ಕನ್ನಡಪ್ರಭ ವಾರ್ತೆ ಹಾಸನ
ದೇವರ ದಾಸಿಮಯ್ಯ ಅವರು ಕೇವಲ ಒಂದು ಜಾತಿ ಧರ್ಮಕ್ಕೆ ಸೀಮಿತವಾಗದೆ ಸಮಸ್ತ ಕುಲ ಕೋಟಿಗೆ ಸೇರಿದವರಾಗಿದ್ದಾರೆ. ಇವರು ವಚನ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಅಪಾರವಾದದ್ದು ಎಂದು ನಗರಸಭೆಯ ಅಧ್ಯಕ್ಷ ಚಂದ್ರೇಗೌಡ ಅವರು ತಿಳಿಸಿದ್ದಾರೆ.ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಬುಧವಾರ ಹಾಸನಾಂಬ ಕಲಾಭವನದಲ್ಲಿ ಆಯೋಜಿಸಿದ್ದ ಶ್ರೀ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಗರದ ಆರ್.ಸಿ ರಸ್ತೆಯಲ್ಲಿ ದೇವರ ದಾಸಿಮಯ್ಯ ಅವರ ಸರ್ಕಲ್ ನಿರ್ಮಿಸಿರುವುದು ಎಲ್ಲರಿಗೂ ಸಂತಸದ ವಿಷಯವಾಗಿದೆ. ಕ್ರಿಯೆ ಜ್ಞಾನದಿಂದ ಉತ್ತಮ ಮನುಷ್ಯರಾಗಬಲ್ಲಿರಿ ಎಂದು ದೇವರ ದಾಸಿಮಯ್ಯ ಅವರು ಹೇಳಿದ್ದಾರೆ. ಇವರು ದೇವರಿಗೆ ಪ್ರಶ್ನೆ ಮಾಡಿದ ಮಹಾನ್ ಮೇಧಾವಿ ಆಗಿದ್ದಾರೆ ಎಂದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಪಿ ಕೃಷ್ಣೇಗೌಡ ಅವರು ಮಾತನಾಡಿ, ದೇವರ ದಾಸಿಮಯ್ಯ ಅವರು ೧೨ನೇ ಶತಮಾನದಲ್ಲಿ ಗದಗ ಜಿಲ್ಲೆಯಲ್ಲಿ ಜನಿಸಿದರು, ಇವರು ನೇಕಾರರಾಗಿದ್ದಾರೆ. ದೇಹದ ಸಂರಕ್ಷಣೆಗಾಗಿ ವಸ್ತ್ರವನ್ನು ತಯಾರಿಸುವ ಮೂಲಕ ಸಮಾಜದ ಮಾನವ ಕುಲಕ್ಕೆಲ್ಲ ಅನುಕೂಲ ಮಾಡಿಕೊಟ್ಟಿದ್ದಾರೆ. ಅವರ ವಚನ, ಜೀವನ ಶೈಲಿ, ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.ಸಾಹಿತಿಗಳಾದ ಗೊರೂರು ಅನಂತರಾಜು ಅವರು ಮಾತನಾಡಿ, ನೇಯ್ಗೆ ಕಾಯಕದ ಅವತಾರ ಪುರುಷ ದೇವರ ದಾಸಿಮಯ್ಯ ಅವರಾಗಿದ್ದಾರೆ, ಇವರು ಬಸವಾದಿ ಶರಣರಿಗೂ ಮಾರ್ಗದರ್ಶಕರಾಗಿದ್ದವರು, ನೇಯ್ಗೆ ವೃತ್ತಿಯಿಂದ ಕಾಯಕಕ್ಕೆ ಬುನಾದಿ ಹಾಕಿದವರು, ವಚನ ಸಾಹಿತ್ಯಕ್ಕೆ ಪೀಠಿಕೆ ಬರೆದು ಮುನ್ನುಡಿ ಹಾಕಿದವರು ದೇವರ ದಾಸಿಮಯ್ಯ, ಶರಣರ ತತ್ವಗಳನ್ನು ಪ್ರಚಾರ ಮಾಡಿದವರಾಗಿದ್ದಾರೆ. ಬಸವಣ್ಣನವರು ಕೂಡ ಇವರ ಕುರಿತು ವಚನಗಳಲ್ಲಿ ಹಾಡಿ ಹೊಗಳಿದ್ದಾರೆ ಎಂದು ದೇವರ ದಾಸಿಮಯ್ಯ ಅವರ ಕುರಿತು ಸವಿವರವಾಗಿ ಉಪನ್ಯಾಸ ನೀಡಿದರು.
ಜಿಲ್ಲಾಧಿಕಾರಿಯವರ ಕಚೇರಿಯ ತಹಸೀಲ್ದಾರ್ ಎಲ್. ರಮೇಶ್ ಅವರು ಮಾತನಾಡಿ, ಮಹನೀಯರು ಹಾಕಿ ಕೊಟ್ಟಿರುವ ಉತ್ತಮ ಸಂದೇಶಗಳ ಹಾದಿಯಲ್ಲಿ ನಾವೆಲ್ಲರೂ ನಡೆಯಲು ಸರ್ಕಾರ ಈ ಜಯಂತಿಗಳನ್ನು ಆಚರಣೆ ಮಾಡುತ್ತ ಬರುತ್ತಿದೆ. ಈ ಮಹನೀಯರು ತಮ್ಮ ವಚನಗಳ ಮೂಲಕ ಸಮಾಜವನ್ನು ತಿದ್ದುವಂತಹ ಕೆಲಸಗಳನ್ನು ಮಾಡಿದ್ದಾರೆ. ಇವರನ್ನು ನಾವೆಲ್ಲರೂ ಸ್ಮರಿಸೋಣ, ಅವರ ಹಾದಿಯಲ್ಲಿ ನಡೆಯೋಣ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಹೆಚ್.ಪಿ ತಾರಾನಾಥ್, ತಹಸೀಲ್ದಾರ್ ಮೋಹನ್ ಕುಮಾರ್, ಹಾಸನ ನೌಕರ ಸಂಘದ ಗೌರವಾಧ್ಯಕ್ಷರಾದ ಈ.ಕೃಷ್ಣೇಗೌಡ ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.