ಯರ ಪಾಲಾಗುತ್ತಿದ್ದ ಸಂದರ್ಭದಲ್ಲಿ ಹೋರಾಡಿ ಸರ್ಕಾರದ ಆಸ್ತಿ ಉಳಿಸಲಾಗಿದೆ ಎಂದರು.